ಮಂಗಳವಾರ, ಅಕ್ಟೋಬರ್ 22, 2019
26 °C

ಬೀದರ್‌: ಇಳಿದ ಈರುಳ್ಳಿ, ಬೆಳ್ಳುಳ್ಳಿ ಬೆಲೆ ಗಗನಕ್ಕೆ

Published:
Updated:
Prajavani

ಬೀದರ್‌: ಎರಡು ವಾರಗಳ ಅವಧಿಯಲ್ಲಿ ಈರುಳ್ಳಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 2 ಸಾವಿರ ಕಡಿಮೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಕೆಜಿಗೆ ₹ 40 ಇದೆ. ಆದರೆ, ಬೆಳ್ಳುಳ್ಳಿ ಬೆಲೆ ₹ 200ಕ್ಕೆ ತಲುಪಿ ಗ್ರಾಹಕರು ಹುಬ್ಬೇರಿಸುವಂತೆ ಮಾಡಿದೆ.

ನವರಾತ್ರಿ ಹಾಗೂ ದಸರಾ ಹಬ್ಬದ ಹೊಸ್ತಿಲಲ್ಲೇ ಬೆಳ್ಳುಳ್ಳಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 3 ಸಾವಿರ ಹೆಚ್ಚಾಗಿದೆ. ತರಕಾರಿ ರಾಜ ಬದನೆಕಾಯಿ ಕಿರೀಟಕ್ಕೆ ಬೆಲೆ ಹೆಚ್ಚಳದ ಗರಿ ಮೂಡಿದೆ. ಹಿರೇಕಾಯಿ ಬೆಲೆ ಮಾತ್ರ ಹಿಗ್ಗಿಲ್ಲ.

ಕೊತಂಬರಿ ಬೆಲೆ ಪ್ರತಿ ಕ್ವಿಂಟಲ್‌ಗೆ ಒಂದೂವರೆ ಸಾವಿರ ರೂಪಾಯಿ ಕುಸಿದಿದೆ. ಹೂಕೋಸು, ಮೆಂತೆಸೊಪ್ಪು, ಸಬ್ಬಸಗಿ, ಪಾಲಕ್‌ ಬೆಲೆ ತಲಾ ₹ 1 ಸಾವಿರ ಇಳಿದಿದೆ. ಈರುಳ್ಳಿ ಬೆಲೆ ₹ 6 ಸಾವಿರ ತಲುಪಿದಾಗಲೇ ಖಾನಾವಳಿ ಮಾಲೀಕರು ಗ್ರಾಹಕರಿಗೆ ಊಟದಲ್ಲಿ ಪ್ರತ್ಯೇಕವಾಗಿ ಈರುಳ್ಳಿ ಕೊಡುವುದನ್ನು ನಿಲ್ಲಿಸಿದ್ದಾರೆ. ಇದೀಗ ಈರುಳ್ಳಿ ಬೆಲೆ ₹ 500 ಇಳಿದರೂ ಭೋಜನದಲ್ಲಿ ಈರುಳ್ಳಿ ಕೊಡುತ್ತಿಲ್ಲ.

ಹಿರೇಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಅಲೂಗಡ್ಡೆ, ಬೀಟ್‌ರೂಟ್, ಎಲೆಕೋಸು ಹಾಗೂ ಬೀನ್ಸ್‌ ಬೆಲೆ ಸ್ಥಿರವಾಗಿದೆ. ಹೋಟೆಲ್‌, ರೆಸ್ಟೋರಂಟ್‌ ಹಾಗೂ ಖಾನಾವಳಿ ಮಾಲೀಕರು ಈ ತರಕಾರಿಗಳನ್ನೇ ಅಧಿಕ ಪ್ರಮಾಣದಲ್ಲಿ ಖರೀದಿಸಿದ್ದಾರೆ. ನಗರದ ಯಾವುದೇ ಖಾನಾವಳಿಗೆ ಹೋದರೂ ಅಲ್ಲಿ ಹಿರೇಕಾಯಿ, ತೊಂಡೆಕಾಯಿ ಪಲ್ಯಗಳನ್ನೇ ಬಡಿಸಲಾಗುತ್ತಿದೆ.

ಬೀದರ್‌ ತರಕಾರಿ ಸಗಟು ಮಾರುಕಟ್ಟೆಗೆ ಹೈದರಾಬಾದ್‌ನಿಂದ ಬೀನ್ಸ್, ಗಜ್ಜರಿ, ಆಲೂಗಡ್ಡೆ, ಹೂಕೋಸು, ಬೀಟ್‌ರೂಟ್, ಎಲೆಕೋಸು, ತೊಂಡೆಕಾಯಿ ಬಂದಿವೆ. ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ.

‘ಬೀದರ್‌ ಜಿಲ್ಲೆಯ ಚಿಟಗುಪ್ಪ, ಹುಮನಾಬಾದ್‌ ಹಾಗೂ ಭಾಲ್ಕಿ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಿಂದ ಕೊತಂಬರಿ, ಟೊಮೆಟೊ, ಪಾಲಕ್‌, ಬೆಂಡೆಕಾಯಿ, ಹಿರೇಕಾಯಿ, ಬದನೆಕಾಯಿ ಹಾಗೂ ಸಬ್ಬಸಗಿ ಮಾರುಕಟ್ಟೆಗೆ ಬಂದಿವೆ’ ಎಂದು ಗಾಂಧಿಗಂಜ್ ತರಕಾರಿ ವ್ಯಾಪಾರಿ ವಿಜಯಕುಮಾರ ಕಡ್ಡೆ ತಿಳಿಸಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)