ಮಂಗಳವಾರ, ಜನವರಿ 31, 2023
18 °C
ಪ್ಲಾಟಿನಂ ಕಾರ್ಡ್‌ ಬಿಡುಗಡೆ

ಬೀದರ್ ಉತ್ಸವ: ಇತಿಹಾಸ ತಿಳಿಸುವ ಕಾರ್ಯ ಆಗಲಿ -ಖೂಬಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಜನರ ಸಹಭಾಗಿತ್ವ ಇದ್ದರೆ ಮಾತ್ರ ಉತ್ಸವಗಳು ಯಶಸ್ವಿಯಾಗುತ್ತವೆ. ಜಿಲ್ಲೆಯ ಐತಿಹಾಸಿಕ ಮಹತ್ವ ಸಾರುವ ದಿಸೆಯಲ್ಲಿ ಪ್ರತಿಯೊಬ್ಬರೂ ಬೀದರ್‌ ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು’ ಎಂದು ಕೇಂದ್ರದ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೀದರ್ ಉತ್ಸವದ ಪ್ಲಾಟಿನಂ, ಡೈಮಂಡ್, ಗೋಲ್ಡ್ ಕಾರ್ಡ್ ಹಾಗೂ ಉತ್ಸವದ ಸಿಟ್ಟಿಂಗ್ ಲೇಔಟ್‍ನ ನಕ್ಷೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಬೀದರ್ ಉತ್ಸವದ ಮೂಲಕ ಇಂದಿನ ಯುವ ಪೀಳಿಗೆ ಜಿಲ್ಲೆಯ ಇತಿಹಾಸ ಮತ್ತು ಪರಂಪರೆಯನ್ನು ತಿಳಿಯುವಂತಾಗಬೇಕು. ಜಿಲ್ಲಾಡಳಿತ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಬೇಕು’ ಎಂದರು.

‘ಉತ್ಸವದ ದಿನಗಳಂದು ಪ್ರತಿಯೊಬ್ಬರೂ ತಮ್ಮ ಮನೆಗಳನ್ನು ತಳಿರು ತೋರಣಗಳಿಂದ ಅಲಂಕಾರ ಮಾಡಬೇಕು. ಲಕ್ಷಾಂತರ ಜನ ಉತ್ಸವಕ್ಕೆ ಬರುವ ಕಾರಣ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಬೇಕು. ಇದೊಂದು ಮಾದರಿ ಉತ್ಸವವಾಗಬೇಕು’ ಎಂದು ಹೇಳಿದರು.

‘ಜಿಲ್ಲೆಯ ಜನರಿಗಾಗಿಯೇ ಜಿಲ್ಲಾಡಳಿತ ಮುತುವರ್ಜಿವಹಿಸಿ ಜನರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದೆ. ಇದಕ್ಕಾಗಿ ಜಿಲ್ಲೆಯ ಜನತೆ ತನು, ಮನ, ಧನದಿಂದ ಸಹಕಾರ ನೀಡಬೇಕು. ನೆರೆಯ ಜಿಲ್ಲೆಗಳಿಂದ ಬರುವವರಿಗೂ ಜಿಲ್ಲಾಡಳಿತ ಮುಕ್ತ ಅವಕಾಶ ನೀಡಿದೆ, ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೂ ಅನುಕೂಲವಾಗಲಿದೆ’ ಎಂದು ತಿಳಿಸಿದರು.

 ಬೀದರ್‌ ದಕ್ಷಿಣ ಕ್ಷೇತ್ರದ ಜೆಡಿಎಸ್‌ ಶಾಸಕ ಬಂಡೆಪ್ಪ ಕಾಶೆಂಪೂರ ಮಾತನಾಡಿ, ‘2006 ರಲ್ಲಿ ಮೊದಲ ಬಾರಿಗೆ ಬೀದರ್ ಉತ್ಸವ ಆರಂಭಿಸಲಾಯಿತು. ನಂತರ ವಿದೇಶಿ ಪ್ರವಾಸಿಗರು ಬೀದರ್‌ಗೆ ಬರಲಾರಂಭಿಸಿದರು. ಅನೇಕ ಚಲನಚಿತ್ರಗಳ ಚಿತ್ರೀಕರಣಗಳೂ ಇಲ್ಲಿ ನಡೆದವು. ಪತ್ರಕರ್ತರು ದೊಡ್ಡ ಮಟ್ಟದಲ್ಲಿ ಪ್ರಚಾರ ಕೊಟ್ಟ ಕಾರಣ ಉತ್ಸವ ಯಶಸ್ವಿಯಾಗಲು ಸಾಧ್ಯವಾಯಿತು’ ಎಂದು ನೆನಪಿಸಿಕೊಂಡರು.

 ಕಾಂಗ್ರೆಸ್‌ ಶಾಸಕ ರಹೀಂ ಖಾನ್ ಮಾತನಾಡಿ, ‘ಕೋವಿಡ್ ಕಾರಣದಿಂದಾಗಿ ಬೀದರ್ ಉತ್ಸವ ನಡೆಯಲಿಲ್ಲ. ಹರ್ಷ ಗುಪ್ತಾ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಬೀದರ್ ಉತ್ಸವ ಅದ್ಧೂರಿಯಾಗಿ ನಡೆದಿದೆ. ಜಿಲ್ಲೆಯ ಜನ ಇಂದಿಗೂ ಸ್ಮರಿಸಿಕೊಳ್ಳುತ್ತಾರೆ. ಅದೇ ಮಾದರಿಯಲ್ಲೇ ಉತ್ಸವ ನಡೆಯಬೇಕು’ ಎಂದು ಹೇಳಿದರು.

 ‘ನಗರದಲ್ಲಿ ರಸ್ತೆಗಳು ಹಾಳಾಗಿರುವ ಕಾರಣ ರಸ್ತೆ ದುರಸ್ತಿಗೆ ವಿಶೇಷ ಅನುದಾನ ಕೊಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಈಗಾಗಲೇ ಲಭ್ಯವಿರುವ ₹ 60 ಕೋಟಿ ವೆಚ್ಚದಲ್ಲಿ ರಸ್ತೆ ದುರಸ್ತಿ ಮಾಡಲು ನಿರ್ಧರಿಸಲಾಗಿದೆ. ಒಂದು ತಿಂಗಳ ಅವಧಿಯಲ್ಲಿ ನಗರದ ಎಲ್ಲ ರಸ್ತೆಗಳೂ ದುರಸ್ತಿಯಾಗಲಿವೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ‘ಬೀದರ್ ಉತ್ಸವಕ್ಕೆ ಸಂಪನ್ಮೂಲ ಕ್ರೋಡೀಕರಿಸಲು ಇಂದು ಪ್ಲಾಟಿನಂ, ಡೈಮಂಡ್ ಮತ್ತು ಗೋಲ್ಡ್ ಕಾರ್ಡ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಪ್ಲಾಟಿನಂ ಕಾರ್ಡ್‌ಗೆ ₹25 ಸಾವಿರ, ಡೈಮಂಡ್ ಕಾರ್ಡ್‌ಗೆ ₹ 15 ಸಾವಿರ, ಗೋಲ್ಡ್ ಕಾರ್ಡ್‌ಗೆ ₹ 10 ಸಾವಿರ ನಿಗದಿಪಡಿಸಲಾಗಿದೆ. ಒಟ್ಟು ಮೂರು ಸಾವಿರ ಕಾರ್ಡ್‌ಗಳನ್ನು ಮುದ್ರಿಸಲಾಗಿದೆ’ ಎಂದು ಹೇಳಿದರು.

‘ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಯಲ್ಲಿಯಲ್ಲಿರುವ ಡಿಯುಡಿಸಿ ಕಚೇರಿಯಲ್ಲಿ ಕಾರ್ಡ್‌ಗಳನ್ನು ಖರೀದಿಸಬಹುದಾಗಿದೆ.

ಕಾರ್ಡ್‌ಗಳಿಗೆ ಕ್ಯೂಆರ್ಕೋಡ್‌ ಕೊಡಲಾಗಿದೆ. ಇದನ್ನು ವಾಹನ ಪಾರ್ಕಿಂಗ್‌ ಪಾಸ್‌ಗೂ ಬಳಸಬಹುದಾಗಿದೆ. ಭದ್ರತೆ ದೃಷ್ಟಿಯಿಂದ ಸಿಟ್ಟಿಂಗ್ ಲೇಔಟ್‍ನ ನಕ್ಷೆ ಸಿದ್ಧಪಡಿಸಲಾಗಿದೆ’ ಎಂದು ತಿಳಿಸಿದರು.

ರಾಜ್ಯ ಹಜ್ ಸಮಿತಿ ಅಧ್ಯಕ್ಷ ರೌಫೋದ್ದಿನ್ ಕಚೇರಿವಾಲೆ, ಬುಡಾ ಅಧ್ಯಕ್ಷ ಬಾಬು ವಾಲಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು