ಭಾನುವಾರ, ಜನವರಿ 26, 2020
29 °C
ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ ಅಭಿಮತ

ಬಸವಕಲ್ಯಾಣ: ನುಡಿದಂತೆ ಬದುಕಿದ ಶರಣರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ‘ವಚನಕಾರರು ಮತ್ತು ವಚನ ರಚನಾಕಾರರಲ್ಲಿ ಭಿನ್ನತೆಯಿದೆ. ಬಸವಾದಿ ಶರಣರು ವಚನಕಾರರಾದರೆ, ಇಂದಿನವರು ವಚನ ರಚನಾಕಾರರಾಗಿದ್ದಾರೆ' ಎಂದು ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ ಹೇಳಿದರು.

ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ತಾಲ್ಲೂಕು ಘಟಕದಿಂದ ಭಾನುವಾರ ಇಲ್ಲಿನ ಬಸವೇಶ್ವರ ವೃತ್ತದ ಬಿಕೆಡಿಬಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಹಿತಿ ವಿಶ್ವನಾಥ ಮುಕ್ತಾ ಅವರ ಮರೀಚಿಕೆ ಪುಸ್ತಕ ಬಿಡುಗಡೆ ಮತ್ತು ವಿಮರ್ಶೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಶರಣರು ಬರೆದಂತೆ ಬದುಕುತ್ತಿದ್ದರು. ನುಡಿದಂತೆ ನಡೆಯು ತ್ತಿದ್ದರು. ಆದರೆ, ಆಧುನಿಕ ವಚನ ರಚನಾಕಾರರು ಬರೀ ಬರೆಯಬಲ್ಲರು. ಲೋಕೋದ್ಧಾರಕ್ಕಾಗಿ ನಿಸ್ವಾರ್ಥದಿಂದ ಜೀವನ ನಡೆಸುವುದು  ಕಠಿಣವಾಗಿದೆ. ವಿಶ್ವನಾಥ ಮುಕ್ತಾ ತನ್ನ ಕಾವ್ಯದಲ್ಲಿ ಭೌತಿಕ ಕಸರತ್ತಿಗೆ ಪ್ರಾಮುಖ್ಯತೆ ನೀಡದೆ ಜೀವನಾನುಭವವನ್ನು ಪ್ರಭಾವ ಪೂರ್ಣವಾಗಿ ಬಿಂಬಿಸಿದ್ದಾರೆ. ಇವರ ಕವನಗಳು ತತ್ವಪದಗಳಂತೆ ಭಾಸವಾಗುತ್ತವೆ. ಲಿಂಗಾಯತ ಧರ್ಮಸೂತ್ರಗಳನ್ನು ಬಿತ್ತರಿಸುತ್ತದೆ’ ಎಂದರು.

ಉಪನ್ಯಾಸಕ ವೆಂಕಣ್ಣ ದೊಣ್ಣೆಗೌಡ ಮಾತನಾಡಿ, `ವಿಶ್ವನಾಥ ಮುಕ್ತಾ ಅವರ ಕಾವ್ಯವು ಕಾಲಕ್ಕೆ ತಕ್ಕಂತೆ ಬದಲಾವಣೆ ಕಂಡಿದೆ. ಆಧುನಿಕ ಸೌಲಭ್ಯವಾದ ಮೊಬೈಲ್ ಬಗ್ಗೆಯೂ ಅವರು ಕವನ ರಚಿಸಿ ಉತ್ತಮ ಸಂದೇಶ ನೀಡಿದ್ದಾರೆ. ಮರೀಚಿಕೆ ಕವನ ಸಂಕಲನದಲ್ಲಿನ ಎಲ್ಲ ಕವನಗಳು ಸನ್ಮಾರ್ಗ ತೋರುತ್ತವೆ’ ಎಂದರು.

ಈಶಾನ್ಯವಲಯ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ.ಅಂಬಲಗಿ ಮಾತನಾಡಿ, `ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಈ ಭಾಗದ ಎಲ್ಲ ಸಾಹಿತಿಗಳ ಗ್ರಂಥಗಳನ್ನು ಖರೀದಿಸುವಂತೆ ಒತ್ತಡ ಹೇರಲಾಗುವುದು' ಎಂದರು.

ಭಾಲ್ಕಿ ಗುರುಬಸವ ಪಟ್ಟದ್ದೇವರು, ಅಕ್ಕ ಡಾ.ಗಂಗಾಂಬಿಕಾ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ರುದ್ರಮಣಿ ಮಠಪತಿ, ಶಿವಕುಮಾರ ಜಡಗೆ ಮಾತನಾಡಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ಕಾಶಪ್ಪ ಬಾಲಿಕಿಲೆ, ಚಿತ್ರಕಲಾವಿದೆ ಬೇಬಿ ಬಿರಾದಾರ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ಅಶೋಕ ನಾಗರಾಳೆ, ಬಸವರಾಜ ಬಾಲಿಕಿಲೆ, ರೇವಣಪ್ಪ ರಾಯವಾಡೆ, ಸುಭಾಷ ಹೊಳಕುಂದೆ, ಬಸವರಾಜ ತೊಂಡಾರೆ, ವಿಜಯಲಕ್ಷ್ಮಿ ಗಡ್ಡೆ, ಜಗನ್ನಾಥ ಖೂಬಾ, ಬಸವರಾಜ ಚಿರಡೆ, ಮಲ್ಲಿಕಾರ್ಜುನ ಕುರಕೋಟೆ, ವಿಶ್ವನಾಥ ಮುಕ್ತಾ ಹಾಗೂ ಶಾರದಾ ಮುಕ್ತಾ ದಂಪತಿಯನ್ನು ಸನ್ಮಾನಿಸಲಾಯಿತು.

ನಿವೃತ್ತ ಪ್ರಾಚಾರ್ಯ ಎಸ್.ಜಿ.ಕರ್ಣೆ, ರಾಜಕುಮಾರ ಬಿರಾದಾರ, ಶಾಲಿವಾನ ಕಾಕನಾಳೆ, ಶಿವರಾಜ ಬಾಲಿಕಿಲೆ, ಶಾಂತಕುಮಾರ ಶೆಟಗಾರ, ಜ್ಯೋತಿ ಪ್ರಕಾಶ ಸಣ್ಮನಿ, ಕಿರಣ ಶಾಂತಮಲ್ಲಪ್ಪ ಪಾಟೀಲ, ಸದಾಶಿವಪ್ಪ ಪಾಟೀಲ, ಅನಿಲಕುಮಾರ ಬಿರಾದಾರ ಇದ್ದರು.

ಪ್ರತಿಕ್ರಿಯಿಸಿ (+)