ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀಕಿಸುವ ಸ್ವಾಮೀಜಿಗಳಿಗೆ ಸರ್ಕಾರದಿಂದ ಬೆದರಿಕೆ: ಪ್ರಣವಾನಂದ ಸ್ವಾಮೀಜಿ

Last Updated 20 ಅಕ್ಟೋಬರ್ 2022, 12:46 IST
ಅಕ್ಷರ ಗಾತ್ರ

ಬೀದರ್‌: ‘ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯಗಳನ್ನು ಟೀಕಿಸುತ್ತಿರುವ ಹಿಂದುಳಿದ ಸಮುದಾಯಗಳ ಸ್ವಾಮೀಜಿಗಳಿಗೆ ಕೆಲ ಸಚಿವರು ಆಮಿಷ ಒಡ್ಡಿ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ವೈಯಕ್ತಿಕವಾಗಿ ಆಫರ್‌ ಸಹ ಕೊಡುತ್ತಿದ್ದಾರೆ. ಆಮಿಷಕ್ಕೆ ಒಳಗಾಗದ ಸ್ವಾಮೀಜಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಕಲಬುರಗಿಯ ಚಿತ್ತಾಪುರದ ಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಗಂಭೀರ ಆರೋಪ ಮಾಡಿದರು.

‘ಬಿಜೆಪಿ ಸರ್ಕಾರ ಹಿಂದುಳಿದ ಸಮುದಾಯಗಳನ್ನು ವ್ಯವಸ್ಥಿತವಾಗಿ ಒಡೆಯುತ್ತಿದೆ. ಬ್ರಾಹ್ಮಣಶಾಹಿ ಆಡಳಿತವು ಹಿಂದುಳಿದ ಸಮುದಾಯಗಳ ಮುಖಂಡರನ್ನು ಎತ್ತಿಕಟ್ಟಿ ರಾಜಕಾರಣ ಮಾಡುತ್ತಿದೆ. ಕೆಳ ಸಮುದಾಯಕ್ಕೆ ಅಧಿಕಾರ ಬಿಟ್ಟು ಕೊಡುತ್ತಿಲ್ಲ. ಕೇವಲ ಬಲಾಢ್ಯಯ ಜಾತಿ, ಸಮುದಾಯಕ್ಕೆ ಮಣೆ ಹಾಕುತ್ತಿದೆ’ ಎಂದು ನಗರದಲ್ಲಿ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಹಿಂದುಳಿದ ಸಮುದಾಯಗಳ ಸ್ವಾಮೀಜಿಗಳನ್ನು ಹತ್ತಿಕ್ಕಲಾಗುತ್ತಿದೆ. ಸಾಗರದಲ್ಲಿರುವ ಈಡಿಗ ಸಮುದಾಯದ ಸಿಗಂದರ ಚೌಡೇಶ್ವರಿ ದೇವಸ್ಥಾನವನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿರುವ ಸರ್ಕಾರಕ್ಕೆ ಬ್ರಾಹ್ಮಣರ ಮಠಗಳನ್ನು ಅಧೀನಕ್ಕೆ ತೆಗೆದುಕೊಳ್ಳುವ ತಾಕತ್ತು ಇದೆಯೇ’ ಎಂದು ಪ್ರಶ್ನಿಸಿದರು.

‘18 ವರ್ಷಗಳ ಹಿಂದೆ ರಾಜ್ಯದಲ್ಲಿ ಸೇಂದಿ ನಿಷೇಧಿಸಿದ ನಂತರ ಈಡಿಗ ಸಮುದಾಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸಮುದಾಯದ ಜನ ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ. ಆರ್ಯ ಈಡಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತ ಬರಲಾಗಿದೆ. ನಮ್ಮ ಸಮಸ್ಯೆಗೆ ಸ್ಪಂದಿಸುವ ಬದಲು ಬ್ರಾಹ್ಮಣ ಅಭಿವೃದ್ಧಿ ನಿಗಮ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಹಾಗೂ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸಿ ಕೇವಲ ಮೇಲ್ವರ್ಗದವರಿಗೆ ಮಣೆ ಹಾಕುತ್ತಿದೆ’ ಎಂದು ಆರೋಪಿಸಿದರು.

ಜ.6ರಿಂದ ಪಾದಯಾತ್ರೆ:‘ರಾಜ್ಯದಲ್ಲಿ ಮೀಸಲಾತಿ ಪರ್ವ ಶುರುವಾಗಿದೆ. ಬಲಾಢ್ಯ ಸಮುದಾಯಗಳೂ ಮೀಸಲಾತಿಗೆ ಹೋರಾಟ ನಡೆಸುತ್ತಿವೆ. ಈಡಿಗ ಸಮುದಾಯವನ್ನು ಪ್ರವರ್ಗ 1ಕ್ಕೆ ಸೇರಿಸುವಂತೆ ಒತ್ತಾಯಿಸಿ ಜನವರಿ 6ರಂದು ಕುದ್ರೊಳ್ಳಿಯಿಂದ ಗೋಕರ್ಣ ಮಾರ್ಗವಾಗಿ ಬೆಂಗಳೂರು ವರೆಗೆ 35 ದಿನ 658 ಕಿ.ಮೀ ಪಾದಯಾತ್ರೆ ನಡೆಸಲಾಗುವುದು’ ಎಂದು ತಿಳಿಸಿದರು.

‘ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಮೇಲ್ವರ್ಗದವರೇ ಮೀಸಲಾತಿಯ ಶೇಕಡ 50ರಷ್ಟು ಲಾಭ ಪಡೆದಿದ್ದಾರೆ. ಹಿಂದುಳಿದ ಜಾತಿಗಳನ್ನು ಹತ್ತಿಕ್ಕುತ್ತಿರುವ ಕಾರಣ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಿದೆ’ ಎಂದು ಹೇಳಿದರು.

‘ಬಜೆಟ್‌ನಲ್ಲಿ ₹ 500 ಕೋಟಿ ಕಾಯ್ದಿರಿಸಿ ಆರ್ಯ ಈಡಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎನ್ನುವುದು ಸಹ ನಮ್ಮ ಪ್ರಮುಖ ಬೇಡಿಕೆಗಳಲ್ಲಿ ಸೇರಿದೆ. ನ್ಯಾಯಸಮ್ಮತವಾದ ಹೋರಾಟದಲ್ಲಿ ಈಡಿಗ ಸಮಾಜದ ಶಾಸಕರು ಹಾಗೂ ಸಚಿವರೂ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

‘ಕೊನೆಯ ದಿನ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶ ನಡೆಸಲಾಗುವುದು. ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು. ಕಾಂಗ್ರೆಸ್‌ ಯುವ ಮುಖಂಡ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಮೀಸಲಾತಿ ಚುನಾವಣೆ ಗಿಮಿಕ್:‘ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸಿರುವುದು ಸಹ ಚುನಾವಣೆ ಗಿಮಿಕ್ ಆಗಿದೆ. ಆರು ತಿಂಗಳಲ್ಲಿ ಚುನಾವಣೆ ಬರಲಿದೆ. ಮೀಸಲಾತಿ ಪ್ರಮಾಣ ಶೇಕಡ 50ಕ್ಕಿಂತ ಜಾಸ್ತಿಯಾಗಿದೆ. ಚುನಾವಣೆ ಮುಗಿಯುವ ವೇಳೆಗೆ ಬಿಜೆಪಿಯವರೇ ಸುಪ್ರೀಂ ಕೋರ್ಟ್‌ ಮೊರೆ ಹೋಗಿ ರದ್ದು ಪಡಿಸಿದರೂ ಅಚ್ಚರಿ ಇಲ್ಲ‘ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದರು.

‘ಪ್ರಬಲ ಪಂಚಮಸಾಲಿ ಸಮುದಾಯದವರು ಪ್ರವರ್ಗ 2ಎದಲ್ಲಿ ಸೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಆದರೆ, ನಮ್ಮ ಹಕ್ಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ. ಪ್ರವರ್ಗ 2ಎದಲ್ಲಿ ಪಂಚಮಸಾಲಿ ಸಮುದಾಯವನ್ನು ಸೇರಿಸಲು ಪ್ರಯತ್ನಿಸಿದರೆ ರಾಜ್ಯದಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿಯಿಂದ ಸಾಮರಸ್ಯ ಕದಡುವ ಕೆಲಸ:‘ಈಡಿಗ ಸಮುದಾಯದ ಏಳು ಶಾಸಕರು, ಒಬ್ಬರು ಸಚಿವರಿದ್ದರೂ ಸಮಾಜಕ್ಕೆ ಯಾವುದೇ ಲಾಭವಾಗಿಲ್ಲ. ಇವರೆಲ್ಲ ನಪುಂಸಕ ರಾಜಕಾರಣ ಮಾಡುತ್ತಿದ್ದಾರೆ. ಸಮುದಾಯದವರ ಮತ ಪಡೆದು ಬ್ರಾಹ್ಮಣ್ಯದ ಅಡಿಯಾಳಾಗಿದ್ದಾರೆ. ಈಡಿಗ ಸಮುದಾಯವನ್ನು ರಾಜಕೀಯ ಲಾಭಕ್ಕೆ ಬಳಸುತ್ತಿದ್ದಾರೆ’ ಎಂದರು.

‘ಬಿಜೆಪಿ ಸಮುದಾಯಗಳಲ್ಲಿ ಸಾಮರಸ್ಯ ಕದಡುವ ಕೆಲಸ ಮಾಡುತ್ತಿದೆ. ಉಡುಪಿಯಲ್ಲಿ ಜಾತಿ ವೈಷ್ಯಮ್ಯದಿಂದಾಗಿ ಈಡಿಗ ಸಮುದಾಯದ ಇಬ್ಬರು ಪ್ರಾಣ ಕಳೆದುಕೊಂಡರು. ಅವರ ಕುಟುಂಬದ ಸದಸ್ಯರಿಗೆ ತಾತ್ಕಾಲಿಕ ನೌಕರಿ ಕೊಟ್ಟು ಕಣ್ಣೊರೆಸುವ ತಂತ್ರ ಅನುಸರಿಸಲಾಗಿದೆ. ಬಿಜೆಪಿಗೆ ಸಮುದಾಯದ ಕಾಳಜಿ ಇದ್ದರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕಿತ್ತು. ಬಿಜೆಪಿ ಎಂದಿಗೂ ಮೇಲ್ವರ್ಗದವರ ಸೀಟು ಬಿಟ್ಟು ಕೊಡುವುದಿಲ್ಲ. ಈಡಿಗ ಸಮುದಾಯದವರು ಎಚ್ಚರ ವಹಿಸಬೇಕು’ ಎಂದು ತಿಳಿಸಿದರು.

‘ಮಠಮಾನ್ಯಗಳಿಗೆ ಸರ್ಕಾರದ ಅನುದಾನ ಬೇಕೇ ಆಗಿಲ್ಲ. ಜನರ ತೆರಿಗೆ ಹಣವನ್ನು ಮಠಗಳಿಗೆ ಕೊಡುವ ಅಗತ್ಯವೂ ಇಲ್ಲ. ಕೆಲ ಮಠಗಳಿಗೆ ಅನುದಾನ ಕೊಟ್ಟು ಬಿಜೆಪಿಗೆ ಮಠಾಧೀಶರ ಬೆಂಬಲ ಇದೆ ಎನ್ನುವಂತೆ ಬಿಂಬಿಸಲಾಗುತ್ತಿದೆ’ ಎಂದು ಟೀಕಿಸಿದರು.

ಬೀದರ್‌ ಜಿಲ್ಲಾ ಆರ್ಯ ಈಡಿಗ ಸಮಾಜ ಸಂಘದ ಅಧ್ಯಕ್ಷ ಡಾ.ರಾಜಶೇಖರ ಸೇಡಂಕರ್, ಪ್ರಧಾನ ಕಾರ್ಯದರ್ಶಿ ಸಂಗಯ್ಯ ಈಡಿಗಾರ, ಸುಭಾಷ ಚೌಧರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT