ಶನಿವಾರ, ಅಕ್ಟೋಬರ್ 1, 2022
20 °C
1903ರಲ್ಲಿ ಶಾಲೆ ಆರಂಭಿಸಿ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಕ್ರೈಸ್ತ ಮಿಷನರಿ

ಬೀದರ್‌: ಹಲವು ದಾಖಲೆ ಬರೆದ ನಾರ್ಮಾ ಫೆಂಡ್ರಿಚ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ನಾರ್ಮಾ ಫೆಂಡ್ರಿಚ್ ಕ್ರೈಸ್ತ ಮಿಷನರಿ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ 125 ವರ್ಷಗಳು ಸಂದಿವೆ. ಜಿಲ್ಲೆಯಲ್ಲಿ ಹಲವು ಪ್ರಥಮ ದಾಖಲೆ ಬರೆದ ಮಿಷನರಿ ಶಾಲೆಗಳು ಪ್ರಸ್ತುತ ಶತಮಾನೋತ್ಸವ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಒಟ್ಟಿಗೆ ಆಚರಿಸುತ್ತಿವೆ.

ಜಿಲ್ಲೆಯಲ್ಲಿ ಮೊದಲ ಶಾಲೆ 1903ರಲ್ಲಿ ಬೀದರ್‌ನ ಮಂಗಲಪೇಟೆಯಲ್ಲಿ ಆರಂಭವಾಯಿತು. ನಾರ್ಮಾ ಫೆಂಡ್ರಿಚ್ ಕ್ರೈಸ್ತ ಮಿಷನರಿ 1903ರಲ್ಲಿ ಬಾಲಕರ ಕನ್ನಡ ಮಾಧ್ಯಮ ಶಾಲೆ ಆರಂಭಿಸಿತು. 1908ರಲ್ಲಿ ಹತ್ತು ಬಾಲಕಿಯರಿಗೆ ಉಚಿತ ಪ್ರವೇಶ ನೀಡಿ, ಮೊದಲ ಬಾಲಕಿಯರ ಪ್ರಾಥಮಿಕ ಶಾಲೆಯನ್ನೂ ಪ್ರಾರಂಭಿಸಲಾಯಿತು.

 ಎನ್.ಎಫ್.ಶಾಲೆಯ ಮೊದಲ ಮುಖ್ಯ ಶಿಕ್ಷಕಿ ಮಿಸ್ ನಾರ್ಮಾ ಫೆಂಡ್ರಿಚ್ ಅವರು 1908ರಲ್ಲಿ ಲಕ್ಷ್ಮಿಬಾಯಿ ನರಸಪ್ಪ ಅಗಸಲಗೇರಿಗೆ ಮೊದಲ ಪ್ರವೇಶ ನೀಡಿದ ದಾಖಲೆ ಶಾಲೆಯಲ್ಲಿದೆ. ಬಡ ಮಕ್ಕಳಿಗಾಗಿ ವಸತಿ ಸಹಿತ ಶಾಲೆ ಆರಂಭಿಸಿ ವಿದ್ಯಾದಾನ ಮಾಡಿದ ಕೀರ್ತಿ ‘ನಾರ್ಮಾ ಫೆಂಡ್ರಿಚ್‘ ಮಿಷನರಿಗೆ ಸಲ್ಲುತ್ತದೆ.

1908ರಲ್ಲಿ ಕಾಲರಾ ಹಾಗೂ ಸಿಡುಬು ರೋಗದಿಂದ ತಂದೆ–ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳ ನೆರವಿಗಾಗಿ 1910ರಲ್ಲಿ ಮಂಗಲಪೇಟೆಯಲ್ಲಿ ಮಕ್ಕಳ ವಸತಿ ಶಾಲೆ ಆರಂಭಿಸಿತು. ಅದೇ ವರ್ಷ ಬೀದರ್‌ನ ನಾವದಗೇರಿ ಮತ್ತು ಜನವಾಡದಲ್ಲಿ ಕನ್ನಡ ಮಾಧ್ಯಮ ಶಾಲೆ ಶುರು ಮಾಡಿತು. ಸಾಮಾಜಿಕ ವ್ಯವಸ್ಥೆಯಲ್ಲಿ ಆಗ ಜಾರಿಯಲ್ಲಿದ್ದ ಬಾಲ್ಯವಿವಾಹ ಮತ್ತು ವಿಧವೆಯರ ದುಸ್ಥಿತಿ ಅರಿತು ಐವರು ವಿಧವೆಯರ ಶಿಕ್ಷಣಕ್ಕೂ ವ್ಯವಸ್ಥೆ ಮಾಡಿದ ದಾಖಲೆಗಳು ಇಂದಿಗೂ ಲಭ್ಯ ಇವೆ.

ಕ್ರೈಸ್ತ ಮಿಷನರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರಿಗೆ ಆರಂಭದ ದಿನಗಳಲ್ಲಿ ಇಂಗ್ಲಿಷ್‌ ಬಿಟ್ಟು ಬೇರೆ ಭಾಷೆ ಸುಲಲಿತವಾಗಿ ಬರುತ್ತಿರಲಿಲ್ಲ. ಆದರೆ, ಇಲ್ಲಿ ನೆಲೆಸಿ ಅವರೆಲ್ಲ ಕನ್ನಡ ಕಲಿತರು. ಗುಣಮಟ್ಟದ ಶಿಕ್ಷಣ ಕೊಡಲು ದೂರದ ಬೆಂಗಳೂರು,  ಕೋಲಾರದ ಶಿಕ್ಷಕರನ್ನು ನೇಮಿಸಿಕೊಂಡರು. ಮುಂದೆ ಮಿಷನರಿಗಳಲ್ಲಿ ಇದ್ದವರೇ ಕನ್ನಡ ಕಲಿತು, ಮಕ್ಕಳಿಗೆ ಶಿಕ್ಷಣ ನೀಡಿದರು.

ಎಲಿಜಾಬೆತ್‌ ಬಿ ಅವರು 1912ರಲ್ಲಿ ಶಾಲೆಗೆ ಸುಸಜ್ಜಿತ ಕಟ್ಟಡಕ್ಕೆ ಅಡಿಪಾಯ ಹಾಕಿಸಿದರು. ಮಕ್ಕಳಿಗೆ ಕನ್ನಡ, ನೈಸರ್ಗಿಕ ಶಿಕ್ಷಣ ಪದ್ಧತಿ, ಇತಿಹಾಸ, ಭೂಗೋಳ, ತೋಟಗಾರಿಕೆ, ಹೊಲಿಗೆ, ಬಡಿಗ, ಗೃಹ ವಿಜ್ಞಾನ, ಕಸೂತಿ, ನರ್ಸಿಂಗ್ ಬೋಧಿಸಲು ವ್ಯವಸ್ಥೆ ಮಾಡಿದರು.

1914ರ ಮೊದಲ ಜಾಗತಿಕ ಮಹಾಯುದ್ಧದ ವೇಳೆ ಪೆನ್ನಿ ಫರ್ನ್ ಫಿಷರ್ ಮಿಷನರಿ ಬೀದರ್‌ಗೆ ಬಂದು ಮಕ್ಕಳಿಗೆ ಶಾಸನಗಳ ಪರಿಚಯ ಮಾಡಿ ಇತಿಹಾಸ ಬೋಧಿಸಿತು. ಮಕ್ಕಳ ಮನಶಾಸ್ತ್ರಜ್ಞ ಮಿಸ್ ಮಿಲ್ಲರ್ ಅವರು 1916ರಲ್ಲಿ ಮೊದಲ ಬಾರಿಗೆ ಮನೋವಿಜ್ಞಾನ ವಿಷಯ ಪರಿಚಯಿಸಿದರು. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಸಿದ ನಂತರ ಮಿಷನರಿಯು 1939ರಲ್ಲಿ ಪ್ರೌಢ ಶಿಕ್ಷಣ ಶಾಲೆ ಪ್ರಾರಂಭಿಸಿತು.

ಅಂದಿನ ಪ್ರಾಚಾರ್ಯೆ ಆ್ಯಡಾ ಲೂಕ್ ಶೈಕ್ಷಣಿಕ ಶಿಸ್ತು ಮತ್ತು ಆಡಳಿತ ವ್ಯವಸ್ಥೆ ಬಲಗೊಳಿಸಿದರು. ಒಂದೇ ಶಾಲೆಯಲ್ಲಿ ಬಾಲಕರು ಮತ್ತು ಬಾಲಕಿಯರಿಗೆ ಬೋಧನೆ ಶುರು ಮಾಡಲಾಯಿತು. 1942-43ರಲ್ಲಿ ಬಾಲಕ–ಬಾಲಕಿಯರ ಸಹ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಲಾಯಿತು.

ಶಾಲೆಗೆ ಕನ್ನಡ ಪತ್ರಿಕೆಗಳನ್ನು ತರಿಸಿ ಕಡ್ಡಾಯವಾಗಿ ಮಕ್ಕಳಿಂದ ಓದಿಸಲಾಗುತ್ತಿತ್ತು. ಸುಸಜ್ಜಿತ ಕಟ್ಟಡ, ವಸತಿ ಶಾಲೆ, ಊಟ ಮತ್ತು ಶೈಕ್ಷಣಿಕ ಶಿಸ್ತಿನೊಂದಿಗೆ ಅಗಾಧವಾಗಿ ಬೆಳೆಯಿತು. ಉಚಿತ ಊಟ, ವಸತಿ ಹಾಗೂ ಶಿಕ್ಷಣ ನೀಡಿದ್ದು ಶಾಲೆಯ ಹಿರಿಮೆಯಾಗಿದೆ. ಈ ಶಾಲೆಯಲ್ಲಿ 1903 ರಿಂದ ಈವರೆಗೆ ಎರಡೂವರೆ ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ.

ಇಲ್ಲಿನ ಹಲವು ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಐಎಫ್‍ಎಸ್ ಅಧಿಕಾರಿಗಳಾಗಿ ದ್ದಾರೆ. ಜಿಲ್ಲಾಧಿಕಾರಿಯಾಗಿದ್ದ ಡಿ.ಮಂಜುನಾಥ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ವಿಜಯ ಸಾಸನೂರು, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಬಸವರಾಜ ನೇಳಗೆ ಇದೇ ಶಾಲೆಯ ವಿದ್ಯಾರ್ಥಿಗಳು. ರಾಜಕೀಯ ಕ್ಷೇತ್ರದಲ್ಲೂ ಇಲ್ಲಿನ ವಿದ್ಯಾರ್ಥಿಗಳು ಪ್ರತಿಭೆ ಮೆರೆದಿದ್ದಾರೆ. ಈಗಿನ ಶಾಸಕರಾದ ಬಂಡೆಪ್ಪ ಕಾಶೆಂಪೂರ ಮತ್ತು ರಹೀಂ ಖಾನ್‌ ಇದೇ ಶಾಲೆಯ ವಿದ್ಯಾರ್ಥಿಗಳು. ಇಬ್ಬರೂ ಸಚಿವರಾಗಿದ್ದರು.

ಶಿಕ್ಷಣ ಸಂಸ್ಥೆ ಪ್ರಾಥಮಿಕ, ಪ್ರೌಢ, ಪಿಯುಸಿ ಮತ್ತು ಪದವಿಯವರೆಗೆ ಇಂದಿಗೂ ಉಚಿತ ಶಿಕ್ಷಣ ನೀಡುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದ ಪ್ರಯುಕ್ತ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಶಾಲೆಯ ಶತಮಾನೋತ್ಸವ ಸಂಭ್ರಮದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಮೆರುಗು ಇಮ್ಮಡಿ ಗೊಳಿಸಿದೆ.

‘ನಾರ್ಮಾ ಫೆಂಡ್ರಿಚ್ ಕ್ರೈಸ್ತ ಮಿಷನರಿ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದೆ. ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಜ್ಞಾನ ಬೀಜ ಬಿತ್ತಿದೆ. ಅದರ ಸವಿ ನೆನಪಿನಲ್ಲಿ ಶಾಲೆಯಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎನ್ನುತ್ತಾರೆ ನಾರ್ಮಾ ಫೆಂಡ್ರಿಚ್ ಸಂಸ್ಥೆಯ ಚೇರಮನ್‌ ನೆಲ್ಸನ್‌ ಸುಮಿತ್ರಾ.

‘ಸ್ವಾತಂತ್ರ್ಯ ಪೂರ್ವ ಮತ್ತು ನಂತರವೂ ನಾರ್ಮಾ ಫೆಂಡ್ರಿಚ್ ಶಾಲೆಗಳು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ಪ್ರಸ್ತುತ ಇಲ್ಲಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ಇವೆ. ನಾರ್ಮಾ ಫೆಂಡ್ರಿಚ್ ಮಿಷನರಿ ಎಲ್ಲ ಧರ್ಮ, ಜಾತಿಯ ಮಕ್ಕಳಿಗೆ ಶಿಕ್ಷಣ ನೀಡಿರುವುದು ಅಭಿಮಾನದ ಸಂಗತಿ’ ರೆವರೆಂಡ್‌ ಡಿ.ಜೆ.ಟಿ. ಸೀಮಂಡ್ಸ್‌ ಕನ್ನಡ ಸಾಹಿತ್ಯ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಂ.ಮಚ್ಚೆ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು