ಭಾನುವಾರ, ಮಾರ್ಚ್ 7, 2021
32 °C
ವಚನ ಸಾಹಿತ್ಯ, ಸಂವಿಧಾನ ಸಂರಕ್ಷಣಾ ಸಮಾವೇಶದಲ್ಲಿ ಸಿದ್ದರಾಮಯ್ಯ ತೀವ್ರ ಆಕ್ಷೇಪ

ಅನುಭವ ಮಂಟಪ– ಸನಾತನಕ್ಕೂ ಸಂಬಂಧವಿಲ್ಲ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ‘ಅನುಭವ ಮಂಟಪ ಹಾಗೂ ಸನಾತನ ಧರ್ಮಕ್ಕೆ ಸಂಬಂಧವಿಲ್ಲ. ಆದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸನಾತನ ಅನುಭವ ಮಂಟಪದ ಮರುಸೃಷ್ಟಿ ಮಾಡುತ್ತಿರುವುದಾಗಿ ಜಾಹೀರಾತು ನೀಡಿ ಈಚೆಗೆ ಇಲ್ಲಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇಲ್ಲಿನ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಸಂವಿಧಾನ ಸಂರಕ್ಷಣಾ ಹಾಗೂ ವಚನ ಸಾಹಿತ್ಯ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಬಸವಣ್ಣನವರು ಸನಾತನ ಧರ್ಮಕ್ಕೆ ವಿರೋಧವಾಗಿದ್ದರು. ಮೂಢನಂಬಿಕೆ, ಕಂದಾಚಾರ ರಹಿತವಾದ ಮನುಷ್ಯತ್ವಕ್ಕೆ ಮಹತ್ವ ನೀಡುವ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಎಲ್ಲರನ್ನೂ ಇವನಮ್ಮವ ಇವನಮ್ಮವ ಎಂದು ಭಾವಿಸಿದರು. ಜಾತಿಗಳನ್ನು ಒಡೆಯಲಿಲ್ಲ. ನಾನೂ ಅವರ ಪಕ್ಕಾ ಅನುಯಾಯಿ ಆಗಿದ್ದೇನೆ. ಆದರೂ, ಕೆಲವರು ಸಿದ್ದರಾಮಯ್ಯ ಲಿಂಗಾಯತ ಮತ್ತು ವೀರಶೈವವೆಂದು ಧರ್ಮವನ್ನು ಒಡೆಯುತ್ತಿದ್ದಾರೆ ಎಂಬ ಅಪಪ್ರಚಾರ ನಡೆಸಿದರು. ಈಗ ನಾವೇ ಅನುಭವ ಮಂಟಪ ಕಟ್ಟುತ್ತೇವೆ ಎನ್ನುತ್ತಿದ್ದಾರೆ. ಮುಖ್ಯಮಂತ್ರಿಯವರೇ ಸ್ವತಃ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಸ್ಪಷ್ಟಪಡಿಸಿದ್ದು ಮಂಟಪ ನಿರ್ಮಾಣಕ್ಕೆ ಎಲ್ಲಿಂದ ಹಣ ತರುತ್ತಾರೆ’ ಎಂದು ಪ್ರಶ್ನಿಸಿದರು.

‘ಅನುಭವ ಮಂಟಪ ನಿರ್ಮಾಣದ ರೂಪುರೇಷೆ ಸಿದ್ಧಪಡಿಸಲು ಗೋ.ರು.ಚನ್ನಬಸಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚನೆಯಾದದ್ದು ನಾನು ಮುಖ್ಯಮಂತ್ರಿ ಆಗಿದ್ದಾಗ ಎಂಬುದನ್ನು ನೆನಪಿಟ್ಟುಕೊಳ್ಳಿ. ಮಂಟಪ ನಿರ್ಮಾಣಕ್ಕಾಗಿ ಇಲ್ಲಿನ ಶಾಸಕರಾಗಿದ್ದ ದಿ.ಬಿ.ನಾರಾಯಣರಾವ್ ಅವರು ಪದೇ ಪದೇ ಒತ್ತಾಯಿಸಿದ್ದರು’ ಎಂದು ಸ್ಮರಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ‘ದೇಶದಲ್ಲಿ ಹಿಟ್ಲರ್ ಶಾಹಿ ಇರುವುದರಿಂದ ಅರಾಜಕತೆ ತಾಂಡವವಾಡುತ್ತಿದೆ. ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳು ಜಾರಿಯಾಗಿವೆ. ಸಂವಿಧಾನ ಬದಲಾವಣೆಗೆ ಪ್ರಯತ್ನಿ ಸುತ್ತಿರುವುದು ಸರಿಯಲ್ಲ’ ಎಂದರು.

ಹೈಕೋರ್ಟ್ ವಕೀಲ ಮಹಿಮೂದ್‌ ಪರಾಚಾ, ಪುಣೆಯ ಸುಷ್ಮಾತಾಯಿ ಅಂಧಾರೆ, ಶಾಸಕ ರಾಜಶೇಖರ ಪಾಟೀಲ, ಪ್ರಮುಖರಾದ ಆನಂದ ದೇವಪ್ಪ, ಅರ್ಜುನ ಕನಕ, ಮುಜಾಹಿದಪಾಶಾ ಕುರೇಶಿ, ಮನೋಹರ ಮೈಸೆ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಡಾ.ಚಂದ್ರಶೇಖರ ಪಾಟೀಲ, ಶಾಸಕ ರಹೀಂಖಾನ್, ಮಾಜಿ ಶಾಸಕ ಎಂ.ಜಿ.ಮುಳೆ, ಶಾಂತಪ್ಪ ಪಾಟೀಲ, ಅನಿಲ ಬೆಲ್ದಾರ್, ಬಸವರಾಜ ಸ್ವಾಮಿ, ಚಂದ್ರಕಾಂತ ಮೇತ್ರೆ, ಯುವರಾಜ ಭೆಂಡೆ, ಸುರೇಶ ಮೋರೆ, ಶಿವರಾಜ ನರಶೆಟ್ಟಿ, ತಹಶೀನಅಲಿ ಜಮಾದಾರ, ಶಶಿಕಾಂತ ದುರ್ಗೆ, ಮಲ್ಲಮ್ಮ ನಾರಾಯಣರಾವ್, ಬಸವರಾಜ ಬುಳ್ಳಾ, ಬಸವರಾಜ ಜಾಬಶೆಟ್ಟಿ ಪಾಲ್ಗೊಂಡಿದ್ದರು.

‘ಸರ್ಕಾರ ರಚನೆಯೇ ಕಾನೂನುಬಾಹಿರ’

‘ಬಸವತತ್ವದಂತೆಯೇ ಸಂವಿಧಾನ ಕೂಡ ಸಮಸಮಾಜದ ನಿರ್ಮಾಣ ಬಯಸುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಒಬ್ಬಂಟಿಯಾಗಿಯೇ ಸಂವಿಧಾನ ರಚಿಸಿದರೆಂಬುದು ಹೆಮ್ಮೆಯ ಸಂಗತಿ. ಈಗಿನ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿವೆ. ಆಪರೇಷನ್ ಕಮಲ ಕೈಗೊಂಡು ಕಾನೂನುಬಾಹಿರವಾಗಿ ಅನ್ಯ ಪಕ್ಷದ ಶಾಸಕರನ್ನು ಖರೀದಿಸಿ ರಾಜ್ಯ ಸರ್ಕಾರ ರಚನೆಯಾಗಿದೆ’ ಎಂದು ಸಿದ್ದಾರಾಮಯ್ಯ ಟೀಕಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು