ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಚಪ್ಪಲಿಯೇ ದೇಶದ್ರೋಹದ ಕೇಂದ್ರ ಬಿಂದು

ಶಾಹೀನ್‌ ಶಿಕ್ಷಣ ಸಂಸ್ಥೆಗೆ ರಾಜಕಾರಣಿಗಳ ದಂಡು
Last Updated 14 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಶಾಹೀನ್ ಶಿಕ್ಷಣ ಸಂಸ್ಥೆಯ ವಿರುದ್ಧ ದಾಖಲಾದ ದೇಶದ್ರೋಹದ ಪ್ರಕರಣ ಇದೀಗ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ. ಶಿಕ್ಷಣ ಸಂಸ್ಥೆ ಹಾಗೂ ದೇಶದ್ರೋಹದ ಆರೋಪದಲ್ಲಿ ಬಂಧಿತರಾದ ಮಹಿಳೆಯರ ಭೇಟಿಗೆ ರಾಜಕೀಯ ಮುಖಂಡರು ತಂಡೋಪ ತಂಡವಾಗಿ ಬರುತ್ತಿರುವ ಕಾರಣ ಪ್ರಕರಣ ಇನ್ನಷ್ಟು ಕಾವು ಪಡೆಯುತ್ತಿದೆ.

ಶಾಹೀನ್‌ ಶಿಕ್ಷಣ ಸಂಸ್ಥೆಯಲ್ಲಿ ಒಂದೇ ಕಟ್ಟಡದಲ್ಲಿ ಒಂಬತ್ತು ಸಾವಿರ ಮಕ್ಕಳು ಓದುತ್ತಿದ್ದಾರೆ. ಸಂಸ್ಥೆ ವಿರುದ್ಧ ಪ್ರಕರಣ ದಾಖಲಾದಾಗಿನಿಂದ ಶಾಲಾ ಪರಿಸರದಲ್ಲಿ ಪ್ರತಿಯೊಬ್ಬರೂ ವಿಚಲಿತರಾಗಿದ್ದಾರೆ. ಪರೀಕ್ಷೆಗಳು ಹತ್ತಿರಕ್ಕೆ ಬಂದರೂ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರು ನಿತ್ಯ ಪ್ರಕರಣದ ಚರ್ಚೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಸಂಸ್ಥೆಗೆ ಯಾರೇ ಬರಲಿ ವಿದ್ಯಾರ್ಥಿಗಳು ಅವರನ್ನು ನೋಡಲು ಮುಗಿ ಬೀಳುತ್ತಿದ್ದಾರೆ.

ಶಾಲಾ ಆಡಳಿತ ಮಂಡಳಿ ನಿತ್ಯ ಇಲ್ಲಿಗೆ ಬರುತ್ತಿರುವ ರಾಜಕಾರಣಿಗಳ ದಂಡನ್ನು ತಡೆಯುವ ಸ್ಥಿತಿಯಲ್ಲೂ ಇಲ್ಲ. ನಾಟಕದಲ್ಲಿ ಬಾಲಕಿ ‘ಚಪ್ಪಲಿಯಿಂದ ಹೊಡೆಯುತ್ತೇನೆ’ ಎಂದು ಹೇಳದಿದ್ದರೆ ಇಷ್ಟೊಂದು ರಾದ್ಧಾಂತವೇ ಆಗುತ್ತಿರಲಿಲ್ಲ ಎಂದು ಪ್ರತಿಯೊಬ್ಬರೂ ಆಡಿಕೊಳ್ಳುತ್ತಿದ್ದಾರೆ.

ಶಾಲೆಯಲ್ಲಿ ಅರ್ಧದಷ್ಟು ಮಕ್ಕಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದಾರೆ. ಉಳಿದವರು ಹಿಂದೂ, ಸಿಖ್, ಜೈನ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದು ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ. ಹೆಚ್ಚಿನವರು ತಮ್ಮ ಮಕ್ಕಳನ್ನು ಶಾಹೀನ್‌ ಶಾಲೆಗೆ ಕಳಿಸಬೇಕು ಎನ್ನುವ ಅಭಿಲಾಷೆ ಹೊಂದಿದವರಾಗಿದ್ದಾರೆ. ಬೀದರ್‌ ಜನ ಸೌಹಾರ್ದದಿಂದ ಇರುವ ಕಾರಣ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಈ ಸಂಸ್ಥೆ ಮುನ್ನೆಲೆಗೆ ಬಂದಿದೆ.

ಜನವರಿ 21 ರಂದು 70 ಜನ ಕುಳಿತುಕೊಳ್ಳಬಹುದಾದ ಚಿಕ್ಕದಾದ ಸಭಾಂಗಣದಲ್ಲಿ ಶಾಲೆಯ ವಿದ್ಯಾರ್ಥಿಗಳು ವಿವಾದಾತ್ಮಕ ನಾಟಕ ಪ್ರದರ್ಶಿಸಿದರು. ಬಾಲಕನೊಬ್ಬನ ತಂದೆ, ಪತ್ರಕರ್ತರೂ ಆಗಿರುವ ಯುಸೂಫ್‌ ರಹೀಂ ಮೂಲಕ ಜನವರಿ 22ರಂದು ನಾಟಕದ ವಿಡಿಯೊ ವೈರಲ್‌ ಆಯಿತು.

ಸಾಮಾಜಿಕ ಜಾಲತಾಣದಲ್ಲಿ ಇದನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತ ನಿಲೇಶ ರಕ್ಷಾಳ ಸೈಬರ್‌ ಅಪರಾಧ ಅಡಿಯಲ್ಲಿ ಬೀದರ್‌ನ ನ್ಯೂಟೌನ್‌ ಪೊಲೀಸ್‌ ಠಾಣೆಗೆ ದೂರು ನೀಡಿದರು. ಆರಂಭದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದರು. ತೀವ್ರ ರಾಜಕೀಯ ಒತ್ತಡಗಳು ಬಂದ ನಂತರ ಜನವರಿ 26ರಂದು ಪ್ರಕರಣ ದಾಖಲಿಸಿಕೊಂಡರು.

ದೇಶದ್ರೋಹದ ಪ್ರಕರಣ ದಾಖಲಾದ ನಂತರ ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಪ್ರಾಥಮಿಕ ಶಾಲೆಯಲ್ಲಿ ವಿವಾದಾತ್ಮಕ ನಾಟಕ ಪ್ರದರ್ಶಿಸಿದ ಆರೋಪದ ಮೇಲೆ ಮುಖ್ಯ ಶಿಕ್ಷಕಿ ಹಾಗೂ ನಾಟಕದಲ್ಲಿ ಪಾತ್ರ ಮಾಡಿದ್ದ ಬಾಲಕಿಯ ತಾಯಿಯನ್ನು ಬಂಧಿಸಿದ್ದಾರೆ. ಮೊದಲ ದಿನ ತನಿಖಾ ಅಧಿಕಾರಿ ಬಿಟ್ಟು ಉಳಿದ ಪೊಲೀಸರು ಸಮವಸ್ತ್ರದಲ್ಲಿ ಶಾಲಾ ಆವರಣಕ್ಕೆ ಪ್ರವೇಶಿಸಿದ್ದು ಹಾಗೂ ಮಕ್ಕಳನ್ನು ಪ್ರಶ್ನೆ ಮಾಡಿದ್ದು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಯಿತು. ಇದೀಗ ಪ್ರಕರಣದ ಸಾಕ್ಷ್ಯದಲ್ಲಿ ಬಾಲಕಿ ಧರಿಸಿದ್ದ ಚಪ್ಪಲಿಯೂ ಸೇರಿಕೊಂಡಿದೆ.

ಅಧಿಕಾರಿಗಳನ್ನೂ ಗೊಂದಲಕ್ಕೆ ಸಿಲುಕಿಸಿದ ಪ್ರಕರಣ
ಬೀದರ್‌:
ಶಾಹೀನ್ ಶಾಲೆಯಲ್ಲಿ ಪ್ರದರ್ಶಿಸಿದ ನಾಟಕದಲ್ಲಿ ಚಪ್ಪಲಿ ವಿಷಯ ಪ್ರಸ್ತಾಪಿಸಿದ್ದನ್ನೇ ವಿವಾದಕ್ಕೆ ಬಳಸಿಕೊಳ್ಳಲಾಗಿದೆ. ಇದು ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನೂ ಗೊಂದಲಕ್ಕೆ ಸಿಲುಕಿಸಿದೆ.

ಪೊಲೀಸರು ನಾಟಕ ಮಾಡಿದ ಬಾಲಕಿಯ ಮನೆಗೆ ತೆರಳಿ ಚಪ್ಪಲಿಯನ್ನು ಸಾಕ್ಷ್ಯಾಧಾರವಾಗಿ ವಶಪಡಿಸಿಕೊಂಡಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಹೀನ್‌ ಶಿಕ್ಷಣ ಸಂಸ್ಥೆಗೆ ಕಾರಣ ಕೇಳಿ ನೋಟಿಸ್‌ ಕೊಟ್ಟು ಹಳೆಯ ಕಡತಗಳನ್ನು ತಿರುವು ಹಾಕುತ್ತಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಶಾಹೀನ್‌ ಸಂಸ್ಥೆಗೆ ಶೋಕಾಸ್‌ ನೋಟಿಸ್‌ ಕೊಟ್ಟಿದೆ. ಶಿಕ್ಷಣ ಸಂಸ್ಥೆಯಿಂದ ಉತ್ತರವನ್ನೂ ಪಡೆದುಕೊಂಡಿದೆ.

ಡಿಡಿಪಿಐ ಚಂದ್ರಶೇಖರ್‌ ಎಚ್‌.ಸಿ. ಅವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಬೀದರ್‌ ಕ್ಷೇತ್ರ ಶಿಕ್ಷಣಾಧಿಕಾರಿಯನ್ನೇ ತನಿಖಾ ಅಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆ. ಈ ಮೂಲಕ ಶಿಕ್ಷಣ ಇಲಾಖೆಯೂ ತನಿಖೆ ಮುಂದುವರಿಸಿದೆ.

ಶಾಹೀನ್‌ ಶಿಕ್ಷಣ ಸಂಸ್ಥೆ ನಗರದ ಹೊರ ವಲಯದಲ್ಲಿ ಜಮೀನು ಅತಿಕ್ರಮಣ ಮಾಡಿಕೊಂಡಿದೆ ಎಂದು ಮೂರು ವರ್ಷಗಳ ಹಿಂದೆ ಆರೋಪ ಮಾಡಲಾಗಿತ್ತು. ಜಿಲ್ಲಾಧಿಕಾರಿ ಅನುರಾಗ ತಿವಾರಿ ಅಧಿಕಾರಿಗಳ ತಂಡವನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಸ್ಥಳ ಪರಿಶೀಲನೆ ಮಾಡಿದ್ದರು. ಸಕಲ ದಾಖಲೆಗಳನ್ನೂ ಪರಿಶೀಲಿಸಿದ್ದರು. ಬಲವಾದ ಸಾಕ್ಷ್ಯಾಧಾರ ಇಲ್ಲದ ಕಾರಣ ಪ್ರಕರಣ ಕೈಬಿಡಲಾಗಿತ್ತು.

‘ಇದ್ದದ್ದನ್ನು ಇದ್ದ ಹಾಗೆ ಹೇಳಲಿ’
ಬೀದರ್‌:
‘ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟದ ಅನೇಕ ಮಾಧ್ಯಮಗಳು ನಮ್ಮ ಬೆನ್ನ ಹಿಂದೆ ಬಿದ್ದಿದೆ. ಇದ್ದದ್ದನ್ನು ಇದ್ದ ಹಾಗೆ ಹೇಳಲಿ. ಇಲ್ಲದಿರುವುದನ್ನು ಸೃಷ್ಟಿಸುವುದು ಬೇಡ ಎನ್ನುವುದು ನನ್ನ ಕಳಕಳಿಯ ಮನವಿ’ ಎಂದು ಶಾಹೀನ್‌ ಶಿಕ್ಷಣ ಸಂಸ್ಥೆಯ ಸಿಇಒ ತೌಸೀಫ್‌ ಮಡಿಕೇರಿ ಹೇಳಿದ್ದಾರೆ.

‘ತರಗತಿಯೊಂದರ ವಿದ್ಯಾರ್ಥಿಗಳು ಪ್ರದರ್ಶಿಸಿದ ನಾಟಕದಲ್ಲಿ ಬಾಲಕಿ ವಿವಾದಾತ್ಮಕ ಶಬ್ದ ಬಳಿಸಿದ್ದಕ್ಕೆ ದೊಡ್ಡ ಸಂಸ್ಥೆ ನಡೆಸುತ್ತಿರುವ ಅಧ್ಯಕ್ಷರನ್ನೇ ಗುರಿ ಮಾಡಲಾಗಿದೆ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ. ಕೆಲ ಶಿಕ್ಷಣ ಸಂಸ್ಥೆಗಳೂ ನಮ್ಮ ಸಂಸ್ಥೆಯ ವಿರುದ್ಧ ಅಪ್ರಚಾರದಲ್ಲಿ ತೊಡಗಿರುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಶಾಹೀನ್‌ ಶಿಕ್ಷಣ ಸಂಸ್ಥೆ 9 ರಾಜ್ಯಗಳಲ್ಲಿ 48 ಶಾಖೆಗಳನ್ನು ಹೊಂದಿದೆ. ಇಲ್ಲಿ ಎಲ್ಲ ಧರ್ಮ, ವರ್ಗದ ಮಕ್ಕಳು ಓದುತ್ತಿದ್ದಾರೆ. ಬೀದರ್‌ ಸಂಸ್ಥೆಯಲ್ಲೇ 9 ಸಾವಿರ ಮಕ್ಕಳು ಓದುತ್ತಿದ್ದಾರೆ. ಜನವರಿ 21 ರಂದು ಶಾಲಾ ವಾರ್ಷಿಕೋತ್ಸವ ನಡೆದಿಲ್ಲವೆಂದು ಆರಂಭದಿಂದಲೂ ಹೇಳುತ್ತಿದ್ದೇವೆ. ಬಾಲಕಿಯ ಒಂದು ಚಿಕ್ಕ ಹೇಳಿಕೆಯನ್ನೇ ದೊಡ್ಡದಾಗಿ ಮಾಡಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಸಂಸ್ಥೆಯ ಶೈಕ್ಷಣಿಕ ಕಾರ್ಯಕ್ರಮವನ್ನು ‘ಪೋರ್ಬ್ಸ್‌’ ಅಂತರರಾಷ್ಟ್ರೀಯ ಮ್ಯಾ ಗ್ಝಿನ್‌ ತನ್ನ ವಿಶೇಷಾಂಕದಲ್ಲಿ ಪ್ರಕಟಿಸಿದೆ. ಸಂಸ್ಥೆಯು 10 ರಿಂದ 18 ವರ್ಷ ವಯಸ್ಸಿನ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆ ತಂದು ಓದಿಸಿ, ಅವರನ್ನು ವೈದ್ಯ ಹಾಗೂ ಎಂಜಿನಿಯರ್‌ರನ್ನಾಗಿ ಮಾಡಿದೆ. ಪ್ರತಿ ವರ್ಷ ತೀವ್ರ ನಿಗಾ ಕಲಿಕಾ ಘಟಕದಲ್ಲಿ 500 ಮಕ್ಕಳು ಪ್ರವೇಶ ಪಡೆಯುತ್ತಾರೆ. ನಮ್ಮ ಸಂಸ್ಥೆ 15 ವರ್ಷಗಳಿಂದ ಈ ಕಾರ್ಯ ಮಾಡಿಕೊಂಡು ಬಂದಿದೆ. ನಾಟಕದ ತನಿಖೆ ನಡೆಸುತ್ತಿರುವ ಪೊಲೀಸರು ಹಾಗೂ ಶಿಕ್ಷಣ ಇಲಾಖೆಗೆ ಸಹಕಾರ ನೀಡುತ್ತಿದ್ದೇವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT