ಬೀದರ್: ನಾಗರಿಕ ವಿಮಾನ ಸಂಚಾರ ಸ್ಥಗಿತಗೊಂಡ ಬೆನ್ನಲ್ಲೇ ಭದ್ರತಾ ಸಿಬ್ಬಂದಿಯನ್ನು ಬೇರೆಡೆ ನಿಯೋಜಿಸಲು ನಿರ್ಧರಿಸಿರುವುದರಿಂದ ಬೀದರ್ ವಿಮಾನ ನಿಲ್ದಾಣ ಮುಚ್ಚುವ ಹಂತಕ್ಕೆ ಬಂದಿದೆ.
ಬೀದರ್ ವಿಮಾನ ನಿಲ್ದಾಣದ ಭದ್ರತೆಗೆ ಕರ್ನಾಟಕ ರಾಜ್ಯ ಕೈಗಾರಿಕೆ ಭದ್ರತಾ ಪಡೆಯ (ಕೆಎಸ್‌ಐಎಸ್‌ಎಫ್) ಅಧಿಕಾರಿ, ಸಿಬ್ಬಂದಿ ಸೇರಿದಂತೆ ಒಟ್ಟು 45 ಜನರನ್ನು ನಿಯೋಜಿಸಲಾಗಿತ್ತು. ವಿಮಾನ ಹಾರಾಟ ಸ್ಥಗಿತಗೊಂಡ ನಂತರ ಅವರನ್ನು ತಾತ್ಕಾಲಿಕವಾಗಿ ಡಿಎಆರ್‌ನಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ಈಗ ವಿಜಯಪುರದ ನೂತನ ವಿಮಾನ ನಿಲ್ದಾಣ ಆರಂಭಿಸಲು ನಿರ್ಧರಿಸಲಾಗಿದ್ದು, ಅಲ್ಲಿನ ಭದ್ರತೆಗಾಗಿ ಇಲ್ಲಿನ 40 ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಈ ಕುರಿತ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಪ್ರಯಾಣಿಕರ ಬೇಡಿಕೆಯ ಸಮಯಕ್ಕೆ ತಕ್ಕಂತೆ ವಿಮಾನ ಸಂಚರಿಸದ ಕಾರಣ ಕಂಪನಿಯ ಆದಾಯದಲ್ಲಿ ನಷ್ಟ ಉಂಟಾಗಿ ‘ಸ್ಟಾರ್ ಏರ್’, ಒಪ್ಪಂದದ ಅವಧಿ ಪೂರ್ಣಗೊಳ್ಳುವುದಕ್ಕೂ ಮುನ್ನವೇ 2023ರ ಡಿಸೆಂಬರ್ 26ರಂದು ವಿಮಾನ ಸಂಚಾರ ಸ್ಥಗಿತಗೊಳಿಸಿತ್ತು. ಎಂಟು ತಿಂಗಳಾಗುತ್ತ ಬಂದರೂ ಈ ನಿಟ್ಟಿನಲ್ಲಿ ಯಾವುದೇ ಬೆಳವಣಿಗೆ ಆಗಿರಲಿಲ್ಲ.
ಕೆಲ ದಿನಗಳ ಹಿಂದೆ ಸಂಸದ ಸಾಗರ ಖಂಡ್ರೆ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರನ್ನು ಭೇಟಿ ಮಾಡಿ ಹೊಸದಾಗಿ ವಿಮಾನ ಹಾರಾಟ ಪ್ರಾರಂಭಿಸುವಂತೆ ಮನವಿ ಮಾಡಿದ್ದರು. ಜೊತೆಗೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರೂ ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರನ್ನು ಭೇಟಿಯಾಗಿ ಅಧಿಕಾರಿಗಳೊಂದಿಗೆ ಸಾಧಕ–ಬಾಧಕ ಕುರಿತು ಸಭೆ ನಡೆಸಿ, ವಿಮಾನ ಹಾರಾಟ ಪುನರಾರಂಭಿಸುವ ಆಶಯ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಭದ್ರತಾ ಸಿಬ್ಬಂದಿಯನ್ನು ಸ್ಥಳಾಂತರಿಸುವ ನಿರ್ಧಾರ ಹೊರಬಿದ್ದಿದೆ.
Quote - ನೂರಾರು ಕೋಟಿ ಖರ್ಚು ಮಾಡಿ ಗಡಿ ಜಿಲ್ಲೆ ಬೀದರ್‌ನಲ್ಲಿ ಆರಂಭಿಸಿದ್ದ ವಿಮಾನ ಸೇವೆಯನ್ನು ನಿಷ್ಕ್ರಿಯಗೊಳಿಸದೆ ಬಲಪಡಿಸಲು ಕ್ರಮ ಕೈಗೊಳ್ಳಬೇಕು. –ಬಿ.ಜಿ. ಶೆಟಕಾರ ಅಧ್ಯಕ್ಷ ಬೀದರ್ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ
ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿ ಮಾಡಿದಾಗ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಸದ್ಯದ ಬೆಳವಣಿಗೆ ಬಗ್ಗೆ ಮತ್ತೊಮ್ಮೆ ಸಚಿವರೊಂದಿಗೆ ಚರ್ಚಿಸುತ್ತೇನೆ.
–ಸಾಗರ್ ಖಂಡ್ರೆ ಸಂಸದ ಬೀದರ್
ವಿಮಾನ ಹಾರಾಟ ಸ್ಥಗಿತವೇಕೆ?
2008–09ರಲ್ಲಿ ಭಾರತೀಯ ವಾಯುಪಡೆಯ ಮನವೊಲಿಸಿ ವಿಮಾನ ತರಬೇತಿ ಕೇಂದ್ರದ ರನ್‌ವೇ ಬಳಸಿಕೊಂಡು ಬೀದರ್–ಬೆಂಗಳೂರು ನಡುವೆ ವಿಮಾನ ಸೇವೆ ನಾಗರಿಕ ವಿಮಾನ ಸೇವೆ ಆರಂಭಿಸಲಾಗಿತ್ತು. ಕೇಂದ್ರ ಸರ್ಕಾರವು 2019–20ರಲ್ಲಿ ‘ಉಡಾನ್’ ಯೋಜನೆ ವ್ಯಾಪ್ತಿಗೆ ಇದನ್ನು ತಂದು ₹15 ಕೋಟಿ ವೆಚ್ಚದಲ್ಲಿ 13.62 ಎಕರೆ ಜಮೀನು ಸ್ವಾಧೀನಕ್ಕೆ ಪಡೆದು ಟರ್ಮಿನಲ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಿತ್ತು. ಬೀದರ್–ಬೆಂಗಳೂರಿಗೆ ಮಾತ್ರ ವಿಮಾನ ಸೇವೆ ಸೀಮಿತವಾಗಿತ್ತು. ವಿಮಾನದ ಸಮಯವೂ ಸೂಕ್ತವಾಗಿರಲಿಲ್ಲ. 150 ಕಿ.ಮೀ ದೂರದ ಹೈದರಾಬಾದ್‌ನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದು ಹಾಗೂ ಪಕ್ಕದ ಕಲಬುರಗಿಯಲ್ಲೂ ವಿಮಾನ ನಿಲ್ದಾಣ ನಿರ್ಮಿಸಿದ್ದರಿಂದ ಇಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಬರುತ್ತಿರಲಿಲ್ಲ. ನಷ್ಟವಾಗುತ್ತದೆ ಎಂಬ ಕಾರಣಕ್ಕೆ ವಿಮಾನಯಾನ ಕಂಪನಿಗಳು ಬೀದರ್‌ನಿಂದ ವಿಮಾನ ಸೇವೆ ಆರಂಭಿಸಲು ಮುಂದೆ ಬರುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.