ಗುರುವಾರ , ಏಪ್ರಿಲ್ 15, 2021
22 °C
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ

ಜೆಡಿಎಸ್‌ನಿಂದ ‘ಮುಸ್ಲಿಂ’, ಕಾಂಗ್ರೆಸ್‌ನಿಂದ ‘ಅನುಕಂಪ’ ಅಸ್ತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಮತ್ತು ಜೆಡಿಎಸ್‌

ಬಸವಕಲ್ಯಾಣ (ಬೀದರ್ ಜಿಲ್ಲೆ): ಇಲ್ಲಿಯ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸೈಯದ್ ಯಸ್ರಬ್ ಅಲಿ ಖಾದ್ರಿ ಅವರಿಗೆ ಟಿಕೆಟ್‌ ನೀಡಿ ಜೆಡಿಎಸ್‌ ‘ಮುಸ್ಲಿಂ’ ಅಸ್ತ್ರ ಪ್ರಯೋಗಿಸಿದೆ. ಶಾಸಕರಾಗಿದ್ದ ದಿ.ಬಿ.ನಾರಾಯಣರಾವ್‌ ಅವರ ಪತ್ನಿ ಮಲ್ಲಮ್ಮ ಅವರನ್ನು ಕಣಕ್ಕಿಳಿಸಿ ಅನುಕಂಪದ ಅಲೆಯ ಲಾಭ ಪಡೆಯಲು ಕಾಂಗ್ರೆಸ್‌ ಮುಂದಾಗಿದೆ.

ಏತನ್ಮಧ್ಯೆ, ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ‘ಬಿಜೆಪಿ ಟಿಕೆಟ್‌ ಸ್ಥಳೀಯರಿಗೇ ಕೊಡಬೇಕು. ಹೊರಗಿನವರಿಗೆ ಟಿಕೆಟ್ ಕೊಡಬಾರದು’ ಎಂದು ಒತ್ತಾಯಿಸಿದ್ದಾರೆ.

ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮರಾಠ ಸಮಾಜದ ಮುಖಂಡ, ಮಾಜಿ ಶಾಸಕ ಮಾರುತಿರಾವ ಮುಳೆ ಬಂಡಾಯದ ಮುನ್ಸೂಚನೆ ನೀಡಿದ್ದಾರೆ. ‘ನಾನೂ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿಯಿಂದ ಕಣಕ್ಕಿಳಿಯುತ್ತೇನೆ’ ಎಂದು ಅವರು ಹೇಳಿದ್ದಾರೆ.

ಈ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ನಿರ್ಧರಿಸಿ ನಾಲ್ಕು ದಿನಗಳ ಹಿಂದೆ ವೀಕ್ಷಕರನ್ನು ಬಸವಕಲ್ಯಾಣಕ್ಕೆ ಕಳಿಸಿದ್ದರು. ವೀಕ್ಷಕರು ವರದಿ ಸಲ್ಲಿಸಿದ ನಂತರ ಟಿಕೆಟ್‌ ಕೊಡಲು ಸೈಯದ್ ಯಸ್ರಬ್ ಅಲಿ ಖಾದ್ರಿ ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು.

ಖಾದ್ರಿ ಅವರು ಲಾರಿ ಉದ್ಯಮ, ಪೆಟ್ರೋಲ್ ಬಂಕ್ ಹೊಂದಿದ್ದಾರೆ. ಪ್ರಗತಿಪರ ಕೃಷಿಕರೂ ಹೌದು. ಬಸವಕಲ್ಯಾಣದ ಬಡೇಶಾ ದರ್ಗಾದ ಮುಖ್ಯಸ್ಥರಾಗಿರುವ ಅವರು ‘ಬಡೇಶಾ ಸಾಹೇಬ್’ ಎಂದೇ ಪರಿಚಿತರು.

ಗೆಲುವು ನನ್ನದೇ: ‘ಪಕ್ಷಕ್ಕೆ ಸೇರಿದ ತಕ್ಷಣವೇ ಕುಮಾರಸ್ವಾಮಿ ಅವರು ನನ್ನ ಬೇಡಿಕೆ ಈಡೇರಿಸಿದ್ದಾರೆ. ಕಾಂಗ್ರೆಸ್ ಕೇವಲ ಅಲ್ಪಸಂಖ್ಯಾತರ ಮತ ಕೇಳುತ್ತದೆ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ’ ಎಂದು ಯಸ್ರಬ್ ಅಲಿ ಖಾದ್ರಿ ಹೇಳಿದರು.

‘ಬಸವಕಲ್ಯಾಣ ಕ್ಷೇತ್ರದಲ್ಲಿ ಮುಸ್ಲಿಂ ಮತಗಳ ಜತೆಗೆ ಹಿಂದುಳಿದ ವರ್ಗಗಳ, ಪರಿಶಿಷ್ಟ ಸಮುದಾಯದ ಮತ ಪಡೆಯುವೆ. ಈ ಕ್ಷೇತ್ರ ಹಿಂದೆ ಜೆಡಿಎಸ್‌ ಭದ್ರಕೋಟೆಯಾಗಿತ್ತು. ಅದನ್ನು ಮತ್ತೊಮ್ಮೆ ಸಾಬೀತುಪಡಿಸುವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಲ್ಲಮ್ಮ ಸಕ್ರಿಯ: ಯಾದಗಿರಿ ಜಿಲ್ಲೆಯ ನಾಲವಾರ ಮೂಲದ ಮಲ್ಲಮ್ಮ ಅವರು ಬಿ.ನಾರಾಯಣರಾವ್‌ ಅವರನ್ನು ಮದುವೆಯಾದ ನಂತರ ಬೀದರ್‌ ತಾಲ್ಲೂಕಿನ ಬಸಂತಪುರದಲ್ಲಿ ಸ್ವಲ್ಪ ದಿನ ವಾಸವಾಗಿದ್ದರು.

ಬಿ.ನಾರಾಯಣರಾವ್ 40 ವರ್ಷದಿಂದ ಈ ಕ್ಷೇತ್ರದಲ್ಲಿದ್ದು ಕಾಂಗ್ರೆಸ್‌ನಿಂದ ಮೂರು ಸಲ ಸ್ಪರ್ಧಿಸಿದ್ದರಾದರೂ ಮಲ್ಲಮ್ಮ ಅವರು ರಾಜಕೀಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಬೆಂಗಳೂರಿನ ಮನೆಯಲ್ಲಿ ವಾಸಿಸುತ್ತಿದ್ದರು. ನಾರಾಯಣರಾವ್ ಅವರ ನಿಧನದ ಬಳಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು