ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟದ ನಾಟಕ ಪ್ರದರ್ಶನಕ್ಕೆ ‘ಅಕ್ಷರದ ನಕ್ಷತ್ರ’ ಆಯ್ಕೆ

ಜುಲೈ 9 ರಂದು ಜಿಲ್ಲೆಯ 25 ಮಕ್ಕಳ ಪ್ರತಿಭೆ ಅನಾವರಣ
Last Updated 5 ಜುಲೈ 2019, 15:32 IST
ಅಕ್ಷರ ಗಾತ್ರ

ಬೀದರ್‌: ‘ಚಿಣ್ಣರ ಚಿಲುಮೆ ಮಕ್ಕಳ ನಾಟಕ ಯೋಜನೆಯಡಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜುಲೈ 8ರಿಂದ ಮೂರು ದಿನಗಳ ಕಾಲ ನಡೆಯಲಿರುವ ರಾಜ್ಯ ಮಟ್ಟದ ನಾಟಕೋತ್ಸವಕ್ಕೆ ಬೀದರ್‌ ಜಿಲ್ಲೆಯ ಮಕ್ಕಳು ಅಭಿನಯಿಸಿರುವ ‘ಅಕ್ಷರದ ನಕ್ಷತ್ರ’ ನಾಟಕ ಆಯ್ಕೆಯಾಗಿದೆ’ ಎಂದು ಜನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ತಿಳಿಸಿದರು.

‘ಅಕ್ಷರದ ನಕ್ಷತ್ರ’ ನಾಟಕ ಒಟ್ಟು ಒಂಬತ್ತು ಪ್ರದರ್ಶನಗಳನ್ನು ನೀಡಿದೆ. ನಾಟಕದ ಸಾರಾಂಶ, ಮಕ್ಕಳ ಅಭಿನಯ, ಪರಿಕರಗಳ ಬಳಕೆ ಹಾಗೂ ನಿರ್ದೇಶನ ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ನಾಟಕವನ್ನು ಆಯ್ಕೆ ಮಾಡಿರುವುದು ಜಿಲ್ಲೆಯ ಕಲಾವಿದರಿಗೆ ಸಂತಸ ತಂದಿದೆ’ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಶೋಭಾ ಸಾಲಮಂಟಪ ಕೃತಿ ರಚನೆ ಮಾಡಿದ್ದಾರೆ. ಸಾಹಿತಿ ಪಾರ್ವತಿ ಸೋನಾರೆ ನಾಟಕಕ್ಕೆ ಪೂರ್ಣ ರೂಪ ನೀಡಿದ್ದಾರೆ. ಕಲಾವಿದ ಡಿಂಗ್ರಿ ನರೇಶ ನಿರ್ದೇಶನ ಮಾಡಿದ್ದಾರೆ. ಮಕ್ಕಳ ಪಾಲಕರು ಹಾಗೂ ಶಿಕ್ಷಕರು ಪ್ರೋತ್ಸಾಹ ನೀಡಿದ್ದರಿಂದ ಮಕ್ಕಳು ಆಸಕ್ತಿಯಿಂದ ನಾಟಕದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿದೆ’ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

‘ಬೀದರ್, ಭಾಲ್ಕಿ ಹಾಗೂ ಹುಮನಾಬಾದ್‌ ತಾಲ್ಲೂಕಿನ 15 ಶಾಲೆಗಳ 25 ಮಕ್ಕಳು ನಾಟಕ ತಂಡದಲ್ಲಿ ಇದ್ದಾರೆ. ಸಾಮಾನ್ಯವಾಗಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಮಕ್ಕಳು ಮಕ್ಕಳ ನಾಟಕದಲ್ಲಿ ಅಭಿನಯಿಸುತ್ತಾರೆ. ಬೀದರ್ ಜಿಲ್ಲಾ ತಂಡದಲ್ಲಿ ಒಂದನೆಯ ತರಗತಿಯಿಂದ 10ನೇ ತರಗತಿಯ ವರೆಗಿನ ಮಕ್ಕಳೂ ಇದ್ದಾರೆ’ ಎಂದು ರಂಗ ನಿರ್ದೇಶಕ ಡಿಂಗ್ರಿ ನರೇಶ ತಿಳಿಸಿದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಕ್ಕಳ ಸಾರಿಗೆ ವೆಚ್ಚವನ್ನು ಭರಿಸಲಿದೆ. ಮಕ್ಕಳ ತಂಡ ಎರಡು ಮಿನಿ ಬಸ್‌ಗಳಲ್ಲಿ ಜುಲೈ 7 ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ರಂಗ ಮಂದಿರದ ಆವರಣದಿಂದ ಹೊರಡಲಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಮಕ್ಕಳನ್ನು ಅಭಿನಂದಿಸಿ ಬೀಳ್ಕೊಡಲಿದ್ದಾರೆ’ ಎಂದು ಹೇಳಿದರು.

‘ಜುಲೈ 8 ರಂದು ಸಂಜೆ ನಾಟಕೋತ್ಸವದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಮೊದಲ ದಿನ ಬೆಳಗಾವಿ ವಿಭಾಗ ಹಾಗೂ ಎರಡನೆಯ ದಿನ
ಕಲಬುರ್ಗಿ ವಿಭಾಗದ ತಲಾ ಎರಡು ತಂಡಗಳು ನಾಟಕ ಪ್ರದರ್ಶನ ನೀಡಲಿವೆ. 10 ರಂದು ಮೈಸೂರು ಹಾಗೂ 11 ರಂದು ಬೆಂಗಳೂರು ವಿಭಾಗದ ಮಕ್ಕಳು ನಾಟಕ ಪ್ರದರ್ಶಿಸಲಿದ್ದಾರೆ’ ಎಂದು ನರೇಶ ತಿಳಿಸಿದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಾಟಕೋತ್ಸವದಲ್ಲಿ ಭಾಗವಹಿಸುವ ತಂಡಗಳಿಗೆ ಪ್ರದರ್ಶನದ ವೆಚ್ಚವಾಗಿ ₹ 25 ಸಾವಿರ ಗೌರವ ಧನವನ್ನು ಬ್ಯಾಂಕ್‌ ಮೂಲಕ ಸಂದಾಯ ಮಾಡಲಿದೆ’ ಎಂದು ಹೇಳಿದರು.

**

ಡಿಕೆಶಿ ಕ್ರಮ ಸ್ವಾಗತಾರ್ಹ: ಸೋನಾರೆ

ಬೀದರ್‌: ‘ಕಲಾವಿದರ ಹೆಸರಲ್ಲಿ ವಂಚಿಸುತ್ತಿರುವ ನಕಲಿ ಸಂಘ ಸಂಸ್ಥೆಗಳಿಗೆ ಬಿಡುಗಡೆಯಾಗುತ್ತಿದ್ದ ಅನುದಾನ ತಡೆಯಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ’ ಎಂದು ರಾಜ್ಯ ಜನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ತಿಳಿಸಿದರು.

‘ಅರ್ಹ ಕಲಾವಿದರಿಗೆ ಪ್ರೋತ್ಸಾಹ ಕೊಡುವ ಯೋಜನೆಯನ್ನು ಮುಂದುವರಿಸಬೇಕು. ಅರ್ಹರನ್ನು ಆಯ್ಕೆ ಮಾಡಲು ಕೆಲ ಮಾನದಂಡಗಳನ್ನು ಅನುಸರಿಸಬೇಕು. ನಿಜವಾದ ಕಲಾವಿದರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಸಾಂಸ್ಕೃತಿಕ ಸಂಘಗಳಿಗೆ ಸರ್ಕಾರ ನೀಡುವ ಅನುದಾನವನ್ನು ವ್ಯಾಪಕವಾಗಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಸುಳ್ಳು ದಾಖಲೆ ನೀಡುವ ಮೂಲಕ ನಕಲಿ ಕಲಾ ಸಂಘಗಳು ಅನುದಾನವನ್ನು ಲಪಟಾಯಿಸುತ್ತಿವೆ. ಹೀಗಾಗಿ ಈ ಅನುದಾನ ಸ್ಥಗಿತ ಗೊಳಿಸಿ, ಇಲಾಖೆಯಿಂದಲೇ ಕರ್ನಾಟಕ ಸಂಸ್ಕೃತಿ ಎಂಬ ಸಾಂಸ್ಕೃತಿಕ ಉತ್ಸವ ನಡೆಸಲಾಗುವುದು ಹಾಗೂ ಉತ್ಸವದಲ್ಲಿ ಯುವ ಪ್ರತಿಭೆಗಳಿಗೆ ಪೋತ್ಸಾಹ ನೀಡಲಾಗುವುದೆಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ ಹೇಳಿದ್ದಾರೆ. ಆದರೆ ಹಳೆಯ ಕಲಾವಿದರಿಗೆ ಅವಕಾಶ ದೊರೆಯದಿದ್ದರೆ ಕಷ್ಟವಾಗಲಿದೆ’ ಎಂದು ಹೇಳಿದರು.

‘ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಿ. ಅದಕ್ಕೆ ನಮ್ಮ ವಿರೋಧ ಇಲ್ಲ. ಕಲೆಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಕಲಾವಿದರಿಗೂ ಆದ್ಯತೆ ನೀಡಬೇಕು. ಜುಲೈ 10 ರಂದು ಸಾಂಸ್ಕೃತಿಕ ಸಂಘಟನೆಗಳು ನಡೆಸಲಿರುವ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲ ಇದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT