ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ| ಸಕ್ಕರೆ ಕಾರ್ಖಾನೆ, ಸೋಯಾಬಿನ ಎಣ್ಣೆ ಘಟಕ ಸ್ಥಾಪನೆ ಭರವಸೆ

ಬಸವಕಲ್ಯಾಣ ಶಾಸಕ ಶರಣು ಸಲಗರ ಸಂದರ್ಶನ
Published 28 ಮೇ 2023, 23:30 IST
Last Updated 28 ಮೇ 2023, 23:30 IST
ಅಕ್ಷರ ಗಾತ್ರ

ಬಸವಕಲ್ಯಾಣ: ಈ ಕ್ಷೇತ್ರದಿಂದ ಬಿಜೆಪಿಯಿಂದ ಎರಡನೇ ಸಲ ಶಾಸಕರಾಗಿ ಆಯ್ಕೆ ಆಗಿರುವ ಹೆಗ್ಗಳಿಕೆ ಶರಣು ಸಲಗರ ಅವರದ್ದು. ಅವರು ಪ್ರಜಾವಾಣಿ ನಡೆಸಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಬಸವಕಲ್ಯಾಣ- ಹುಲಸೂರ ತಾಲ್ಲೂಕುಗಳನ್ನು ಒಳಗೊಂಡಿರುವ ಕ್ಷೇತ್ರದ ಪ್ರಗತಿಯ ಕನಸುಗಳನ್ನು ಹಂಚಿಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಪುತ್ರ ಎದುರಾಳಿ ಆಗಿದ್ದರೂ ಗೆಲುವು ಸಾಧಿಸಿದ ಸಂತಸದಲ್ಲಿರುವ ಇವರು ಕಾಂಗ್ರೆಸ್ ರಾಜ್ಯದ ಚುಕ್ಕಾಣಿ ಹಿಡಿದಿರುವ ಕಾರಣ ಯೋಜನೆಗಳಿಗೆ ಅಡೆತಡೆ ಆಗಬಹುದು. ನಗರ ಮತ್ತು ಗ್ರಾಮೀಣ ಸಮಸ್ಯೆಗಳನ್ನು ಬಗೆಹರಿಸುವುದು ಮತ್ತು ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಹೇಗೆ ಈಡೇರಿಸುತ್ತಿರಿ ಎಂಬ ಇತ್ಯಾದಿ ಪ್ರಶ್ನೆಗಳಿಗೆ ಅವರು ಇಲ್ಲಿ ಉತ್ತರಿಸಿದ್ದಾರೆ.

* ಎರಡನೇ ಸಲ ಶಾಸಕ ಆಗಿದ್ದರಿಂದ ನಿಮಗೆ ಇಲ್ಲಿನ ಪರಿಸ್ಥಿತಿ ಬಗ್ಗೆ ಸಂಪೂರ್ಣ ಅರಿವಿದೆ. ಸದ್ಯಕ್ಕೆ ಯಾವ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೀರಿ?

ಮಳೆಗಾಲದಲ್ಲಿ ನಗರದಲ್ಲಿನ ಕೆಲವೆಡೆ ನೀರು ನುಗ್ಗಿ ಹಾನಿ ಆಗುತ್ತಿದೆ. ಆದ್ದರಿಂದ 15 ದಿನದಲ್ಲಿ ಚರಂಡಿ ವ್ಯವಸ್ಥೆ ಸುಧಾರಣೆಗೆ ನಗರಸಭೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ನಗರೋತ್ಥಾನ ಯೋಜನೆಯಲ್ಲಿ ₹21 ಕೋಟಿಯ ಕಾಮಗಾರಿಗೆ ಚುನಾವಣಾ ಪೂರ್ವದಲ್ಲಿಯೇ ಗುದ್ದಲಿಪೂಜೆ ನೆರವೇರಿಸಿದ್ದು, ಕೆಲಸ ಶೀಘ್ರ ಪೂರ್ಣಗೊಳಿಸಲು ನಿರ್ದೇಶನ ನೀಡುತ್ತೇನೆ. ಬೀಜ, ರಸಗೊಬ್ಬರದ ಸರಿಯಾದ ವಿತರಣೆಗೂ ಸಂಬಂಧಿತರಿಗೆ ಕೇಳಿಕೊಳ್ಳುತ್ತೇನೆ.

* ಚುನಾವಣೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದು ಒಳಗೊಂಡು ಕೆಲ ಮಹತ್ವದ ಭರವಸೆಗಳನ್ನು ನೀಡಿದ್ದೀರಿ. ಅವುಗಳನ್ನು ಈಡೇರಿಸುತ್ತೀರಾ?

ಕಬ್ಬು ಬೆಳೆಯುವ ಕ್ಷೇತ್ರ ಸಾಕಷ್ಟಿದ್ದರೂ ಜಿಲ್ಲೆಯಲ್ಲಿ ಇದೊಂದೇ ತಾಲ್ಲೂಕಿನಲ್ಲಿ ಸಕ್ಕರೆ ಖಾರ್ಖಾನೆ ಇಲ್ಲ. ಆದ್ದರಿಂದ ರೈತರ ಹಿತಕ್ಕಾಗಿ ಕಾರ್ಖಾನೆ ಹಾಗೂ ಈ ಭಾಗದಲ್ಲಿ ಶೇ 90 ರಷ್ಟು ರೈತರು ಸೋಯಾಬಿನ್ ಬೆಳೆದರೂ ಸಂಸ್ಕರಣೆ ಅಥವಾ ಎಣ್ಣೆ ತಯಾರಿಕೆಗೆ ವ್ಯವಸ್ಥೆ ಇಲ್ಲ. ಇಂಥ ಘಟಕ ಸ್ಥಾಪಿಸುವುದಾಗಿ ಚುನಾವಣೆಯಲ್ಲಿ ಭರವಸೆ ನೀಡಲಾಗಿತ್ತು. ಅದರಂತೆ ಆರು ತಿಂಗಳಲ್ಲಿ ಯಾವುದಾದರೊಂದು ಘಟಕ ಸ್ಥಾಪಿಸುವುದು ನಿಶ್ಚಿತ.

* ಎಲ್ಲೆಡೆ ಬಿಜೆಪಿ ವಿರುದ್ಧದ ಅಲೆ ಇತ್ತು. ಅಲ್ಲದೆ ಇಲ್ಲಿ ಮಾಜಿ ಮುಖ್ಯಮಂತ್ರಿ ಅವರ ಪುತ್ರ ಎದುರಾಳಿ ಆಗಿದ್ದರೂ ನೀಮಗೆ ಹೇಗೆ ಗೆಲುವಾಯಿತು?

ಉಪ ಚುನಾವಣೆಯ ನಂತರ ನಾನು 20 ತಿಂಗಳು ಕ್ಷೇತ್ರದಲ್ಲೇ ಉಳಿದು ಜನರ ಕಷ್ಟದಲ್ಲಿ ಭಾಗಿ ಆಗಿರುವುದು ನನ್ನ ಗೆಲುವಿಗೆ ಸಹಕಾರಿ ಆಯಿತು. ಅದಕ್ಕಿಂತ ಮೊದಲು ಕೋವಿಡ್ ಕಾಲದಲ್ಲೂ ರೋಗ ಭೀತಿಯಿಂದ ಅನೇಕರು ಮನೆಯಲ್ಲಿ ಕುಳಿತಿದ್ದಾಗ ನಾನು ಊರೂರು ಹೋಗಿ ಆಹಾರಧಾನ್ಯ ವಿತರಿಸಿದ್ದರಿಂದ ಸಮಸ್ಯೆಯಾದಾಗ ನೆರವಾಗುತ್ತಾರೆ ಎಂಬ ಭರವಸೆ ಬೆಳೆದಿದ್ದರಿಂದ ಮತದಾರರು ನನಗೆ ಅನ್ಯಾಯ ಮಾಡಲಿಲ್ಲ.

* ಹೇಮರೆಡ್ಡಿ ಮಲ್ಲಮ್ಮ ಭವನಕ್ಕಾಗಿ ಜಮೀನು ಮಂಜೂರು ಆಗಿದೆಯೇ? ಬಾಕಿ ಉಳಿದ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿವೆಯೇ?

ಹೇಮರೆಡ್ಡಿ ಮಲ್ಲಮ್ಮ ಭವನಕ್ಕೆ ಜಮೀನು ಮಂಜೂರು ಆಗಿದೆ. 2025ರಲ್ಲಿ ಅನುಭವ ಮಂಟಪದ ಕಾಮಗಾರಿ ಸಹ ಪೂರ್ಣಗೊಳ್ಳಲಿದೆ. ಅದೇ ಕಾಲಕ್ಕೆ ಶಿವಾಜಿ ಮಹಾರಾಜ ಪಾರ್ಕ್ ಕೆಲಸವೂ ಮುಗಿಯುವುದು. ಶಿಕ್ಷಕರ ಗುರುಭವನಕ್ಕೆ ₹50 ಲಕ್ಷ ಅನುದಾನ ದೊರೆತಿದೆ. ಬಸವಕಲ್ಯಾಣ ಜಿಲ್ಲೆ ಆಗಿಸುವುದಕ್ಕೆ ಹಾಗೂ ನಗರದಲ್ಲಿ ವರ್ತುಲ ರಸ್ತೆ ನಿರ್ಮಾಣಕ್ಕಾಗಿಯೂ ಪ್ರಯತ್ನಿಸುತ್ತೇನೆ.

* ಕಾಂಗ್ರೆಸ್ ಅಧಿಕಾರದಲ್ಲಿರುವ ಕಾರಣ ಅಭಿವೃದ್ಧಿಗೆ ಅಡೆತಡೆ ಆಗುವುದಿಲ್ಲವೇ? ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಕಾಂಗ್ರೆಸ್ ಕೈಯಲ್ಲಿ ಇರುವುದರಿಂದ ಅಭಿವೃದ್ಧಿಗೆ ಅಡೆತಡೆ ಆಗಲಿದೆ. ಆದರೂ, ಯಾವುದಕ್ಕೂ ಪ್ರಯತ್ನ ಬಿಡುವುದಿಲ್ಲ. ಐದು ಗ್ಯಾರಂಟಿ ಯೋಜನೆಗಳು ಜಾರಿಗೊಳಿಸುವುದು ಸರ್ಕಾರದ ಆದ್ಯ ಕರ್ತವ್ಯ. ಹೀಗಾದಾಗ ನಾನೇ ಸದನದಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸುತ್ತೇನೆ. ಅದಾಗದಿದ್ದರೆ ಜಾರಿಗೆ ಆಗ್ರಹಿಸಿ ಬೀದಿಯಲ್ಲಿ ಹೋರಾಟ ಮಾಡುವುದು ಗ್ಯಾರಂಟಿ.

ಶರಣು ಸಲಗರ
ಶರಣು ಸಲಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT