ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಪಾಳು ಬಿಳುತ್ತಿದೆ ಬಸವಕಲ್ಯಾಣ ಕೋಟೆ

ಬಸವಕಲ್ಯಾಣ ಕೋಟೆ ಗೋಡೆಗಳಲ್ಲಿ ಬಿರುಕು; ಜೀರ್ಣೋದ್ಧಾರಕ್ಕೆ ಆಗ್ರಹ
Last Updated 15 ಸೆಪ್ಟೆಂಬರ್ 2021, 4:21 IST
ಅಕ್ಷರ ಗಾತ್ರ

ಬಸವಕಲ್ಯಾಣ: ನಗರದ ಕೋಟೆಯ ಗೋಡೆಗಳಲ್ಲಿ ಎಲ್ಲೆಂದರಲ್ಲಿ ಬಿರುಕು ಕಾಣಿಸಿಕೊಂಡು ಕಲ್ಲು, ಮಣ್ಣು ಕುಸಿದು ಬೀಳುತ್ತಿವೆ. ಐತಿಹಾಸಿಕ ಸ್ಮಾರಕ ಹಾಳಾಗುವ ಭೀತಿ ಎದುರಾಗಿದೆ.

ಕೋಟೆಯ ಪ್ರವೇಶ ದ್ವಾರದ ಎದುರಿನ ಕಂದಕ ದಾಟುವುದಕ್ಕೆ ನಿರ್ಮಾಣಗೊಂಡಿರುವ ರಸ್ತೆಯ ಒಂದು ಭಾಗದ ತಡೆಗೋಡೆ ಕುಸಿದು ಅನೇಕ ದಿನಗಳಾಗಿವೆ. ಹೀಗಾಗಿ ರಸ್ತೆ ಯಾವಾಗ ಕಂದಕದ ಪಾಲಾಗುತ್ತದೋ, ಯಾವಾಗ ಯಾರಿಗೆ ಹಾನಿಯಾಗುತ್ತದೋ ಎಂಬಂಥ ಪರಿಸ್ಥಿತಿಯಿದೆ.

ಕೋಟೆಯ ತುದಿ ಎತ್ತರದಲ್ಲಿ ದಿಬ್ಬದ ಮೇಲಿದೆ. ಆದ್ದರಿಂದ ಬಾಗಿಲುಗಳನ್ನು ದಾಟಿ ಏರುತ್ತ ಹೋಗಬೇಕಾಗುತ್ತದೆ. ನಾಲ್ಕು ಬಾಗಿಲುಗಳನ್ನು ದಾಟಿದಾಗ ಐದನೇ ಬಾಗಿಲಿನ ಪಕ್ಕದಲ್ಲಿನ ಗೋಡೆ ಉಬ್ಬಿದೆ. ಅದರ ಕಲ್ಲುಗಳು ಕುಸಿಯುವ ಹಂತದಲ್ಲಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿದೆ.

ರಂಗೀನ ಮಹಲ್‌ಗೆ ಹೋಗುವ ದಾರಿಯಲ್ಲಿನ ಕಾವಲುಗಾರನ ಚಿಕ್ಕ ಮಂಟಪವೂ ಕುಸಿಯುವ ಹಂತದಲ್ಲಿದೆ. ಒಳಹೋದರೆ ರಂಗೀನ್ ಮಹಲ್ ನ ಬಾಗಿಲುಗಳ ಪಕ್ಕದ ಗೋಡೆ ಕುಸಿದಿರುವುದು ಕಾಣುತ್ತದೆ. ಈ ಕಾರಣ ಈ ಮಹಲ್ ರಂಗು ಕಳೆದುಕೊಳ್ಳುತ್ತಿದೆ. ನೃತ್ಯ ಸಭಾಂಗಣ, ದರ್ಬಾರ ಹಾಲ್ ನ ಅಕ್ಕಪಕ್ಕದ ಗೋಡೆಗಳು ಕೂಡ ಶಿಥಿಲಗೊಂಡಿವೆ. ಬಾರೂದ್ ಖಾನಾ ಹಾಗೂ ಇತರೆಡೆಯ ಕೊಠಡಿಗಳಲ್ಲಿ ಮೇಲ್ಛಾವಣಿಯಿಂದ ಕುಸಿದು ಬಿದ್ದಿರುವ ಮಣ್ಣಿನ ಗುಡ್ಡೆಗಳನ್ನು ಕಾಣಬಹುದಾಗಿದೆ.

ಗೋಡೆ ಕುಸಿತಕ್ಕೆ ಇಲ್ಲಿ ಬೆಳೆದಿರುವ ಗಿಡಕಂಟೆಗಳು ಕಾರಣವಾಗಿವೆ ಎನ್ನಲಾಗುತ್ತಿದೆ. ಗಿಡಗಳ ಬೇರುಗಳು ಅನೇಕ ಕಡೆಗಳಲ್ಲಿ ಗೋಡೆಗಳಲ್ಲಿ ಇಳಿದಿರುವ ಕಾರಣ ಕಲ್ಲುಗಳು ಕುಸಿಯುತ್ತಿವೆ. ಹಾಗೆ ನೋಡಿದರೆ, ಈಚೆಗೆ ಕೋಟೆಯ ನಿರ್ವಹಣೆಗೆ ನಿಷ್ಕಾಳಜಿ ತೋರಲಾಗುತ್ತಿದೆ.

ಈ ಕೋಟೆಯನ್ನು ಬಿಜ್ಜಳ ದೊರೆ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ಅವನ ಆಸ್ಥಾನದಲ್ಲಿ ಮಹಾಮಂತ್ರಿ ಆಗಿದ್ದ ಬಸವಣ್ಣನವರು ಕೂಡ ಇದೇ ಕೋಟೆಯಲ್ಲಿ ಕಾರ್ಯಗೈಯುತ್ತಿದ್ದರು ಎನ್ನಲಾಗುತ್ತಿದೆ. ಹೀಗಾಗಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವ್ಯಾಪ್ತಿಗೊಳಪಡುವ ಸ್ಮಾರಕಗಳಲ್ಲಿ ಕೋಟೆಯ ಹೆಸರು ಕೂಡ ಇದೆ. ಆದರೂ, ಇದುವರೆಗೆ ಇದರ ಜೀರ್ಣೋದ್ಧಾರ ಕೈಗೆತ್ತಿಕೊಂಡಿಲ್ಲ.

ಇದೇ ಜಿಲ್ಲೆಯ ಗುರುಪಾದಪ್ಪ ನಾಗಮಾರಪಳ್ಳಿ ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ₹2 ಕೋಟಿ ಅನುದಾನದಲ್ಲಿ ಕೋಟೆಯ ವಿಕಾಸ ಕಾರ್ಯ ಕೈಗೊಳ್ಳಲಾಗುತ್ತದೆ ಎಂದಿದ್ದರು. ಆದರೆ ಅದು ಭರವಸೆಯಾಗಿಯೆ ಉಳಿಯಿತು. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವಿಶೇಷಾಧಿಕಾರಿ ಆಗಿದ್ದ ಡಾ.ಎಸ್.ಎಂ.ಜಾಮದಾರ ಕೂಡ ಕೋಟೆ ಅಭಿವೃದ್ಧಿಪಡಿಸಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದರಾದರೂ ಆ ಕೆಲಸವೂ ನಡೆಯಲಿಲ್ಲ.

ಕೋಟೆ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿದ್ದರೂ ಕಾಲಕಾಲಕ್ಕೆ ಅನೇಕರ ದಾಳಿಗೊಳಗಾಗಿರುವ ಕಾರಣ ಕಟ್ಟಡದಲ್ಲಿ ಅನೇಕ ಮಾರ್ಪಾಡುಗಳಾಗಿವೆ. ಆದರೂ ಸುಸ್ಥಿತಿಯಲ್ಲಿರುವ ಕೋಟೆ ಎಂದೇ ಇದನ್ನು ಗುರುತಿಸಲಾಗುತ್ತದೆ. ಈಚೆಗೆ ಇಲ್ಲಿನ ಅವ್ಯವಸ್ಥೆ ಹಾಗೂ ಆಗಿರುವ ಹಾನಿ ನೋಡಿದರೆ ದುಸ್ಥಿತಿಯಲ್ಲಿನ ಕೋಟೆ ಎಂದೇ ಇದನ್ನು ಉಲ್ಲೇಖಿಸಬೇಕಾಗುತ್ತದೆ.‌

‘ಅನೇಕ ರಾಜಮನೆತನಗಳ ರಾಜಧಾನಿಯಾಗಿ ಮೇರೆದಿದ್ದ ಇಲ್ಲಿನ ಕೋಟೆಯ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ. ಇಲ್ಲಿ ಸಮತಾವಾದಿ ಬಸವಣ್ಣನವರು ಕಾರ್ಯಗೈದಿದ್ದರಿಂದ ಅವರ ಕುರುಹು ಆಗಿರುವ ಇದನ್ನು ಜೋಪಾನ ಮಾಡುವುದು ಎಲ್ಲರ ಕರ್ತವ್ಯ ಆಗಿದೆ’ ಎಂದು ಮುಖಂಡ ಎಸ್.ಮಹೇಶ ಹೇಳಿದ್ದಾರೆ.

‘ಕೋಟೆಯಲ್ಲಿ ಉತ್ಖನನ ನಡೆಸಿ ಶಿಥಿಲ ಗೋಡೆಗಳ ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳಬೇಕು. ಗಿಡಕಂಟೆಗಳು ಬೆಳೆದಿದ್ದರಿಂದ ಕೆಲ ಪ್ರಮುಖ ಸ್ಥಳಗಳ ವೀಕ್ಷಣೆಗೆ ಪ್ರವಾಸಿಗರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಸ್ವಚ್ಛತೆ ಕೈಗೊಳ್ಳಬೇಕು’ ಎಂದು ಮುಖಂಡ ನೈಮೊದ್ದೀನ್ ಚಾಬೂಕಸವಾರ ಆಗ್ರಹಿಸಿದ್ದಾರೆ.

‘ಶಿಥಿಲಗೊಂಡಿರುವ ಸ್ಥಳಗಳಲ್ಲಿ ಜೀರ್ಣೋದ್ಧಾರ ಕೈಗೊಳ್ಳಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಶೀಘ್ರ ಅನುದಾನ ಮಂಜೂರಾಗುವ ಭರವಸೆಯಿದೆ’ ಎಂದು ಪ್ರಾಚ್ಯವಸ್ತು ಸಂಗ್ರಹಾಲಯದ ಕ್ಯೂರೇಟರ್ ಶ್ರೀಕುಮಾರ ತಿಳಿಸಿದ್ದಾರೆ.

*
ಕೋಟೆ ದುರಸ್ತಿಗೆ ₹2 ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಗಿಡಕಂಟೆ ತೆಗೆಯಲು ಹೆಚ್ಚಿನ ನೌಕರರನ್ನು ನೇಮಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ
- ಶ್ರೀಕುಮಾರ, ವಸ್ತುಸಂಗ್ರಹಾಲಯ ಕ್ಯೂರೇಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT