ಭಾನುವಾರ, ಜೂನ್ 26, 2022
22 °C
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಭಿಮತ

ಧರ್ಮಗಳಿಗಿಂತ ಸಂವಿಧಾನವೇ ಶ್ರೇಷ್ಠ: ಈಶ್ವರ ಖಂಡ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ‘ಧರ್ಮಗಳಿಗಿಂತ ಸಂವಿಧಾನವೇ ಸರ್ವ ಶ್ರೇಷ್ಠ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.

ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಜ್ಯೋತಿಬಾ ಫುಲೆ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ ಜಯಂತಿ ಅಂಗವಾಗಿ ಸೋಮವಾರ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಡಾ.ಅಂಬೇಡ್ಕರ್ ಅವರು ಎಲ್ಲ ಧರ್ಮಗಳ ಕುರಿತು ಅಧ್ಯಯನ ಮಾಡಿ ಸಮಸ್ತ ಮಾನವ ಕುಲಕ್ಕೆ ನ್ಯಾಯ ಸಿಗಲಿ ಎನ್ನುವ ಉದ್ದೇಶದಿಂದ ಸಂವಿಧಾನ ರಚಿಸಿದ್ದಾರೆ. ಹೀಗಾಗಿ ಭಾರತೀಯರಿಗೆ ಸಂವಿಧಾನವೇ ಸರ್ವಶ್ರೇಷ್ಠ’ ಎಂದು ತಿಳಿಸಿದರು.

‘ಈ ದೇಶದಲ್ಲಿ ಆಗಿ ಹೋದ ಮಹಾತ್ಮರು ಮಾನವನ ಏಳಿಗೆಗಾಗಿ ಅನೇಕ ವಿಚಾರ ಬಿಟ್ಟುಹೋಗಿದ್ದಾರೆ. ಅಂಥ ತತ್ವಾದರ್ಶವನ್ನು ನಾವು ನಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡುವ ಮೂಲಕ ಅವರನ್ನು ಉತ್ತಮ ನಾಗರಿಕರಾಗಿ ಮಾಡಬೇಕು’ ಎಂದು ಹೇಳಿದರು.

ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಎಲ್ಲ ಧರ್ಮ, ಜಾತಿ ಸಮುದಾಯದ ಜನರಿಗೆ ಸಮಾನ ಹಕ್ಕು ಹಾಗೂ ಅವಕಾಶವಿದೆ. ಆದರೆ ಇಲ್ಲಿ ಧರ್ಮಗಳ ನಡುವೆ ಕಿಚ್ಚು ಹಚ್ಚುವ ಕೆಲಸ ನಡೆಯುತ್ತಿದೆ. ಇಲ್ಲಿ ಒಂದು ಧರ್ಮವನ್ನು ಗುರಿ ಮಾಡಿ ಮಾಡುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ನಾವೆಲ್ಲ ಇಂತಹದಕ್ಕೆ ಅವಕಾಶ ನೀಡದೆ ಒಗ್ಗಟ್ಟಾಗಬೇಕು. ಪ್ರಜಾಪ್ರಭುತ್ವ ವಿರೋಧಿಗಳಿಗೆ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು’ ಎಂದರು.

‘ಇಂದು ಇಲ್ಲಿ ಮಹಾತ್ಮರ ಹೆಸರಿನಲ್ಲಿ ರಕ್ತದಾನ ಶಿಬಿರ ನಡೆಯುತ್ತಿರುವುದು ಬಹಳ ಸಂತಸದ ಸಂಗತಿ. ನೂರಾರು ಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದೆ ಬರುತ್ತಿದ್ದಾರೆ. ನಿಜವಾದ ಸಾಮಾಜಿಕ ಕಳಕಳಿವುಳ್ಳವರು ಇವರು’ ಎಂದು ರಕ್ತದಾನ ಮಾಡಲು ಬಂದ ಯುವಕರಿಗೆ ಬೆನ್ನು ತಟ್ಟಿ ಅಭಿನಂದಿಸಿದರು.

ಕಾರ್ಯಕ್ರಮ ಆಯೋಜಿಸಿದ್ದ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ ಬಂಟಿ ದರಬಾರೆ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ, ಮುಖಂಡ ಚಂದ್ರಕಾಂತ ಹಿಪ್ಪಳಗಾವೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾಗ ಹಲಬರ್ಗೆ, ಆನಂದ ಚವಾಣ್, ಬಸವರಾಜ ದೇಶಮುಖ, ಬಾಬುರಾವ ತಾರೆ, ಬಾಬುರಾವ ದರಬಾರೆ, ರಾಮಣ್ಣ ವಡೆಯರ್, ಭೀಮಸೇನರಾವ ಸಿಂಧೆ, ಸಾಲೋಮನ್ ಮಹಿಮಾಕರ, ಡಾ. ಮಹೇಶ ಫುಲಾರಿ, ಬಾಲಾಜಿ ಮಿತಬಾ, ಸ್ವಾಮಿದಾಸ ಮೇಘಾ, ರತ್ನದೀಪ ಕಸ್ತೂರೆ ಹಾಗೂ ಪ್ರಶಾಂತ ದರ್ಬಾರೆ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು