ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯಲ್ಲಿ ಎಂಜಿನಿಯರ್ ಸಾಧನೆ

ಬದನೆ, ದೊಣ್ಣೆ ಮೆಣಸಿನಕಾಯಿಯಿಂದ ಕೈತುಂಬ ಆದಾಯ
Last Updated 28 ಡಿಸೆಂಬರ್ 2019, 9:59 IST
ಅಕ್ಷರ ಗಾತ್ರ

ಬೀದರ್: ಎಂಜಿನಿಯರಿಂಗ್ ಪದವಿ ಮುಗಿಸಿ, ಪುಣೆಯಲ್ಲಿ ವಾಹನಗಳ ಬಿಡಿ ಭಾಗ ತಯಾರಿಕೆ ಕಂಪನಿ ನಡೆಸುತ್ತಿದ್ದ ಯುವಕರೊಬ್ಬರು ಸ್ವಗ್ರಾಮಕ್ಕೆ ಮರಳಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಯಶಸ್ಸು ಗಳಿಸಿದ ಕತೆ ಇದು.

ಆರು ವರ್ಷಗಳಿಂದ ತೋಟಗಾರಿಕೆ ಬೆಳೆ ಬೆಳೆಯುತ್ತಿರುವ ಭಾಲ್ಕಿ ತಾಲ್ಲೂಕಿನ ಸಂತೋಷ ವಿಲಾಸರಾವ್ ಪಾಟೀಲ ಈ ವರ್ಷ ಗ್ಯಾಲನ್ ತಳಿಯ ಬದನೆಕಾಯಿ ಹಾಗೂ ದೊಣ್ಣೆ ಮೆಣಸಿನಕಾಯಿ ಬೆಳೆದು ಐದು ತಿಂಗಳಲ್ಲೇ ₹ 6.5 ಲಕ್ಷ ಆದಾಯ ಪಡೆದುಕೊಂಡಿದ್ದಾರೆ. ಇನ್ನೂ ನಾಲ್ಕು ತಿಂಗಳ ಅವಧಿಯಲ್ಲಿ ₹11 ಲಕ್ಷ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

‘ನನ್ನ ತಂದೆಗೆ 18 ಎಕರೆ ಜಮೀನು ಇದೆ. ಐದು ತಿಂಗಳ ಹಿಂದೆ ತಲಾ ಒಂದೂವರೆ ಎಕರೆಯಲ್ಲಿ ಗ್ಯಾಲನ್ ತಳಿಯ ಬದನೆಕಾಯಿ ಹಾಗೂ ದೊಣ್ಣೆ ಮೆಣಸಿನಕಾಯಿ ಬೆಳೆದಿದ್ದೇನೆ. ಎರಡನ್ನೂ ಹೈದರಾಬಾದ್ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದೇನೆ. ಬದನೆಕಾಯಿಯಿಂದ ಈವರೆಗೆ ₹8 ಲಕ್ಷ ಹಾಗೂ ದೊಣ್ಣೆ ಮೆಣಸಿನಕಾಯಿಯಿಂದ ₹5 ಲಕ್ಷ ಬಂದಿದೆ. ₹6.5 ಲಕ್ಷ ಖರ್ಚು ಹೊರತುಪಡಿಸಿದರೆ ₹6.5 ಲಕ್ಷ ಆದಾಯ ಬಂದಿದೆ’ ಎಂದು ಸಂತೋಷ ಪಾಟೀಲ ತಿಳಿಸಿದರು.

‘ಎರಡೂ ಬೆಳೆಗಳನ್ನು ಚೆನ್ನಾಗಿ ನಿರ್ವಹಣೆ ಮಾಡಿದರೆ ಇನ್ನೂ ನಾಲ್ಕು ತಿಂಗಳ ಕಾಲ ಫಲ ಕೊಡಲಿದ್ದು, ಇನ್ನೂ ₹ 11 ಲಕ್ಷ ಆದಾಯ ಬರುವ ನಿರೀಕ್ಷೆ ಇದೆ’ ಎಂದು ಹೇಳಿದರು.

‘ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಿದ್ದೇನೆ. ಬೆಳೆಗಳಿಗೆ ಸಾವಯವ ಹಾಗೂ ರಾಸಾಯನಿಕ ಗೊಬ್ಬರ ಬಳಸಿದ್ದೇನೆ. ಹನಿ ನೀರಾವರಿ ಅಳವಡಿಸಿದ್ದರಿಂದ ನೀರಿನ ಉಳಿತಾಯ ಆಗಿದೆ’ ಎಂದು ತಿಳಿಸಿದರು.

‘ಎಂಜಿನಿಯರಿಂಗ್ ಮುಗಿಸಿದ ನಂತರ ಪುಣೆಯಲ್ಲಿ ವಾಹನಗಳ ಬಿಡಿ ಭಾಗ ತಯಾರಿಕೆ ಕಂಪನಿ ನಡೆಸಿದೆ. ನಂತರ ಕೃಷಿಯತ್ತ ಆಕರ್ಷಿತನಾದೆ. ಆರು ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಕೃಷಿ ಪ್ರತಿ ವರ್ಷ ಆದಾಯ ತಂದುಕೊಡುತ್ತಿರುವುದು ಉತ್ಸಾಹ ಇಮ್ಮಡಿಗೊಳಿಸಿದೆ. ಕಷ್ಟಪಟ್ಟು ದುಡಿದರೆ ಕೃಷಿಯಲ್ಲೂ ಕೈತುಂಬ ಆದಾಯ ಪಡೆಯಬಹುದು’ ಎಂದು 29 ವರ್ಷದ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT