ಮಂಗಳವಾರ, ಸೆಪ್ಟೆಂಬರ್ 28, 2021
26 °C

ಭಾಲ್ಕಿ: ಬೀದರ್‌ ಬೇಸ್ ರಸ್ತೆ ಸಂಚಾರಕ್ಕೆ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ಪಟ್ಟಣದ ವಿವಿಧ ಓಣಿಗಳಿಗೆ ಪುರಸಭೆ ಅಧ್ಯಕ್ಷ ಬಸವರಾಜ ವಂಕೆ ಶನಿವಾರ ಪುರಸಭೆ ಅಧಿಕಾರಿ ಗಳೊಂದಿಗೆ ಭೇಟಿ ನೀಡಿ ರಸ್ತೆ, ಚರಂಡಿ, ವಿದ್ಯುತ್‌ ದೀಪಗಳ ಸ್ಥಿತಿಗತಿ ಪರಿಶೀಲಿಸಿದರು.

ಮಳೆಯಿಂದ ಶೀಥಿಲಾವಸ್ಥೆ, ಅಪಾಯದ ಸ್ಥಿತಿಯಲ್ಲಿರುವ ಬೀದರ್‌ ಬೇಸ್‌ (ಕಾಲಾ ಹನುಮಾನ ಮಂದಿರ ಹತ್ತಿರ) ಮತ್ತು ಗಡಿ ಕಟ್ಟಡವನ್ನು ಪರಿಶೀಲಿಸಿದರು.

ಹಳೇ ಪಟ್ಟಣದ ಜನರು ಹೊಸ ಭಾಲ್ಕಿ ಪಟ್ಟಣಕ್ಕೆ ಸಂಚರಿಸಲು ಅತ್ಯಂತ ಹಳೆಯ ಕಟ್ಟಡ ಹೊಂದಿರುವ ಬೀದರ ಬೇಸ್‍ ರಸ್ತೆ ಬಳಸುತ್ತಾರೆ. ಸದ್ಯ ಬೀದರ್‌ ಬೇಸ್ ರಸ್ತೆ ಜನಸಂಚಾರಕ್ಕೆ ಯೋಗ್ಯವಿಲ್ಲ ಎಂದು ಪುರಸಭೆ ಎಂಜಿನಿಯರ್‌ಗಳು ತಿಳಿಸಿದ್ದರಿಂದ ಜನ ಸಂಚಾರ ತಡೆಯಲು ಬ್ಯಾರಿಕೇಡ್ ಅಳವಡಿಸಲು ಪುರಸಭೆ ಅಧ್ಯಕ್ಷ ಬಸವರಾಜ ವಂಕೆ ಸೂಚಿಸಿದರು.

ಪುರಾತನ ಕಾಲದ ಗಡಿ ಮೂಲೆ ಭಾಗ ಬಿರುಕು ಬಿಟ್ಟಿದ್ದು ಬೀಳುವ ಸ್ಥಿತಿಯಲ್ಲಿದೆ. ಪರಿಣತರ ಸಲಹೆ ಪಡೆದು ಅದನ್ನು ದುರಸ್ಥಿಗೊಳಿಸಲು ಸ್ಥಳದಲ್ಲಿದ್ದ ಎಂಜಿನಿಯರರಿಗೆ ಸೂಚಿಸಿದರು.

ಮುಖ್ಯರಸ್ತೆಗಳಲ್ಲಿ ನಿಂತ ನೀರು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಕೆಲವು ಕಡೆ ಚರಂಡಿಗಳಲ್ಲಿ ಕಸಕಡ್ಡಿ, ಗಲೀಜು ತುಂಬಿರುವುದನ್ನು ಶುಚಿಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ಪುರಸಭೆ ಸದಸ್ಯ ವಿಜಯಕುಮಾರ ರಾಜಭವನ, ಪರಿಸರ ಎಂಜಿನಿಯರ್‌ ಸಂಗಮೇಶ, ಸಮುದಾಯ ಸಂಘಟನಾ ಅಧಿಕಾರಿ ಸ್ವಾಮಿದಾಸ್, ವಹಿದ್‌ ಪಾಶಾ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.