ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಖೂಬಾನೋ, ಖಂಡ್ರೆಯೋ? ಯಾರಿಗೆ ಮಂಗಳವಾರ ಮಂಗಳ?

ಬೀದರ್‌ ಲೋಕಸಭಾ ಕ್ಷೇತ್ರದ ಮತ ಎಣಿಕೆ; ಇಂದು ಗೊತ್ತಾಗಲಿದೆ ಅಭ್ಯರ್ಥಿಗಳ ಭವಿಷ್ಯ
Published 4 ಜೂನ್ 2024, 4:27 IST
Last Updated 4 ಜೂನ್ 2024, 4:27 IST
ಅಕ್ಷರ ಗಾತ್ರ

ಬೀದರ್‌: ಬೀದರ್‌ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಮಂಗಳವಾರ (ಜೂನ್‌ 4) ನಡೆಯಲಿದ್ದು, ನಗರದ ಮನ್ನಳ್ಳಿ ರಸ್ತೆಯಲ್ಲಿರುವ ಬಿ.ವಿ. ಭೂಮರಡ್ಡಿ ಕಾಲೇಜಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲರ ಚಿತ್ತ ಈಗ ಫಲಿತಾಂಶದ ಮೇಲೆ ನೆಟ್ಟಿದೆ.

ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಸೋಮವಾರ ಮಧ್ಯಾಹ್ನ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ, ಕೊನೆಯ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು.

ಮತ ಎಣಿಕೆ ಕೇಂದ್ರದೊಳಗೆ ಅಭ್ಯರ್ಥಿಗಳು, ಏಜೆಂಟರು ಹಾಗೂ ಪತ್ರಕರ್ತರು ಪ್ರವೇಶಿಸುವ ಮಾರ್ಗ, ಅಂಚೆ ಮತ ಪತ್ರಗಳು ಹಾಗೂ ವಿದ್ಯುನ್ಮಾನ ಮತಯಂತ್ರಗಳಲ್ಲಿನ ಮತಗಳ ಎಣಿಕೆಗೆ ಸಂಬಂಧಿಸಿದಂತೆ ಮಾಡಿಕೊಂಡಿರುವ ಸಿದ್ಧತೆ ಪರಿಶೀಲಿಸಿದರು. ಪ್ರಮುಖ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಖುದ್ದಾಗಿ ಪರಿಶೀಲಿಸಿ, ಸಣ್ಣಪುಟ್ಟ ಬದಲಾವಣೆಗೆ ನಿರ್ದೇಶನ ನೀಡಿದರು. ಭದ್ರತೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪೊಲೀಸ್‌ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬೀದರ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ 14 ಟೇಬಲ್‌ಗಳಲ್ಲಿ, ಒಟ್ಟು 20 ಸುತ್ತುಗಳಲ್ಲಿ ನಡೆಯಲಿದೆ. ಬೆಳಿಗ್ಗೆ 7.15ಕ್ಕೆ ಜಿಲ್ಲಾ ಚುನಾವಣಾಧಿಕಾರಿ, ಚುನಾವಣಾ ವೀಕ್ಷಕ, ಆಯಾ ಪಕ್ಷಗಳ ಅಭ್ಯರ್ಥಿಗಳು, ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್‌ ರೂಮ್‌ ತೆರೆಯಲಾಗುತ್ತದೆ. ಬೆಳಿಗ್ಗೆ 8ಕ್ಕೆ ಅಂಚೆ ಮತಪತ್ರಗಳ ಎಣಿಕೆ ಆರಂಭವಾಗಲಿದೆ. ಅದಾದ ಐದು ನಿಮಿಷಗಳ ನಂತರ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮತ ಎಣಿಕೆ ಶುರುವಾಗಲಿದೆ. ಪ್ರತಿ ಸುತ್ತಿನ ಮತ ಎಣಿಕೆಗೆ 15ರಿಂದ 20 ನಿಮಿಷ ಅವಧಿ ಬೇಕಾಗಲಿದ್ದು, ಮಧ್ಯಾಹ್ನ 1ರ ತನಕ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.

ಖೂಬಾನೋ? ಖಂಡ್ರೆಯೋ?: ಬೀದರ್‌ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು 18 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆದರೆ, ಹಾಲಿ ಬಿಜೆಪಿ ಸಂಸದರೂ ಆದ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರ ಮಗ ಸಾಗರ್‌ ಖಂಡ್ರೆ ನಡುವೆ ನೇರ ಹಣಾಹಣಿ ನಡೆದಿದೆ. ಯಾರಿಗೆ ವಿಜಯಮಾಲೆ ಸಿಗಲಿದೆ? ಬೀದರ್‌ ಕೋಟೆ ಯಾರ ಕೈವಶವಾಗಲಿದೆ ಎನ್ನುವುದು ಮಂಗಳವಾರ ಗೊತ್ತಾಗಲಿದೆ. ಮಂಗಳವಾರ ಯಾರ ಪಾಲಿಗೆ ಮಂಗಳಕರವಾಗಲಿದೆ ಎನ್ನುವುದು ನಿರ್ಧಾರವಾಗಲಿದೆ.

ಖೂಬಾ ಅವರು ಸಂಪೂರ್ಣವಾಗಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ನೆಚ್ಚಿಕೊಂಡು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇನ್ನು, ಮಗನ ಪರ ಈಶ್ವರ ಬಿ. ಖಂಡ್ರೆಯವರು ಸಾಕಷ್ಟು ಬೆವರು ಹರಿಸಿ, ಸಾಮಾಜಿಕ ನ್ಯಾಯ ಹಾಗೂ ಗ್ಯಾರಂಟಿಗಳ ಹೆಸರಿನಲ್ಲಿ ಮತಯಾಚಿಸಿದ್ದಾರೆ. ಇಬ್ಬರೂ ಸಚಿವರು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಅಂತಿಮವಾಗಿ ಮತದಾರ ಯಾರಿಗೆ ಆಶೀರ್ವದಿಸಲಿದ್ದಾನೆ ಎನ್ನುವುದು ಮಂಗಳವಾರ ಮಧ್ಯಾಹ್ನ 12ರಿಂದ 1 ಗಂಟೆಯೊಳಗೆ ಗೊತ್ತಾಲಿಗದೆ.

ಅಂಚೆ ಮತ ಪತ್ರಗಳನ್ನು ಯಾವ ರೀತಿ ಜೋಡಿಸಿಕೊಂಡು ಎಣಿಕೆ ಮಾಡಬೇಕೆಂದು ಮತ ಎಣಿಕೆ ಸಿಬ್ಬಂದಿಗೆ ಸಲಹೆ ಮಾಡಿದ ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ
ಅಂಚೆ ಮತ ಪತ್ರಗಳನ್ನು ಯಾವ ರೀತಿ ಜೋಡಿಸಿಕೊಂಡು ಎಣಿಕೆ ಮಾಡಬೇಕೆಂದು ಮತ ಎಣಿಕೆ ಸಿಬ್ಬಂದಿಗೆ ಸಲಹೆ ಮಾಡಿದ ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ

ಬೀದರ್‌ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಎಲ್ಲ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತದಾನದಂತೆ ಮತ ಎಣಿಕೆಯೂ ಸುಸೂತ್ರವಾಗಿ ನಡೆಯಲಿದೆ.

-ಗೋವಿಂದ ರೆಡ್ಡಿ ಜಿಲ್ಲಾ ಚುನಾವಣಾಧಿಕಾರಿ ಬೀದರ್‌

ಶೇ 65.45ರಷ್ಟು ಮತದಾನ ಮೇ 7ರಂದು ಬೀದರ್‌ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಶೇ 65.45ರಷ್ಟು ಮತದಾನವಾಗಿತ್ತು. ಅತಿ ಹೆಚ್ಚು ಮತದಾನ ಶೇ 7.05ರಷ್ಟು ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಾಗಿತ್ತು. ಬೀದರ್‌ನಲ್ಲಿ 65.30 ಬೀದರ್‌ ದಕ್ಷಿಣದಲ್ಲಿ 69.80 ಬಸವಕಲ್ಯಾಣದಲ್ಲಿ 63.53 ಹುಮನಾಬಾದ್‌ನಲ್ಲಿ 66.28 ಔರಾದ್‌ನಲ್ಲಿ 66.94 ಆಳಂದನಲ್ಲಿ 59.06 ಹಾಗೂ ಚಿಂಚೋಳಿಯಲ್ಲಿ ಶೇ 63.33ರಷ್ಟು ಮತದಾನವಾಗಿತ್ತು. 2019ರಲ್ಲಿ ನಡೆದ ಮತದಾನಕ್ಕಿಂತ ಶೇ 2ರಷ್ಟು ಹೆಚ್ಚು ಮತದಾನವಾಗಿದೆ.

ಮತ ಎಣಿಕೆಗೆ 750 ಸಿಬ್ಬಂದಿ ಭದ್ರತೆಗೆ 700 ಪೊಲೀಸರು ಮತ ಎಣಿಕೆ ಕಾರ್ಯದಲ್ಲಿ 750 ಜನ ಪಾಲ್ಗೊಳ್ಳುವರು. ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವರ್ಗವನ್ನು ನಿಯೋಜಿಸಲಾಗಿದೆ. ಇನ್ನು ಮತ ಎಣಿಕೆ ಕೇಂದ್ರ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ 700 ಪೊಲೀಸರನ್ನು ಭದ್ರತೆಗೆ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾ ಆಯೋಗ ತಿಳಿಸಿದೆ.

ರೌಡಿಶೀಟರ್‌ಗಳಿಗೆ ಎಚ್ಚರಿಕೆ ‘ಮತ ಎಣಿಕೆಗೆ ಸಂಬoಧಿಸಿದಂತೆ ಬೀದರ್ ಜಿಲ್ಲೆಯ ಸುಮಾರು 132 ಜನ ರೌಡಿ ಶೀಟರ್‌ಗಳ ಮನೆಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ಶಾಂತಿ ಸುವವ್ಯವಸ್ಥೆಗೆ ಭಂಗ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದ್ದಾರೆ.

14 ಟೇಬಲ್‌ 20 ಸುತ್ತುಗಳಲ್ಲಿ ಎಣಿಕೆ * ಒಟ್ಟು 14 ಟೇಬಲ್‌ಗಳಲ್ಲಿ ಮತ ಎಣಿಕೆ * ಒಟ್ಟು 20 ಸುತ್ತುಗಳಲ್ಲಿ ಮತ ಎಣಿಕೆ * ಅಭ್ಯರ್ಥಿಗಳು ಏಜೆಂಟರಿಗೆ ಪ್ರತ್ಯೇಕ ಪ್ರವೇಶ ದ್ವಾರ * ಮತ ಎಣಿಕೆ ಸಿಬ್ಬಂದಿ ಪತ್ರಕರ್ತರಿಗೆ ಎರಡನೇ ಪ್ರವೇಶ ದ್ವಾರದಲ್ಲಿ ಪ್ರವೇಶ * ಐ.ಡಿ. ಕಾರ್ಡ್‌ ಇದ್ದವರಿಗಷ್ಟೇ ಪ್ರವೇಶ ಮೊಬೈಲ್‌ ನಿಷೇಧ * ಮೈಲೂರ್‌ ಕ್ರಾಸ್‌ನಿಂದ ಬಿ.ವಿ.ಬಿ.ಕಾಲೇಜು ರಸ್ತೆಯಲ್ಲಿ ಪ್ರವೇಶ ನಿರ್ಬಂಧ * ಶಾಂತಿಯುತ ವಿಜಯೋತ್ಸವಕ್ಕೆ ಅವಕಾಶ

ಮತ ಎಣಿಕೆ ಪ್ರಕ್ರಿಯೆ ಹೇಗಿರಲಿದೆ? ಬೆಳಿಗ್ಗೆ 7.15ಕ್ಕೆ ಸ್ಟ್ರಾಂಗ್‌ ರೂಮ್‌ ಓಪನ್‌ ಬೆಳಿಗ್ಗೆ 7.20ಕ್ಕೆ ಅಂಚೆ ಮತಪತ್ರಗಳ ಕೋಣೆ ಓಪನ್‌ ಬೆಳಿಗ್ಗೆ 7.30ಕ್ಕೆ ಇವಿಎಂ ಕೊಠಡಿಗಳು ಓಪನ್‌ ಬೆಳಿಗ್ಗೆ7.30ಕ್ಕೆ ಬೀದರ್‌ ಕ್ಷೇತ್ರದ ಇವಿಎಂ ಕೊಠಡಿ ಓಪನ್‌ ಬೆಳಿ್ಗೆ 7.35ಕ್ಕೆ ಔರಾದ್‌ ವಿಧಾನಸಭಾ ಕ್ಷೇತ್ರ ಬೆಳಿಗ್ಗೆ 7.40ಕ್ಕೆ ಭಾಲ್ಕಿ ವಿಧಾನಸಭಾ ಕ್ಷೇತ್ರ ಬೆಳಿಗ್ಗೆ 7.45ಕ್ಕೆ ಹುಮನಾಬಾದ್‌ ವಿಧಾನಸಭಾ ಕ್ಷೇತ್ರ ಬೆಳಿಗ್ಗೆ 7.50ಕ್ಕೆ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಬೆಳಿಗ್ಗೆ 7.55ಕ್ಕೆ ಆಳಂದ ವಿಧಾನಸಭಾ ಕ್ಷೇತ್ರ ಬೆಳಿಗ್ಗೆ 7.58ಕ್ಕೆ ಚಿಂಚೋಳಿ ವಿಧಾನಸಭಾ ಕ್ಷೇತ್ರ ಬೆಳಿಗ್ಗೆ 8ಕ್ಕೆ ಅಂಚೆ ಮತಗಳ ಎಣಿಕೆ ಆರಂಭ ಬೆಳಿಗ್ಗೆ 8.05ಕ್ಕೆ ಇವಿಎಂಗಳ ಮತ ಎಣಿಕೆ ಪ್ರಾರಂಭ ಮಧ್ಯಾಹ್ನ 12ರಿಂದ 1ಕ್ಕೆ ಫಲಿತಾಂಶ ಹೊರಬೀಳಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT