ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಶಂಕು ಸ್ಥಿತಿಯಲ್ಲಿ ಬೀಜ ಖರೀದಿಸಿದ ರೈತರು

ಸೋಯಾಬಿನ್ ಬೀಜ ಬಿತ್ತದಂತೆ ಕೃಷಿ ಇಲಾಖೆ ತಾಕೀತು
Last Updated 10 ಜೂನ್ 2020, 8:52 IST
ಅಕ್ಷರ ಗಾತ್ರ

ಬಸವಕಲ್ಯಾಣ: ಸೋಯಾಬಿನ್ ಕಳಪೆ ಬೀಜ ಪೂರೈಕೆ ಆಗಿರುವುದರಿಂದ ಅದನ್ನು ಬಿತ್ತದೆ ಅನ್ಯ ಬೆಳೆ ಬೆಳೆಯಬೇಕು ಎಂದು ಕೃಷಿ ಇಲಾಖೆ ಸೂಚಿಸಿದ್ದರಿಂದ ಈಗಾಗಲೇ ಬೀಜ ಖರೀದಿಸಿರುವ ಹಾಗೂ ಅಲ್ಪಸ್ವಲ್ಪ ಬಿತ್ತನೆ ಕೈಗೊಂಡಿರುವ ತಾಲ್ಲೂಕಿನ ರೈತರು ತ್ರಿಶಂಕು ಸ್ಥಿತಿ ಅನುಭವಿಸಬೇಕಾಗಿದೆ.

ತಾಲ್ಲೂಕಿನಲ್ಲಿ ನೀರಾವರಿ ಆಧಾರಿತ ಬೇಸಾಯ ನಗಣ್ಯವಾಗಿದೆ. ಆದ್ದರಿಂದ ಇಲ್ಲಿನ ರೈತರು ಮೊದಲಿನಿಂದಲೂ ವಾಣಿಜ್ಯ ಬೆಳೆಗಳ ಬಿತ್ತನೆಗೆ ಆಸಕ್ತಿ ತೋರಿದ್ದಾರೆ. ತೊಗರಿ, ಸೂರ್ಯಕಾಂತಿ ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಆದರೆ, ದಶಕದಿಂದ ಸೋಯಾಬಿನ್ ಬಿತ್ತನೆ ಕ್ಷೇತ್ರ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ಈ ವರ್ಷ ಒಟ್ಟು 77 ಸಾವಿರ ಹೆಕ್ಟೇರ್ ಬಿತ್ತನೆ ಕ್ಷೇತ್ರದಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ 39 ಸಾವಿರ ಹೆಕ್ಟೇರ್ ನಲ್ಲಿ ಸೋಯಾಬಿನ್ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ, ಕೃಷಿ ಇಲಾಖೆಯವರು ಇದ್ದಕ್ಕಿದ್ದಂತೆ ಬೀಜ ಕಳಪೆ ಆಗಿದ್ದರಿಂದ ಮೊಳಕೆ ಸರಿಯಾಗಿ ಬರುವ ಸಾಧ್ಯತೆ ಕಡಿಮೆಯಾಗಿದೆ ಎಂದು ಹೇಳಿದ್ದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ.

‘ಉತ್ತರ ಭಾರತದ ಕೆಲ ರಾಜ್ಯಗಳಲ್ಲಿನ ಬೀಜ ಅಷ್ಟೊಂದು ಸಶಕ್ತ ಆಗಿಲ್ಲ. ರಾಜ್ಯದ ಕೆಲವೆಡೆ ಈ ಬೀಜ ಬಿತ್ತಿದ್ದರೂ ಮೊಳಕೆ ಬಂದಿಲ್ಲ. ಈ ಭಾಗದಲ್ಲಿ ಇನ್ನೂ ಹೆಚ್ಚಿನ ಬಿತ್ತನೆ ಕೈಗೊಂಡಿಲ್ಲ. ಅದಕ್ಕೂ ಮೊದಲೇ ಇಂಥ ಬೀಜ ಬಿತ್ತದಿರಲು ಸೂಚಿಸಲಾಗುತ್ತಿದೆ. ಇದಲ್ಲದೆ ಇದುವರೆಗೂ ಸಾಕಷ್ಟು ಹಸಿ ಆಗುವಷ್ಟು ಮಳೆಯೂ ಬಂದಿಲ್ಲ. ಈ ಕಾರಣ ಬಿತ್ತನೆ ಮುಂದೂಡಬೇಕು ಹಾಗೂ ಇತರೆ ಬೆಳೆಗಳನ್ನು ಬೆಳೆಯಬೇಕು’ ಎಂದು ಕೃಷಿ ಸಹಾಯಕ ನಿರ್ದೇಶಕ ವೀರಶೆಟ್ಟಿ ರಾಠೋಡ ಸೂಚಿಸಿದ್ದಾರೆ.

‘ಸೋಯಾಬಿನ್ ಬಿತ್ತುವುದೇ ಆಗಿದ್ದರೆ ಮಹಾರಾಷ್ಟ್ರದ ಬೀಜ ಉತ್ತಮವಾಗಿದ್ದು ಅದು ಖಾಸಗಿ ಅಂಗಡಿಗಳಲ್ಲಿ ದೊರಕುತ್ತದೆ. ರೈತ ಸಂಪರ್ಕ ಕೇಂದ್ರಗಳಲ್ಲಿನ ಇತರೆ ಬೀಜಗಳು ಉತ್ತಮವಾಗಿದ್ದು ಅವುಗಳನ್ನೂ ಬಿತ್ತಬಹುದು’ ಎಂದೂ ಅವರು ಹೇಳಿದ್ದಾರೆ.

‘ರೈತ ಸಂಪರ್ಕ ಕೇಂದ್ರಗಳಿಗೆ ಬೀಜ ಪೂರೈಸುವಾಗಲೇ ಅವುಗಳ ಗುಣಮಟ್ಟ ಪರೀಕ್ಷಿಸಬೇಕಾಗಿತ್ತು. ಈಗ ತಾಲ್ಲೂಕಿನ ಅರ್ಧಕ್ಕಿಂತ ಹೆಚ್ಚಿನ ರೈತರು ಸೋಯಾಬಿನ್ ಬೀಜ ಖರೀದಿಸಿದ್ದಾರೆ. ಕೆಲವೊಬ್ಬರು 10 ಪಾಕೆಟ್ ಕ್ಕಿಂತಲೂ ಹೆಚ್ಚಿನ ಬೀಜ ಖರೀದಿಸಿದ್ದು ಅವರಿಗೆ ಸಾವಿರಾರು ರೂಪಾಯಿ ಹಾನಿಯಾಗಲಿದೆ. ಆದ್ದರಿಂದ ಅವುಗಳನ್ನು ವಾಪಸ್ಸು ಪಡೆದು ಅನ್ಯ ಬೀಜ ಒದಗಿಸಬೇಕು. ಇಲ್ಲವೆ ಹಣ ಹಿಂದಿರುಗಿಸಬೇಕು’ ಎಂದು ತಾಲ್ಲೂಕು ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸುಭಾಷ ರಗಟೆ ಆಗ್ರಹಿಸಿದ್ದಾರೆ.

‘ಕೆಂಪು ಜಮೀನಿರುವಲ್ಲಿನ ಕೆಲ ರೈತರು ಬಿತ್ತನೆಯೂ ಕೈಗೊಂಡಿದ್ದಾರೆ. ಹೀಗಾಗಿ ಅವರು ಬೀಜ ಮತ್ತು ಗೊಬ್ಬರಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿದ್ದು ಅಂಥವರಿಗೆ ಪರಿಹಾರಧನ ನೀಡಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.

‘ಕೃಷಿ ಇಲಾಖೆಯವರು ಬಿತ್ತನೆ ಆಗುವ ಮೊದಲೇ ಎಚ್ಚರಿಕೆ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದರೆ, ಇಲಾಖೆಯಿಂದಲೇ ಇಂಥ ಕಳಪೆ ಬೀಜ ಖರೀದಿಸಿ ಪೊರೈಸಿರುವ ಕ್ರಮ ಖಂಡನಾರ್ಹವಾಗಿದೆ’ ಎಂದು ರೈತ ರಾಜಣ್ಣ ಕಲ್ಯಾಣಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT