ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ ನಗರಸಭೆ ಇನ್ಮುಂದೆ ಮಹಾನಗರ ಪಾಲಿಕೆ

Published : 18 ಸೆಪ್ಟೆಂಬರ್ 2024, 5:36 IST
Last Updated : 18 ಸೆಪ್ಟೆಂಬರ್ 2024, 5:36 IST
ಫಾಲೋ ಮಾಡಿ
Comments

ಬೀದರ್‌: ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಕಲಬುರಗಿಯಲ್ಲಿ ಮಂಗಳವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಬೀದರ್‌ ಜಿಲ್ಲೆಗೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ.

ಬೀದರ್‌ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಬೇಕೆಂಬ ಜನರ ಬೇಡಿಕೆಗೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ. ಸರ್ಕಾರದ ಈ ಕ್ರಮವನ್ನು ಬೀದರ್‌ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಹಾಗೂ ಉದ್ಯಮಿ ವಲಯ ಸ್ವಾಗತಿಸಿದೆ.

ಅದೇ ರೀತಿ ಹಾಲಿ ಶಿಥಿಲಗೊಂಡಿರುವ ಜಿಲ್ಲಾಧಿಕಾರಿ ಕಚೇರಿಯ ಕಟ್ಟಡವನ್ನು ತೆರವುಗೊಳಿಸಿ ಹೊಸ ಜಿಲ್ಲಾಡಳಿತ ಸಂಕೀರ್ಣ ನಿರ್ಮಿಸಬೇಕೆಂಬ ಬೇಡಿಕೆಯೂ ಈಡೇರಿದೆ. ₹59.80 ಕೋಟಿ ವೆಚ್ಚದಲ್ಲಿ ಮೂರು ಮಹಡಿಗಳನ್ನು ಒಳಗೊಂಡಿರುವ ಬೀದರ್ ಜಿಲ್ಲಾ ಕಚೇರಿಗಳ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೂ ಸಂಪುಟ ಒಪ್ಪಿಗೆ ಸೂಚಿಸಿದೆ. ಕಳೆದ 15 ವರ್ಷಗಳಿಂದ ಹೊಸ ಕಟ್ಟಡ ನಿರ್ಮಾಣದ ಮಾತುಗಳು ಕೇಳಿ ಬರುತ್ತಿದ್ದವು.

ಬೀದರ್‌ ಜಿಲ್ಲೆಯ ಎಲ್ಲ ಜನವಸತಿ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲೂ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಯಾದಗಿರಿ ಜಿಲ್ಲೆ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಬೀದರ್‌ ಜಿಲ್ಲೆಗೆ ನೀರು ತರಲು ನಿರ್ಧರಿಸಲಾಗಿದೆ. ಈ ಯೋಜನೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ತಲಾ ಶೇ 50ರ ಅನುದಾನದಲ್ಲಿ ಅನುಷ್ಠಾನಗೊಳ್ಳಲಿದೆ. ಈ ಯೋಜನೆ ಅನುಷ್ಠಾನಗೊಂಡರೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನೀಗಲಿದೆ.

ಹೊನ್ನಿಕೇರಿ ಮೀಸಲು ಅರಣ್ಯ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ (ಎಕೋ ಟೂರಿಸಂ) ಅಭಿವೃದ್ಧಿಗೊಳಿಸಲಾಗುವುದು ಎಂದು ಈ ಹಿಂದೆಯೇ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಘೋಷಿಸಿದ್ದರು. ಅದೇ ರೀತಿ ಬೀದರ್‌ನ ದೇವ ದೇವ ವನ ಟ್ರೀ ಪಾರ್ಕ್‌ ಅಭಿವೃದ್ಧಿ ಕುರಿತಾಗಿಯೂ ಹೇಳಿದ್ದರು. ಸಚಿವ ಸಂಪುಟ ಸಭೆಯಲ್ಲಿ ಎರಡೂ ಯೋಜನೆಗಳಿಗೆ ಅನುಮೋದನೆ ಸಿಕ್ಕಿರುವುದು ವಿಶೇಷ. ಜೊತೆಗೆ ಅನುದಾನವೂ ಘೋಷಿಸಲಾಗಿದೆ.

ಕಲಬುರಗಿ ಸಚಿವ ಸಂಪುಟದಲ್ಲಿ ಬೀದರ್‌ ಜಿಲ್ಲೆಗೆ ಅನೇಕ ಕೊಡುಗೆಗಳನ್ನು ಕೊಟ್ಟಿರುವುದು ಸಂತಸ ತಂದಿದೆ. ಘೋಷಣೆಯಾಗಿರುವ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕುಬಿ.ಜಿ. ಶೆಟಕಾರ, ಜಿಲ್ಲಾಧ್ಯಕ್ಷ, ಬೀದರ್‌ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಬೀದರ್‌ ಜಿಲ್ಲೆಯ ಜನತೆಯ ದಶಕಗಳ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿರುವುದು ಸ್ವಾಗತಾರ್ಹ. ಕಲಬುರಗಿ ಸಚಿವ ಸಂಪುಟ ಸಭೆಯಲ್ಲಿ ಬೀದರ್‌ ಜಿಲ್ಲೆಗೆ ಅನೇಕ ಯೋಜನೆ ಘೋಷಿಸಿರುವುದು ಖುಷಿ ತಂದಿದೆ.
ಬಸವರಾಜ ಧನ್ನೂರ, ಉದ್ಯಮಿ

ಹೊನ್ನಿಕೇರಿ ಮೀಸಲು ಅರಣ್ಯ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಕೆಕೆಆರ್‌ಡಿಬಿಯಿಂದ ₹15 ಕೋಟಿ ಅನುದಾನ ಒದಗಿಸಲಾಗಿದೆ. ಇನ್ನು, ₹16.12 ಕೋಟಿಯಲ್ಲಿ ಶಹಾಪುರ ಮೀಸಲು ಅರಣ್ಯ ಪ್ರದೇಶದಲ್ಲಿ ದೇವ ದೇವ ವನ ಟ್ರೀ ಪಾರ್ಕ್‌ನಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾತ್ಮಕ ಕಾಮಗಾರಿ ಕೈಗೊಳ್ಳಲು ಸಂಪುಟ ಒಪ್ಪಿಗೆ ನೀಡಿದೆ.

ಹೊಸ ತಾಲ್ಲೂಕುಗಳಲ್ಲಿ ‘ಪ್ರಜಾಸೌಧ’ ನಿರ್ಮಿಸುವ ಘೋಷಣೆಯಾಗಿದೆ. ಅದೇ ರೀತಿ ಅನುಭವ ಮಂಟಪದಿಂದ ಅಂಜನಾದ್ರಿ ವರೆಗೆ ಎಲ್ಲ ಸ್ಮಾರಕಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ. ಆದರೆ, ಜಿಲ್ಲೆಯ ಯಾವ್ಯಾವ ಸ್ಮಾರಕಗಳು ಅದರಡಿ ಸೇರಲಿವೆ ಎನ್ನುವುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಬೀದರ್‌ ಜಿಲ್ಲೆಗೆ ಸಿಕ್ಕಿದ್ದೇನು?

  • ಬೀದರ್ ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೇಗೆ

  • ₹59.80 ಕೋಟಿಯಲ್ಲಿ ಮೂರು ಮಹಡಿಗಳನ್ನು ಒಳಗೊಂಡಿರುವ ಬೀದರ್ ಜಿಲ್ಲಾ ಕಚೇರಿಗಳ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ

  • ಬೀದರ್‌ ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ. ಇದಕ್ಕಾಗಿ ನಾರಾಯಣಪುರದ ಬಸವಸಾಗರ ಜಲಾಶಯದಿಂದ ನೀರು ತರಲಾಗುವುದು. ಕೇಂದ್ರ ಸರ್ಕಾರದ ಸಹಭಾಗಿತ್ವದೊಂದಿಗೆ ಯೋಜನೆ ಅನುಷ್ಠಾನ

  • ಹೊನ್ನಿಕೇರಿ ಮೀಸಲು ಅರಣ್ಯ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿಗೆ ಕೆಕೆಆರ್‌ಡಿಬಿಯಿಂದ ₹15 ಕೋಟಿ ಅನುದಾನ

  • ₹16.12 ಕೋಟಿ ವೆಚ್ಚದಲ್ಲಿ ಬೀದರ್‌ನ ಶಹಾಪುರ ಮೀಸಲು ಅರಣ್ಯ ಪ್ರದೇಶದಲ್ಲಿ ದೇವ ದೇವ ವನ ಟ್ರೀ ಪಾರ್ಕ್‌ನಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾತ್ಮಕ ಕಾಮಗಾರಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ

ಪಾಲಿಕೆಗೆ 9 ಪಂಚಾಯಿತಿಗಳ 32 ಹಳ್ಳಿಗಳು

ಬೀದರ್‌ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ನಂತರ 9 ಗ್ರಾಮ ಪಂಚಾಯಿತಿಗಳ 32 ಗ್ರಾಮಗಳು ಅದರ ವ್ಯಾಪ್ತಿಗೆ ಸೇರಲಿವೆ. ಬೀದರ್‌ ತಾಲ್ಲೂಕಿನ ಚಿಕ್ಕಪೇಟೆ, ಹಮಿಲಾಪೂರ, ಕಬೀರವಾಡ, ಓಡವಾಡ, ತಾಜಲಾಪೂರ, ಚಿಟ್ಟಾ, ಚಿಟ್ಟಾವಾಡಿ, ಅಮಲಾಪೂರ, ಗೋರನಳ್ಳಿ, ಜಮಿಸ್ತಾನಪೂರ, ಅಲಿಯಾಬಾದ್‌, ಕೊಳಾರ (ಕೆ) ಪ್ರಮುಖವಾದವುಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT