ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಆಡಳಿತದಲ್ಲಿ ರಾಜ್ಯದಲ್ಲಿ 23 ಹಿಂದೂಗಳ ಹತ್ಯೆ: ಅರುಣ್ ಸಿಂಗ್

ಬಿಜೆಪಿ ರಾಜ್ಯ ಉಸ್ತುವಾರಿ
Last Updated 29 ಸೆಪ್ಟೆಂಬರ್ 2022, 13:23 IST
ಅಕ್ಷರ ಗಾತ್ರ

ಬೀದರ್: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ 23 ಹಿಂದೂಗಳ ಹತ್ಯೆಯಾಗಿದೆ. ಗೋ ಹತ್ಯೆ ಹಾಗೂ ಮಾಂಸ ಸೇವನೆ ಕುರಿತು ಅವರು ನೀಡಿರುವ ಹೇಳಿಕೆಗಳನ್ನು ರಾಜ್ಯದ ಜನ ಮರೆತಿಲ್ಲ. ಸಿದ್ದರಾಮಯ್ಯ ಆರ್‌ಎಸ್‌ಎಸ್‌ ನಿಷೇಧಿಸುವಂತೆ ಹೇಳುತ್ತಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

ಸಿದ್ದರಾಮಯ್ಯ ಭಾರತದ, ಕರ್ನಾಟಕದ ಸಂಸ್ಕೃತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ದೇಶದ ಸಂಸ್ಕೃತಿಯ ಅರಿವು ಇದ್ದಿದ್ದರೆ ವ್ಯತಿರಿಕ್ತವಾದ ಹೇಳಿಕೆಗಳನ್ನು ಕೊಡುತ್ತಿರಲಿಲ್ಲ. ಅಧಿಕಾರದ ದಾಹದಿಂದ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.

ರಾಹುಲ್ ಗಾಂಧಿ ನಾಯಕತ್ವವನ್ನು ಜನರೇ ತಿರಸ್ಕರಿಸಿದ್ದಾರೆ. ಕಾಂಗ್ರೆಸ್‌ ದೇಶದೆಲ್ಲಡೆ ಸೋಲು ಅನುಭವಿಸುತ್ತಿದೆ. ಕಾಂಗ್ರೆಸ್‌ ಈಗ ನಾಯಕರಿಲ್ಲದ ಪಕ್ಷವಾಗಿದೆ. ನಾವು ಏನೂ ಮಾಡುವ ಅಗತ್ಯವಿಲ್ಲ. ಕಾಂಗ್ರೆಸ್‌ನಲ್ಲಿ ಇರುವವರೇ ಭಾರತ ಜೋಡೋ ಬದಲು ಕಾಂಗ್ರೆಸ್‌ ತೋಡೋ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಆರೋಪ ಮಾಡಿದರು.

ಕರ್ನಾಟಕದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಮಧ್ಯೆಯೇ ಅಧಿಕಾರಕ್ಕಾಗಿ ಪೈಪೋಟಿ ನಡೆದಿದೆ. ಪಕ್ಷದ ಒಳಜಗಳಕ್ಕೂ ಕಾರಣವಾಗಿದೆ. ಕಾಂಗ್ರೆಸ್‌ನವರು ಎಷ್ಟೇ ಆರೋಪ ಮಾಡಿದರೂ ಕರ್ನಾಟಕದಲ್ಲಿ 150 ಸ್ಥಾನ ಪಡೆದು ಮುಂದೆಯೂ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಜಿಲ್ಲೆಯ ಬಿಜೆಪಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಪಶು ಸಂಗೋಪನೆ ಸಚಿವ ಪ್ರಭು ಚವಾಣ್‌ ಹಾಗೂ ಶಾಸಕ ಶರಣು ಸಲಗರ ನೇತೃತ್ವದಲ್ಲಿ ಮೂರು ಬಣಗಳಾಗಿವೆ. ಈ ನಾಯಕರ ಒಳಜಗಳ ಶಮನಗೊಳಿಸಲು ಪಕ್ಷ ಕ್ರಮ ಕೈಗೊಳ್ಳಲಿದೆಯೇ ಎನ್ನುವ ಪತ್ರಕರ್ತರ ಪ‌್ರಶ್ನೆಗೆ ಅರುಣಸಿಂಗ್ ಉತ್ತರ ನೀಡದೇ ಜಾರಿಕೊಂಡರು. ಎಲ್ಲ ಪಕ್ಷಗಳಲ್ಲೂ ಸಣ್ಣಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಸಮಸ್ಯೆ ಇದ್ದರೂ ಬಗೆಹರಿಸುತ್ತೇವೆ ಎಂದರು.

ಪಕ್ಷದ ಕಾರ್ಯಕ್ರಮದ ಬಗ್ಗೆ ಸರಿಯಾಗಿ ಮಾಹಿತಿ ನೀಡದೇ ಮುಖಂಡರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪತ್ರಕರ್ತರು ಬಿಜೆಪಿ ಕಾರ್ಯಕ್ರಮವನ್ನು ಬಹಿಷ್ಕರಿಸಲು ಮುಂದಾದರು. ಆಗ ಅರುಣ ಸಿಂಗ್‌ ಅವರು ಅದಕ್ಕೆ ಅವಕಾಶ ಮಾಡಿಕೊಡದೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಪಶು ಸಂಗೋಪನೆ ಸಚಿವ ಪ್ರಭು ಚವಾಣ್, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT