ಬುಟ್ಟಿ ನೇಯ್ಗೆಯೇ ಬದುಕಿನ ಆಸರೆ

ಔರಾದ್: ಪ್ಲಾಸ್ಟಿಕ್ ಹಾಗೂ ಕಬ್ಬಿಣ ಸಾಮಗ್ರಿಗಳ ವ್ಯಾಪಕ ಬಳಕೆ ನಡುವೆಯೂ ಇಲ್ಲಿಯ ಕೈಕಾಡಿ ಗಲ್ಲಿ ಮಹಿಳೆಯರಿಗೆ ಬಿದಿರು ಬುಟ್ಟಿ ನೇಯುವ ಕಾಯಕವೇ ಬದುಕಿಗೆ ಆಸರೆಯಾಗಿದೆ.
ಇಲ್ಲಿಯ 30 ಕುಟುಂಬಗಳ ಮಹಿಳೆಯರು ಕಳೆದ ಐದು ದಶಕಗಳ ಹಿಂದಿನಿಂದಲೂ ನೇಯ್ಗೆ ಕಾಯಕ ಮಾಡುತ್ತ ಬಂದಿದ್ದಾರೆ. ಬಿದಿರು ಉತ್ಪನ್ನಗಳಿಗೆ ಬೇಡಿಕೆ ಕಮ್ಮಿಯಾದರೂ ಅವರ ಜೀವನಕ್ಕೆ ಅದೇ ಆಸರೆಯಾಗಿದೆ.
‘ನಾನು 20 ವರ್ಷಗಳಿಂದ ಬಿದಿರು ಬುಟ್ಟಿ ತಯಾರಿಸುತ್ತೇನೆ. ನಮ್ಮ ಕುಟುಂಬ ನಿರ್ವಹಣೆಗೆ ಇದೇ
ಆಧಾರ. ಇದೇ ಕೆಲಸದಿಂದ ಬಂದ ಹಣದಿಂದ ಗಂಡ, ನಾಲ್ಕು ಮಕ್ಕಳು ಉಪ ಜೀವನ ನಡೆಸುತ್ತಿದ್ದೇವೆ. ಮೊದಲಿಗೆ ನಮ್ಮ ನೇಯ್ಗೆ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ರೈತರು
ಈಗಲೂ ಬಿದಿರಿನ ಬುಟ್ಟಿ ಬಳಸುತ್ತಾರೆ. ತರಕಾರಿ, ಹೂ, ಹಣ್ಣು ವ್ಯಾಪಾರಿಗಳಿಗೆ ಇದೇ ಬುಟ್ಟಿ ತುಂಬ ಉಪಯೋಗಕಾರಿ. ರಸ್ತೆ ಕಾಮಗಾರಿ, ವಿವಿಧ ಕಟ್ಟಡ ಕೆಲಸಗಳಿಗೆ ನಮ್ಮ ಬುಟ್ಟಿ ಬಳಸುತ್ತಿದ್ದರು. ಆದರೆ ಈಗ ಕಬ್ಬಿಣ ಮತ್ತು ಪ್ಲಾಸ್ಟಿಕ್ ಬುಟ್ಟಿ ಬಳಸುತ್ತಿರುವುದರಿಂದ ನಮ್ಮ ಕೆಲಸದ ಮೇಲೆ ಪರಿಣಾಮ ಆಗಿದೆ’ ಎಂದು ಇಲ್ಲಿಯ ಬುಟ್ಟಿ ನೇಯುವ ಮಹಿಳೆ ಸುಂದರಾಬಾಯಿ ಚಂದರ ಹೇಳುತ್ತಾರೆ.
‘ನಾವು ದಶಕಗಳಿಂದ ಇದೇ ಕೆಲಸ ಮಾಡಿಕೊಂಡು ಬಂದಿರುವುದರಿಂದ ಬೇರೆ ಕೆಲಸ ಬರುವುದಿಲ್ಲ. ಹೀಗಾಗಿ ಬಂದಷ್ಟು ಬರಲಿ ಎಂದು ಈ ಸಾಂಪ್ರದಾಯಿಕ ಕಾಯಕ ಮುಂದುವರಿಸಿಕೊಂಡು ಬಂದಿದ್ದೇವೆ. ಈಗಲೂ ನಿತ್ಯ ಬುಟ್ಟಿ ತಯಾರಿಸುತ್ತೇವೆ. ಒಂದು ಬುಟ್ಟಿಗೆ ₹50 ರಿಂದ ₹200 ವರೆಗೆ ಮಾರಾಟವಾಗುತ್ತವೆ. ತಾಂಡಾ ಜನ ಈಗಲೂ ಧಾನ್ಯ ಸಂಗ್ರಹಣೆಗೆ ಬಿದಿರಿನ ಕರಸಿ ಬಳಸುತ್ತಾರೆ.
ಕೆಲವರು ಹಣ ಕೊಟ್ಟು ಮತ್ತೆ ಕೆಲ ರೈತರು ಧಾನ್ಯ ಕೊಟ್ಟು ಬುಟ್ಟಿ ಖರೀದಿಸುತ್ತಾರೆ’ ಎಂದು ಬುಟ್ಟಿ ಕಾಯಕ ನಂಬಿ ಬದುಕುತ್ತಿರುವ ಶಾಂತಾಬಾಯಿ ಹೇಳುತ್ತಾರೆ.
‘ಲಾಕ್‍ಡೌನ್‍ನಿಂದಾಗಿ ನಮ್ಮ ಕೆಲಸವೂ ನಿಂತು ಹೋಗಿದೆ. ತಯಾರಿಸಿದ ಬುಟ್ಟಿ ಮಾರಾಟವಾಗಿಲ್ಲ. ಇದ್ದ ಹಣ ಬಿದಿರು ತರಲು ಖರ್ಚು ಮಾಡಿದ್ದೇವೆ. ಹೀಗಾಗಿ ನಮ್ಮ ಕುಟುಂಬ ನಿರ್ವಹಣೆ ಈಗ ಕಷ್ಟವಾಗಿದೆ’ ಎನ್ನುತ್ತಾರೆ ಅವರು.
‘ಸರ್ಕಾರ ಲಾಕ್‍ಡೌನ್‍ನಿಂದ ತೊಂದರೆಗೊಳಗಾದ ವಿವಿಧ ಕುಶಲಕರ್ಮಿಗಳಿಗೆ ಪರಿಹಾರ ಕೊಡುತ್ತಿದೆ. ಆದರೆ ಬಿದಿರು ನೇಯುವ ಜನರಿಗೆ ಯಾವುದೇ ಪರಿಹಾರ ಕೊಟ್ಟಿಲ್ಲ. ಈ ಕಾಯಕದಲ್ಲಿ ಮಹಿಳೆಯರೇ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಸರ್ಕಾರ ಇವರಿಗೂ ಒಂದಿಷ್ಟು ಪರಿಹಾರ ಕೊಡಬೇಕು’ ಎಂದು ಸ್ಥಳೀಯ ಕಾಂಗ್ರೆಸ್ ಧುರೀಣ ರಾಮಣ್ಣ ವಡೆಯರ್ ಆಗ್ರಹಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.