ಮಂಗಳವಾರ, ಜನವರಿ 31, 2023
27 °C
ಅನುಭವ ಮಂಟಪ ಉತ್ಸವದಲ್ಲಿ ಕೇಂದ್ರ ಸಚಿವ ಜಿ.ಕಿಶನ್‌ರೆಡ್ಡಿ ಭರವಸೆ

ಕೇಂದ್ರ ಸರ್ಕಾರದಿಂದ ಬಸವಜಯಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ‘ಮೇ ತಿಂಗಳಲ್ಲಿ ಅಕ್ಷಯ ತೃತೀಯದಂದು ಕೇಂದ್ರ ಸರ್ಕಾರದಿಂದ ಬಸವ ಜಯಂತಿ ಆಚರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತೇನೆ’ ಎಂದು ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವ ಜಿ.ಕಿಶನ್‌ರೆಡ್ಡಿ ಹೇಳಿದರು.

ನಗರದಲ್ಲಿ ಶನಿವಾರ ನಡೆದ 43 ನೇ ಅನುಭವ ಮಂಟಪ ಉತ್ಸವ ಮತ್ತು ಶರಣ ಕಮ್ಮಟ ಉದ್ಘಾಟಿಸಿ ಮಾತನಾಡಿದರು.

‘ಜಗತ್ತಿನ ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆಯ ಅನುಭವ ಮಂಟಪದ ಬಗ್ಗೆಯೂ ಸಂಸ್ಕೃತಿ ಇಲಾಖೆಯಿಂದ ವ್ಯಾಪಕ ಪ್ರಚಾರಕ್ಕೆ ಪ್ರಯತ್ನಿಸಲಾಗುವುದು. ವಚನಗಳನ್ನು ರಚಿಸುವ ಮೂಲಕ ಮಹಾತ್ಮ ಬಸವೇಶ್ವರರು ಕಾಯಕ, ದಾಸೋಹ, ಸಮಾನತೆ ತತ್ವ ಸಾರಿದ್ದಾರೆ. ಪ್ರತ್ಯೇಕ ಲಿಂಗಾಯತ ಸಂಪ್ರದಾಯವನ್ನು ಆರಂಭಿಸಿದರು’ ಎಂದರು.

ಕೇಂದ್ರ ಸರ್ಕಾರ ರಾಮ ಜನ್ಮಭೂಮಿ, ಕಾಶಿ ದೇವಸ್ಥಾನದ ಜೀರ್ಣೋದ್ಧಾರ ಕೈಗೊಂಡಿದ್ದು ಈ ದೇಶದ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಲು ಸತತವಾಗಿ ಶ್ರಮಿಸುತ್ತಿದೆ. ಮೋದಿಯವರು ಇಂಗ್ಲೆಂಡ್‌ನಲ್ಲಿನ ಬಸವ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ಕೇಂದ್ರ ಹಣಕಾಸು ಸಚಿವರು ಬಸವಣ್ಣನವರ ಅರ್ಥ ವ್ಯವಸ್ಥೆಯನ್ನು ಸ್ಮರಿಸಿ ಅವರನ್ನು ಗೌರವಿಸಿದ್ದಾರೆ ಎಂದರು.

ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮಾತನಾಡಿ,‘ಕಳಬೇಡ, ಕೊಲಬೇಡ ಎಂದು ಬರೀ ವಚನಗಳನ್ನು ಕಂಠಪಾಠ ಮಾಡಿದರೆ ಸಾಲದು, ಅದರಂತೆ ನಡೆಯಬೇಕು. ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾಗಿ 9 ವರ್ಷಗಳಾಗಿದ್ದು, ಈ ಕಾಲದಲ್ಲಿ ಸಾಕಷ್ಟು ಪ್ರಗತಿ ಕಾರ್ಯಗಳನ್ನು ಕೈಗೊಂಡಿದ್ದಾರೆ’ ಎಂದರು.

ವಿಧಾನ ಪರಿಷತ್ ಸಭಾಪತಿ ರಘುನಾಥ ಮಲ್ಕಾಪುರೆ, ಎಐಸಿಸಿ ಸದಸ್ಯ ಆನಂದ ದೇವಪ್ಪ, ಜಯವಿಭವಸ್ವಾಮಿ ಮೈಸೂರು, ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿದರು.

ಉದ್ಯಮಿ ಗುರುನಾಥ ಕೊಳ್ಳೂರ್ ಅವರಿಗೆ ‘ದಾಸೋಹ ರತ್ನ ಪ್ರಶಸ್ತಿ’ ನೀಡಲಾಯಿತು. ಹಾರಕೂಡದ ಚನ್ನವೀರ ಶಿವಾಚಾರ್ಯರು, ಹುಲಸೂರಿನ ಶಿವಾನಂದ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಬಾಬು ವಾಲಿ, ಶಿವರಾಜ ನರಶೆಟ್ಟಿ, ಗುಂಡುರೆಡ್ಡಿ, ಪ್ರದೀಪ ವಾತಡೆ, ಡಾ.ಎಸ್.ಬಿ.ದುರ್ಗೆ ಇದ್ದರು.

ಇದಕ್ಕೂ ಮೊದಲು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಷಟಸ್ಥಲ್ ಧ್ವಜಾರೋಹಣಗೈದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು