ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾಲ್ಕಿ: ಅವ್ಯಾಹತ ಪ್ಲಾಸ್ಟಿಕ್ ಬಳಕೆ

ನಿತ್ಯ 17 ಟನ್ ಕಸದಲ್ಲಿ 3 ಟನ್ ಪ್ಲಾಸ್ಟಿಕ್ ಸಂಗ್ರಹ: ಜನರಲ್ಲಿ ಜಾಗೃತಿ ಕೊರತೆ
Published : 24 ಆಗಸ್ಟ್ 2024, 5:58 IST
Last Updated : 24 ಆಗಸ್ಟ್ 2024, 5:58 IST
ಫಾಲೋ ಮಾಡಿ
Comments

ಭಾಲ್ಕಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ಪ್ಲಾಸ್ಟಿಕ್ ಬಳಕೆಯ ಹಾನಿ ಕುರಿತ ಜಾಗೃತಿ, ಕಾನೂನಿನ ಭಯದ ಕೊರತೆಯಿಂದ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ಉಪಯೋಗ ಎಲ್ಲೆಡೆ ಅವ್ಯಾಹತವಾಗಿದೆ.

ಪಟ್ಟಣವೊಂದರಲ್ಲೇ ನಿತ್ಯ ಸಂಗ್ರಹವಾಗುವ ಸುಮಾರು 17 ಟನ್ ಕಸದಲ್ಲಿ ಅಂದಾಜು ಮೂರು ಟನ್ ಕಸ ಪ್ಲಾಸ್ಟಿಕ್ ವಸ್ತುಗಳ ಕೊಡುಗೆ ಆಗಿದೆ. ಈ ಮೂಲಕ ವ್ಯಾಪಾರಿಗಳು, ಖರೀದಿದಾರರು, ಅಕ್ಷರಸ್ಥರು, ಅನಕ್ಷರಸ್ಥರೂ, ಸಾರ್ವಜನಿಕರು ಅರಿವಿನ ಕೊರತೆ, ನಿಷ್ಕಾಳಜಿ ಯಿಂದಾಗಿ ಪರಿಸರ ಮಾಲಿನ್ಯಕ್ಕೆ ತಮ್ಮದೇ ರೀತಿಯಲ್ಲಿ ಹೆಚ್ಚಿನ ಕಾಣಿಕೆ ನೀಡುತ್ತಿದ್ದಾರೆ ಎಂದು ಪ್ರಜ್ಞಾವಂತ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ 2022ರ ಜುಲೈ 1ರಿಂದ ಕಡ್ಡಾಯವಾಗಿ ಏಕಬಳಕೆ ಪ್ಲಾಸ್ಟಿಕ್‌ ನಿಷೇಧಿಸಿದೆ. ಆದರೆ ನಗರದ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್‌ ಮಾರಾಟ ಹಾಗೂ ಬಳಕೆ ಮಾತ್ರ ನಿಂತಿಲ್ಲ. ಬಹುತೇಕ ಸಾರ್ವಜನಿಕರು, ಕಿರಾಣಿ, ಹಣ್ಣು, ಹೋಟೆಲ್‌, ಮಾಂಸ, ಮದ್ಯ ಸೇರಿ ಬೀದಿಬದಿಯ ವ್ಯಾಪಾರಿಗಳು ಪ್ಲಾಸ್ಟಿಕ್‌ ಬಳಕೆಯನ್ನೇ ನೆಚ್ಚಿಕೊಂಡಿದ್ದಾರೆ.

ಕಸದಲ್ಲಿ ಪ್ಲಾಸ್ಟಿಕ್‌ ಅಧಿಕ ಪಾಲು ಪಡೆದಿದೆ ಎನ್ನುವುದು ಆತಂಕಕಾರಿ ಸಂಗತಿಯಾಗಿದೆ. ಪಾಸ್ಟಿಕ್‌ಗೆ ಪರ್ಯಾಯವಾಗಿ ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಕೈಚೀಲ ಒದಗಿಸಲು ಸರ್ಕಾರ, ಪುರಸಭೆ, ಎನ್‌ಜಿಒ, ಸಂಘ, ಸಂಸ್ಥೆಗಳು ಕ್ರಮ ಕೈಗೊಂಡರೆ ಸರ್ಕಾರದ ಆದೇಶ ಕಟ್ಟುನಿಟ್ಟಿನಿಂದ ಪಾಲನೆ ಆಗಲಿದೆ. ಇಡೀ ಜೀವಸಂಕುಲಕ್ಕೆ ಹಾನಿಯಾಗಿರುವ ಪ್ಲಾಸ್ಟಿಕ್‌ ಬಳಕೆಯ ಸಂಪೂರ್ಣ ನಿಷೇಧಕ್ಕೆ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತ ವ್ಯವಸ್ಥೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತ ಸಾರ್ವಜನಿಕರ ಒತ್ತಾಯವಾಗಿದೆ.

ಭಾಲ್ಕಿಯಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಲ್ಲಿ ಅಂಗಡಿಯಿಂದ ಸಾಮಾನು ಕೊಂಡೊಯ್ಯುತ್ತಿರುವ ಸಾರ್ವಜನಿಕರು
ಭಾಲ್ಕಿಯಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಲ್ಲಿ ಅಂಗಡಿಯಿಂದ ಸಾಮಾನು ಕೊಂಡೊಯ್ಯುತ್ತಿರುವ ಸಾರ್ವಜನಿಕರು

ಇಂದು ಪ್ಲಾಸ್ಟಿಕ್‌ ಎಂಬುದು ಮಾನವನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಪ್ಲಾಸ್ಟಿಕ್‌ ಇಲ್ಲದ ಬದುಕನ್ನು ಕಾಣಲು ಸಾಧ್ಯವಿಲ್ಲದಂತಾಗಿದೆ. ಇಂತಹ ಕ್ಲಿಷ್ಟಕರ ಸಮಯದಲ್ಲಿ ಈ ಪ್ಲಾಸ್ಟಿಕ್‌ನ್ನು ಪರಿಸರದ ಸಮತೋಲನವನ್ನು ಕಾಪಾಡಲು ಹಾಗೂ ಮುಂಬರುವ ಪೀಳಿಗೆಯ ಆರೋಗ್ಯವಂತ ಬದುಕಿನ ಹಿತದೃಷ್ಟಿಯಿಂದ ಅನಿವಾರ್ಯವಾಗಿ ದೂರ ಸರಿಸಲೇಬೇಕಾದ ಪರಿಸ್ಥಿತಿ ಬಂದೊದಗಿದೆ. ಹಾಗಾಗಿ, ವ್ಯಾಪಾರಿಗಳು, ಸಾರ್ವಜನಿಕರು ಸ್ವಯಂ ಇಚ್ಛೆ, ಆಸಕ್ತಿ, ದೃಢ ನಿರ್ಧಾರದ ಮೂಲಕ ಬಟ್ಟೆಯಿಂದ ತಯಾರಿಸಿದ ಕೈಚೀಲ, ಪೇಪರ್ ನಿಂದ ತಯಾರಿಸಿದ ಪಾಕೆಟ್ ಸೇರಿದಂತೆ ಇತರ ಪರಿಸರ ಸ್ನೇಹಿ ವಸ್ತುಗಳ ಬಳಕೆಗೆ ಮುಂದಾಗಬೇಕು. ಎಲ್ಲ ಗ್ರಾಮ ಪಂಚಾಯಿತಿ, ಪುರಸಭೆ ಅಧಿಕಾರಿಗಳು ಕಾನೂನು ಉಲ್ಲಂಘಿಸುವ ಮಾರಾಟಗಾರರ ವಿರುದ್ಧ ಸೂಕ್ತ ದಂಡ, ಶಿಕ್ಷೆ ವಿಧಿಸಲು ಮುಂದಾಗಬೇಕು. ಅಂದಾಗ ಮಾತ್ರ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ಕಡಿವಾಣ ಬೀಳಲು ಸಾಧ್ಯ ಎನ್ನುತ್ತಾರೆ ಪ್ರಜ್ಞಾವಂತ ಯುವಕರು.

ಭಾಲ್ಕಿಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಲ್ಲಿ ಅಂಗಡಿಯಿಂದ ಸಾಮಾನು ಕೊಂಡೊಯ್ಯುತ್ತಿರುವ ಸಾರ್ವಜನಿಕರು
ಭಾಲ್ಕಿಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಲ್ಲಿ ಅಂಗಡಿಯಿಂದ ಸಾಮಾನು ಕೊಂಡೊಯ್ಯುತ್ತಿರುವ ಸಾರ್ವಜನಿಕರು

ಪಟ್ಟಣದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು ಎಂದು ಈಗಾಗಲೇ ಎಲ್ಲ ವ್ಯಾಪಾರಿಗಳಿಗೆ ಸೂಚನೆ, ಪೇಪರ್ ನೋಟಿಫಿಕೇಶನ್ ಮೂಲಕ ತಿಳಿಸಿದ್ದೇವೆ. ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಶಪಡಿಸಿಕೊಂಡು ದಂಡವನ್ನು ವಿಧಿಸಿದ್ದೇವೆ. ಇನ್ನು ಕೆಲ ಶಾಲೆಗಳಲ್ಲಿ ಪ್ಲಾಸ್ಟಿಕ್ ಬಳಕೆಯ ಅಪಾಯದ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಿದ್ದೇವೆ. ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಪಟ್ಟಣ ವಾಸಿಗಳ ಸಹಕಾರ, ಕಟ್ಟುನಿಟ್ಟಿನ ಕಾನೂನು ಕ್ರಮದ ಮೂಲಕ ಪ್ಲಾಸ್ಟಿಕ್ ರಹಿತ ಪಟ್ಟಣ ನಿರ್ಮಿಸಲು ಶ್ರಮಿಸುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ ಹೇಳಿದರು.

ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಸರ್ಕಾರ ನಿಷೇಧಿಸಿರುವ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟಗಾರರು ಖರೀದಿದಾರರು ಬಳಸದಂತೆ ಜಾಗೃತಿ ವಹಿಸುವುದು ಅಗತ್ಯ.
ಶಂಭುಲಿಂಗ ಕಾಮಣ್ಣ ಪಟ್ಟಣ ನಿವಾಸಿ
ಸಂಗಮೇಶ ಕಾರಬಾರಿ
ಸಂಗಮೇಶ ಕಾರಬಾರಿ
ಪ್ಲಾಸ್ಟಿಕ್ ವಸ್ತುಗಳ ಬಳಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಪ್ಲಾಸ್ಟಿಕ್ ರಹಿತ ಪಟ್ಟಣ ರೂಪಿಸಲು ಶ್ರಮಿಸಲಾಗುವುದು.
ಸಂಗಮೇಶ ಕಾರಬಾರಿ ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT