ಸೋಮವಾರ, ಮೇ 10, 2021
19 °C

ಅಂಗನವಾಡಿ ಕೇಂದ್ರಗಳಿಗೆ ದೊರಕದ ಜಾಗ: ಬಾಡಿಗೆ ಕಟ್ಟಡಗಳಲ್ಲಿ ಬಹುತೇಕ ಕೇಂದ್ರಗಳು

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ರಾಜ್ಯ ಸರ್ಕಾರ ಮಕ್ಕಳ ಆರೋಗ್ಯ ಗಮನದಲ್ಲಿ ಇಟ್ಟುಕೊಂಡು ಬೀದರ್‌ ಜಿಲ್ಲೆಗೆ ನೂರಾರು ಅಂಗನವಾಡಿ ಕೇಂದ್ರಗಳನ್ನು ಮಂಜೂರು ಮಾಡಿದೆ. ಆದರೆ, ಜಿಲ್ಲಾಡಳಿತಕ್ಕೆ ಅವುಗಳಿಗೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಾಗ ಕೊಡಲು ಸಾಧ್ಯವಾಗಿಲ್ಲ.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ ಸದಸ್ಯರು ಅಂಗನವಾಡಿ ಕೇಂದ್ರಗಳಿಗೆ ಜಾಗ ಮಂಜೂರು ಮಾಡುವಂತೆ ಅನೇಕ ವರ್ಷಗಳಿಂದ ಮನವಿ ಮಾಡುತ್ತಲೇ ಇದ್ದಾರೆ. ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲೂ ಹಲವು ಬಾರಿ ವಿಷಯ ಪ್ರಸ್ತಾಪವಾಗಿದೆ. ಆದರೆ, ಅಧಿಕಾರಿಗಳು ಮಾತ್ರ ಬೇಡಿಕೆಗೆ ಕವಡೆ ಕಾಸಿನ ಬೆಲೆ ಕೊಡುತ್ತಿಲ್ಲ. ಜಿಲ್ಲೆಯ ನಗರ, ಪಟ್ಟಣಗಳಲ್ಲಿರುವ 315 ಅಂಗನವಾಡಿಗಳ ಪೈಕಿ 254 ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲೇ ಇವೆ.

ಆಶ್ಚರ್ಯವೆಂದರೆ, ಬೀದರ್‌ ನಗರ ವ್ಯಾಪ್ತಿಯಲ್ಲಿ ಇರುವ 141 ಪೈಕಿ 130 ಅಂಗನವಾಡಿ ಕೇಂದ್ರಗಳು ಇಂದಿಗೂ ಬಾಡಿಗೆ ಕಟ್ಟಡದಲ್ಲೇ ನಡೆಯುತ್ತಿವೆ. ಅದರಲ್ಲೂ ಕೆಲವು ತಗಡಿನ ಶೆಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಜಾಗದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಿ ಅವುಗಳಿಗೆ ಮೂಲಸೌಲಭ್ಯ ಒದಗಿಸಲು ಅಧಿಕಾರಿಗಳೇ ಹಿಂದೇಟು ಹಾಕುತ್ತಿದ್ದಾರೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎನ್ನುವ ದೂರುಗಳು ಕೇಳಿಬರುತ್ತಿವೆ.

‘ರಾಜ್ಯ ಸರ್ಕಾರ ಅಂಗನವಾಡಿ ಕಟ್ಟಡಗಳನ್ನೇ ನಿರ್ಲಕ್ಷಿಸುತ್ತಿರುವ ಕಾರಣ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆ ಬರುತ್ತಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡುವ ಜತೆಗೆ ಅಕ್ಷರ ಜ್ಞಾನ ಒದಗಿಸಲು ಸರ್ಕಾರ ಯೋಜನೆ ರೂಪಿಸಿದರೂ ಸೌಲಭ್ಯಗಳ ಕೊರತೆಯಿಂದ ಮೂಲ ಆಶಯ ಈಡೇರುತ್ತಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತೆ ಲಕ್ಷ್ಮಿ ಬಾವಗಿ ಹೇಳುತ್ತಾರೆ.

ಕೂಲಿ ಕಾರ್ಮಿಕರು, ಚಿಂದಿ ಆಯುವವರು ಹಾಗೂ ಅಲ್ಪಸಂಖ್ಯಾತರು ವಾಸವಾಗಿರುವ ಪ್ರದೇಶಗಳಲ್ಲಿ ಅತಿ ಹೆಚ್ಚು ಅಂಗನವಾಡಿ ಕೇಂದ್ರಗಳು ಇವೆ. ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ನಗರದ ರಾಜಗೊಂಡ ಕಾಲೊನಿ, ಟಿಡಿಬಿ ಕಾಲೊನಿಯಲ್ಲಿ ತಲಾ ಎರಡು ಹಾಗೂ ಶಿವಪುರ ಕಾಲೊನಿಯಲ್ಲಿರುವ ಅಂಗನವಾಡಿ ಕೇಂದ್ರಗಳು ಶೆಡ್‌ಗಳಲ್ಲೇ ನಡೆಯುತ್ತಿವೆ.

ಕೆಲ ಅಂಗನವಾಡಿ ಕೇಂದ್ರಗಳಿಗೆ 30 ವರ್ಷಗಳ ಹಿಂದೆಯೇ ಜಾಗ ಮಂಜೂರು ಮಾಡಲಾಗಿದೆ. ಅದರಲ್ಲಿ ಕೆಲವು ಅತಿಕ್ರಮಣಕ್ಕೆ ಒಳಗಾಗಿವೆ. ಬೀದರ್‌ ನಗರದಲ್ಲಿರುವ ಅಂಗನವಾಡಿಗಳಲ್ಲಿ ಶೌಚಾಲಯಗಳು ಇಲ್ಲ. ಮಕ್ಕಳು ಕೊಠಡಿಯೊಳಗೆ ಶೌಚ ಮಾಡಿಕೊಂಡರೆ ಪಾಲಕರನ್ನು ಕರೆಸಿ ಮನೆಗೆ ಕಳಿಸಿಕೊಡಲಾಗುತ್ತದೆ.

ಓಲ್ಡ್‌ಸಿಟಿಯ ಅರಕಟ ಗಲ್ಲಿ, ಬಾಗವಾನ್‌ ಗಲ್ಲಿ, ಬಾರೂದ್‌ ಗಲ್ಲಿ, ಬ್ರಹ್ಮನವಾಡಿ, ಚಿಮಕೋರಾ ಗಲ್ಲಿ, ದರ್ಜಿ ಗಲ್ಲಿ, ದುಲ್ಹನ್‌ ದರ್ವಾಜಾ, ಫತೇದರ್ವಾಜಾ, ಗೋಲೆಖಾನಾ, ಮುಸ್ಲಿಂ ಚೌಕ್‌, ನಯಾಕಮಾನ್‌, ನೂರಖಾನ್ ತಾಲೀಂ, ಪನ್ಸಾಲ್‌ ತಾಲೀಂ, ಪಾತಾಳನಗರಿ, ರಾಮಮಂದಿರ, ಅಬ್ದುಲ್‌ ಫಯಾಜ್‌ ದರ್ಗಾ ಹಾಗೂ ವಡ್ಡರ ಕಾಲೊನಿಯಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಹೆಚ್ಚು ಮಕ್ಕಳು ಇದ್ದಾರೆ.

‘ಕೆಲ ಕಡೆ ಜಾಗ ದೊರಕುತ್ತಿಲ್ಲ. ಕೆಲ ಕಡೆ ಅನುದಾನ ಸಾಲುತ್ತಿಲ್ಲ. ಹೀಗಾಗಿ ಇಲಾಖೆಯ ಅನುದಾನದಲ್ಲಿ ಕಟ್ಟಡ ಹಾಗೂ ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಶೌಚಾಲಯ ನಿರ್ಮಿಸಲು ಚಿಂತನೆ ನಡೆಸಿದ್ದೇವೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್‌ ಹೇಳುತ್ತಾರೆ.

ಹುಮನಾಬಾದ್‌ನಲ್ಲಿ 67 ಪೈಕಿ 26 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿದೆ. ಭಾಲ್ಕಿಯಲ್ಲಿ 33 ಪೈಕಿ 29 ಬಾಡಿಗೆ ಕಟ್ಟಡಗಳಲ್ಲಿವೆ. ಬೀದರ್‌, ಹುಮನಾಬಾದ್ ಹಾಗೂ ಭಾಲ್ಕಿಯ ಕೆಲ ದೇವಸ್ಥಾನಗಳಲ್ಲೂ ಅಂಗನವಾಡಿ ನಡೆಸಲಾಗುತ್ತಿದೆ.

ನೂತನ ತಾಲ್ಲೂಕು ಕೇಂದ್ರ ಕಮಲನಗರದಲ್ಲಿ 10 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ನಾಲ್ಕು ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ. ಜಿಲ್ಲಾ ಉಸ್ತುವಾರಿ ಸಚಿವರು ಕಮಲನಗರ ತಾಲ್ಲೂಕಿನವರಾದರೂ ಅಂಗನವಾಡಿ ಕೇಂದ್ರಗಳ ಸ್ಥಿತಿ ಒಂದಿಷ್ಟು ಸುಧಾರಿಸಿಲ್ಲ. ಚಿಟಗುಪ್ಪ ಹಾಗೂ ಹುಲಸೂರಿನ ಕೇಂದ್ರಗಳಲ್ಲಿ ಸಮಸ್ಯೆಗಳಿವೆ.

‘1980ರಿಂದ ಅಂಗನವಾಡಿ ಕೇಂದ್ರಗಳಿಗೆ ಜಾಗ ಪಡೆಯಲು ಇಲಾಖೆ ಪ್ರಯತ್ನ ನಡೆಸಿದೆ. ನಗರ ಸ್ಥಳೀಯ ಸಂಸ್ಥೆಗಳ ಸಹಕಾರ ಬೇಕಿದೆ. ಜಾಗ ಕೊಡದ ಕಾರಣ ಅನೇಕ ಕಡೆ ಕಟ್ಟಡ ನಿರ್ಮಾಣವಾಗಿಲ್ಲ. ಕಟ್ಟಡಕ್ಕೆ ಸರ್ಕಾರ ₹18 ಲಕ್ಷ ಅನುದಾನ ಕೊಡುತ್ತಿದೆ. ಪ್ರಸ್ತುತ ಅನುದಾನದ ಕೊರತೆ ಇಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ತಿಪ್ಪಣ್ಣ ಸಿರಸಗಿ ಹೇಳುತ್ತಾರೆ.

‘ಮಾರ್ಚ್‌ ಅಂತ್ಯದ ಒಳಗೆ 16 ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಲಾಕ್‌ಡೌನ್‌ ಆದಾಗಿನಿಂದ ಮಕ್ಕಳ ಮನೆಗೆ ಆಹಾರಧಾನ್ಯ ಪೂರೈಸ ಲಾಗುತ್ತಿದ್ದು, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು