ಶನಿವಾರ, ಮೇ 28, 2022
24 °C
ಅವಿನಾಶ ಭೋಸಿಕರ್ ಆಯ್ಕೆ ಅನಧಿಕೃತ: ಬಸವ ದಳ

'ಬಸವರಾಜ ಧನ್ನೂರು ರಾಷ್ಟ್ರೀಯ ಬಸವ ದಳದ ಅಧಿಕೃತ ಅಧ್ಯಕ್ಷ' 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಬಸವರಾಜ ಧನ್ನೂರು ಅವರೇ ರಾಷ್ಟ್ರೀಯ ಬಸವ ದಳದ ಅಧಿಕೃತ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ನಾಂದೇಡ್‍ನ ಅವಿನಾಶ ಭೋಸಿಕರ್ ಆಯ್ಕೆ ಅನಧಿಕೃತ. ಅದಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದು ರಾಷ್ಟ್ರೀಯ ಬಸವ ದಳದ ಸಭೆ ಪ್ರಕಟಿಸಿತು.

ಇಲ್ಲಿಯ ಬಸವ ಮಂಟಪದಲ್ಲಿ ನಡೆದ ಸಭೆಯು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಕೂಡಲಸಂಗಮ ಬಸವ ಧರ್ಮ ಪೀಠದ ಆದೇಶವೇ ಅಂತಿಮ ಎಂದು ಹೇಳಿತು.

ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರೇ ಬಸವರಾಜ ಧನ್ನೂರು ಬಸವ ದಳದ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಪ್ರಕಟಿಸಿದ್ದಾರೆ. ಹೀಗಾಗಿ ಅಧ್ಯಕ್ಷರ ಪದಚ್ಯುತಿ ಅಥವಾ ಹೊಸ ಅಧ್ಯಕ್ಷರ ಆಯ್ಕೆ ಪ್ರಮೆಯವೇ ಉದ್ಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿತು.

ಯಾವುದೇ ಅಧಿಕಾರ ಇಲ್ಲದೆ ಕೆಲವರು ಸೇರಿಕೊಂಡು ಅವಿನಾಶ ಭೋಸಿಕರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿರುವುದು ಅನಧಿಕೃತ ಎಂದು ಘೋಷಿಸಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಅವರು, ರಾಷ್ಟ್ರೀಯ ಬಸವ ದಳಕ್ಕೆ ಬಸವ ಧರ್ಮ ಪೀಠವೇ ಸರ್ವೋಚ್ಛ ಪೀಠ. ಹೀಗಾಗಿ ಪೀಠದ ಆದೇಶವನ್ನು ಚಾಚೂತಪ್ಪದೇ ಪಾಲಿಸಲಿದ್ದೇವೆ ಎಂದು ಹೇಳಿದರು.

ಬಸವ ಮಂಟಪದಲ್ಲಿ ಪ್ರತಿ ಭಾನುವಾರದ ಪ್ರಾರ್ಥನೆ, ಬಸವ ಜ್ಯೋತಿ, ಶರಣ ಸಂಗಮ ಕಾರ್ಯಕ್ರಮಗಳು ಬಸವ ದಳದ ಜಿಲ್ಲಾ ಘಟಕದ ಮುಂದಾಳತ್ವದಲ್ಲೇ ನಡೆಯಲಿವೆ ಎಂದು ತಿಳಿಸಿದರು.

ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪೂರ ಮಾತನಾಡಿ, ಬಸವ ಧರ್ಮ ಪೀಠದ ಆದೇಶದಂತೆ ಪ್ರಾರ್ಥನೆಯಲ್ಲಿ ಬಸವಣ್ಣನವರ ವಚನಗಳಿಗೆ ಕೂಡಲಸಂಗಮದೇವ ಅಂಕಿತನಾಮವನ್ನೇ ಬಳಸಲಾಗುವುದು ಎಂದು ಹೇಳಿದರು.

ರಾಷ್ಟ್ರೀಯ ಬಸವ ದಳದ ರಾಜ್ಯ ಘಟಕದ ಉಪಾಧ್ಯಕ್ಷ ರಾಜೇಂದ್ರ ಜೊನ್ನಿಕೇರಿ ಮಾತನಾಡಿ, ರಾಷ್ಟ್ರೀಯ ಬಸವ ದಳ, ಜಿಲ್ಲಾ ಲಿಂಗಾಯತ ಸಮಾಜ, ಕ್ರಾಂತಿ ಗಂಗೋತ್ರಿ ಮಹಿಳಾ ಗಣಗಳು ಬಸವ ಧರ್ಮ ಪೀಠದ ಅಧೀನ ಸಂಸ್ಥೆಗಳು. ಬಸವ ಧರ್ಮ ಪೀಠದ ಆದೇಶವನ್ನು ಮಾತ್ರ ಪಾಲಿಸಬೇಕು. ಕೆಲವರು ಬಸವ ದಳ ರಾಷ್ಟ್ರೀಯ ಅಧ್ಯಕ್ಷರಾಗಿ ಭೋಸಿಕರ್ ಹೆಸರು ಘೋಷಿಸಿರುವುದು ಖಂಡನೀಯ. ಅದನ್ನು ಯಾರೂ ಒಪ್ಪಲಾಗದು ಎಂದು ನುಡಿದರು.

ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರು ಹಾಗೂ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ ಅವರನ್ನು ಸನ್ಮಾನಿಸಲಾಯಿತು.

ಬಸವ ದಳದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶಕುಮಾರ ಸ್ವಾಮಿ, ಮುಖಂಡರಾದ ಸಂಜುಕುಮಾರ ಪಾಟೀಲ, ಹುಡಗೆ ಗುಂಡಪ್ಪ, ಸಂಜೀವಕುಮಾರ ಪಾಟೀಲ ಚೊಂಡಿ, ಸೋಮಶೇಖರ ಪಾಟೀಲ, ಜಗನ್ನಾಥಯ್ಯ ಸ್ವಾಮಿ ಚಟ್ನಳ್ಳಿ, ರಾಜಶೇಖರ ಮಂಗಲಗಿ, ಶಂಭುಲಿಂಗಯ್ಯ ಸ್ವಾಮಿ ಕವಡಿಮಠ ಹುಡಗಿ, ಕಾಶಪ್ಪ ಸೀತಾ, ಅಶೋಕ ಶೀಲವಂತ, ವೀರಭದ್ರಪ್ಪ ಬುಯ್ಯಾ, ಸಿದ್ರಾಮ ಶೆಟಕಾರ್, ವಿಶ್ವನಾಥ ಉದಗಿರೆ, ವಿಶಾಲ್ ಪಾಟೀಲ, ಆನಂದ ಪಾಟೀಲ, ರಾಜಕುಮಾರ ಪಾಟೀಲ ಕನ್ನಳ್ಳಿ, ರಮೇಶಕುಮಾರ ಪಾಟೀಲ, ಗಣಪತಿ ಬಿರಾದಾರ, ನಿರಂಕಾರ ತುಪ್ಪದ, ಬಸವರಾಜ ಚನಶೆಟ್ಟಿ, ರವಿ ಪಾಪಡೆ, ಮಹಾಲಿಂಗ ಸ್ವಾಮಿ ಚಟ್ನಳ್ಳಿ ಮೊದಲಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.