ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bidar utsava | ಹವಾ ಸೃಷ್ಟಿಸಿದ ಶಿವಣ್ಣ, ಡಾಲಿ ಧನಂಜಯ್

ಬೀದರ್‌ನ ಐತಿಹಾಸಿಕ ಕೋಟೆಯಲ್ಲಿ ತೆರೆದುಕೊಂಡ ‘ತಾರಾ ಲೋಕ’
Last Updated 10 ಜನವರಿ 2023, 6:56 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಐತಿಹಾಸಿಕ ಕೋಟೆಯಲ್ಲಿ ಸೋಮವಾರ ಅಕ್ಷರಶಃ ತಾರಾ ಲೋಕವೇ ತೆರೆದುಕೊಂಡಿತು.

ಹ್ಯಾಟ್ರಿಕ್ ಹಿರೋ ಶಿವರಾಜ್‌ ಕುಮಾರ, ಡಾಲಿ ಧನಂಜಯ್, ನಾರಾಯಣ ಪ್ರತಾಪ್, ಸಿಹಿಕಹಿ ಚಂದ್ರು, ನಿತ್ವಿಕಾ ನಾಯ್ಡು, ನಯನಾ ಪನ್ಯಮ್ ಹೀಗೆ ಖ್ಯಾತನಾಮರ ದಂಡೇ ಕೋಟೆಯೊಳಗೆ ಪ್ರತ್ಯಕ್ಷಗೊಂಡಿತು.

ಬೀದರ್ ಉತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಟ-ನಟಿಯರು ನಡೆಸಿಕೊಟ್ಟ ಡ್ಯಾನ್ಸ್, ಗಾಯನಕ್ಕೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು. ಮೊಬೈಲ್ ಟಾರ್ಚ್ ಆನ್ ಮಾಡಿ ಅಭಿಮಾನ ಮೆರೆದರು.

ಶಿವರಾಜ್‌ಕುಮಾರ ಬರುತ್ತಲೇ ಅವರನ್ನು ನೋಡಲು ಜನ ಮುಗಿಬಿದ್ದರು. ಶಿಳ್ಳೆ, ಕೇಕೆ ಹಾಕಿ ಸ್ವಾಗತಿಸಿದರು. ಶಿವಣ್ಣ.., ಶಿವಣ್ಣ... ಎಂದು ಕೂಗಿ ನೆಚ್ಚಿನ ನಟನ ಅಭಿಮಾನದಲ್ಲಿ ಮಿಂದೆದ್ದರು.

ಶಿವರಾಜ್‌ಕುಮಾರ ಅವರ ಡ್ಯಾನ್ಸ್, ಗಾಯನಕ್ಕೆ ನಿಂತಲ್ಲೇ ಹೆಜ್ಜೆ ಹಾಕಿದರು. ಡೈಲಾಗ್‍ಗಳನ್ನು ಕೇಳಿ ಪುಳಕಿತಗೊಂಡರು. ಅನೇಕರು ಒನ್ಸ್ ಮೋರ್..., ಒನ್ಸ್ ಮೋರ್... ಅಂದರು.

ಶಿವರಾಜ್‌ಕುಮಾರ ಹಾಗೂ ಡಾಲಿ ಧನಂಜಯ್ ಬಹಮನಿ ಸುಲ್ತಾನರ ಕೋಟೆಯಲ್ಲಿ ಹವಾ ಸೃಷ್ಟಿದರು.

ಭಾನುವಾರ ಕುಮಾರ ಸಾನು, ಮಂಗ್ಲಿ, ಅನುರಾಧಾ ಭಟ್ ಹಾಗೂ ವೀರ ಸಮರ್ಥ ಅವರ ಗಾನಸುಧೆಯಲ್ಲಿ ತೇಲಾಡಿದ್ದ ಜಿಲ್ಲೆಯ ಜನ, ಕೊನೆಯ ದಿನ ನಟ-ನಟಿಯರ ಕಲಾ ಪ್ರದರ್ಶನಕ್ಕೆ ಮನ ಸೋತರು.

ಸಿಹಿಕಹಿ ಚಂದ್ರು ಹಾಸ್ಯ ಚಟಾಕಿಗಳನ್ನು ಹಾರಿಸಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ನಾರಾಯಣ ಪ್ರತಾಪ್, ನಯನಾ ಪನ್ಯಮ್, ನಿತ್ವಿಕಾ ಅವರ ಕಾರ್ಯಕ್ರಮಗಳೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.

ಬೇಗ ಬಂದು ಕುರ್ಚಿ ಹಿಡಿದರು...

ಬೀದರ್ ಉತ್ಸವದಲ್ಲಿ ಮೊದಲ ದಿನ ಸುಮಾರು ಒಂದು ಲಕ್ಷ ಜನ ಪಾಲ್ಗೊಂಡರೆ, ಎರಡನೇ ದಿನ ಐದು ಲಕ್ಷ ಜನ ಭಾಗವಹಿಸಿದ್ದರು. ಹೀಗಾಗಿ ಮೂರನೇ ದಿನ ಇನ್ನೂ ಹೆಚ್ಚು ಜನ ಬರಬಹುದು ಎಂದು ಅಂದಾಜಿಸಿದ ಬಹಳಷ್ಟು ಮಂದಿ ಮಧ್ಯಾಹ್ನದ ವೇಳೆಗೇ ಕೋಟೆಯೊಳಗೆ ಬಂದು ಕುರ್ಚಿ ಹಿಡಿದರು.

ಮುಖ್ಯ ವೇದಿಕೆ ಮುಂಭಾಗದಲ್ಲಿ ಗಣ್ಯರು, ಕಾರ್ಡ್ ಹೊಂದಿದವರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರಿಗಾಗಿಯೂ 15 ಸಾವಿರ ಉಚಿತ ಕುರ್ಚಿಗಳನ್ನು ಹಾಕಲಾಗಿತ್ತು.

ಮುಖ್ಯವೇದಿಕೆಯ ಎಡ ಮತ್ತು ಬಲ ಬದಿಯಲ್ಲಿ ಎರಡು ಬೃಹತ್ ಎಲ್‍ಇಡಿಗಳನ್ನು ಅಳವಡಿಸಿದ ಕಾರಣ ದೂರದಲ್ಲಿ ಕುಳಿತವರಿಗೂ ವೇದಿಕೆ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು ಅನುಕೂಲವಾಯಿತು.

ಕುಟುಂಬ ಸಮೇತ ಬಂದರು

ಮುಂಚಿತವಾಗಿ ವ್ಯಾಪಕ ಪ್ರಚಾರ ಮಾಡಿದ ಕಾರಣ ಈ ಬಾರಿಯ ಬೀದರ್ ಉತ್ಸವಕ್ಕೆ ನಿರೀಕ್ಷೆಗೂ ಹೆಚ್ಚು ಜನ ಭೇಟಿ ನೀಡಿದರು. ಬಹಳಷ್ಟು ಜನ ಕುಟುಂಬ ಸಮೇತ ಸಮೇತರಾಗಿ ಕೋಟೆಗೆ ಭೇಟಿ ಕೊಟ್ಟು ಉತ್ಸವದ ಸವಿ ಅನುಭವಿಸಿದರು.

ಗಾಳಿಪಟ ಉತ್ಸವ, ಪಶು ಮೇಳ, ಕೃಷಿ ಮೇಳ, ಆಹಾರ ಉತ್ಸವ, ಸಾಹಸ ಕ್ರೀಡೆ, ಮಕ್ಕಳ ಆಟಿಕೆ ಮೊದಲಾದವು ಎಲ್ಲರ ಗಮನ ಸೆಳೆದವು. ಅನೇಕ ಪಾಲಕರು ಮಕ್ಕಳ ಜತೆ ಬೋಟಿಂಗ್ ಮಾಡಿದರು. ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಂಡರು. ಮಕ್ಕಳಿಗೆ ಆಟಿಕೆ ಕೊಡಿಸಿದರು. ಉತ್ಸವದ ಪ್ರಯುಕ್ತ ಮೊದಲ ಬಾರಿ ವ್ಯವಸ್ಥೆ ಮಾಡಿದ್ದ ಹೆಲಿಕಾಪ್ಟರ್ ಸಂಚಾರ ಉತ್ಸವದಲ್ಲೂ ಉತ್ಸಾಹದಿಂದ ಭಾಗಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT