ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚೆತ್ತ ‘ಭಗವಂತ’, ‘ಪ್ರಭು’ ಪ್ರತ್ಯಕ್ಷ

Last Updated 31 ಮಾರ್ಚ್ 2020, 3:00 IST
ಅಕ್ಷರ ಗಾತ್ರ

ಬೀದರ್: ಕೋವಿಡ್ 19 ಮುಕ್ತಿ ಹೆಸರಿನಲ್ಲಿ ಜವಾಬ್ದಾರಿಯಿಂದ ದೂರ ಉಳಿದು ಮೌನವೃತ ಕೈಗೊಂಡಿದ್ದ ಸಂಸದ ಭಗವಂತ ಖೂಬಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆಯೇ ಹರಿದು ಬಂದ ನಂತರ ಎಚ್ಚೆತ್ತುಕೊಂಡ ಅವರು ಮೌನ ಮುರಿದಿದ್ದಾರೆ.

ಲಾಕ್‌ಡೌನ್‌ ಹೆಸರಲ್ಲಿ ಮನೆಯಲ್ಲಿ ಲಾಕ್‌ ಆಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅವರು ಜಿಲ್ಲೆಯ ಗಡಿಯಲ್ಲಿರುವ ಚೆಕ್‌ಪೋಸ್ಟ್‌ಗಳಿಗೆ ತೆರಳಿ ಅಲ್ಲಿನ ಸಿಬ್ಬಂದಿಗೆ ನೀರು ಹಾಗೂ ಊಟದ ವ್ಯವಸ್ಥೆ ಮಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಅಲೆಮಾರಿಗಳು ವಾಸವಾಗಿರುವ ಸ್ಥಳಕ್ಕೆ ತೆರಳಿ ಅವರಿಗೆ ಒಂದು ತಿಂಗಳಿಗೆ ಬೇಕಾಗುವಷ್ಟು ಆಹಾರ ಧಾನ್ಯ ವಿತರಣೆ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಅವರು ಚೆಕ್‌ಪೋಸ್ಟ್‌ಗೆ ತೆರಳಿ ಕಗ್ಗತ್ತಲಲ್ಲಿ ಕೆಲಸ ಮಾಡುತ್ತಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿ ಕ್ಷೇಮ ವಿಚಾರಿಸಿದರೆ, ಬೀದರ್‌ ಶಾಸಕ ರಹೀಂ ಖಾನ್‌ ಅವರು ಕಡು ಬಡವರಿಗೆ ಮೂರು ವಾರಗಳಿಗೆ ಬೇಕಾಗುವಷ್ಟು ಆಹಾರ ಧಾನ್ಯ ಪೂರೈಕೆ ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ.

ಸಂಸದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಮನೆಯಲ್ಲಿ ಉಳಿದುಕೊಂಡಿದ್ದಕ್ಕೆ
ಬಿಜೆಪಿ ಕಾರ್ಯಕರ್ತರು ತೀವ್ರ ಮುಜುಗರಕ್ಕೆ ಒಳಗಾಗಿದ್ದರು. ಸೋಮವಾರ ಸಂಸದ ಹಾಗೂ ಸಚಿವರು ಜನರ ಸಮಸ್ಯೆಗಳಿಗೆ
ಸ್ಪಂದಿಸಿದರು.

ವಾಪಸ್‌ ಕಳುಹಿಸುತ್ತಿರುವ ನೆರೆ ರಾಜ್ಯದ ಪೊಲೀಸರು

ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳಲು ಹೋಗಿದ್ದ ಕೂಲಿ ಕಾರ್ಮಿಕರನ್ನು ಅಲ್ಲಿನ ಪೊಲೀಸರು ಮರಳಿ ಊರಿಗೆ ಕಳಿಸುತ್ತಿದ್ದಾರೆ. ಕಗ್ಗತ್ತಲು, ಸುಡು ಬಿಸಿಲು ಎನ್ನದೇ ಅನೇಕ ಜನ ಮಕ್ಕಳೊಂದಿಗೆ ನೂರಾರು ಕಿ.ಮೀ ನಡೆದುಕೊಂಡು ಜಿಲ್ಲೆಗೆ ಬರುತ್ತಿದ್ದಾರೆ.

ಗಾರೆ ಕೆಲಸಗಾರರು, ಕಮ್ಮಾರಿಕೆ ಹಾಗೂ ರಸ್ತೆ ಕೆಲಸ ಮಾಡುವ ಕಾರ್ಮಿಕರು ಕೈಚೀಲಗಳನ್ನು ತಲೆ ಮೇಲೆ ಹೊತ್ತುಕೊಂಡು ಜಿಲ್ಲೆಯತ್ತ ಆಗಮಿಸುತ್ತಿದ್ದಾರೆ. ಕೆಲವರು ಬರಿಗಾಲಲ್ಲೇ ಬೀಳುತ್ತ, ಏಳುತ್ತ ಬರುತ್ತಿದ್ದಾರೆ. ಗುರುತಿನ ಚೀಟಿ ಹೊಂದಿರುವ ಎಲ್ಲರಿಗೂ ಗಡಿಯೊಳಗೆ ಪ್ರವೇಶ ನೀಡಲಾಗುತ್ತಿದೆ. ಅವರಿಗೆ ಊಟ ಮಾಡಿಸಿ ಕಳಿಸಿಕೊಡಲಾಗುತ್ತಿದೆ.

ಗಡಿಯಲ್ಲಿ ಜಿಲ್ಲಾ ಸಶಸ್ತ್ರ ಪಡೆಯ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಬೀದರ್ ಜಿಲ್ಲೆಯ ವಾಸಿಗಳು ಎನ್ನುವ ದಾಖಲೆಗಳು ಇಲ್ಲದ ಎಲ್ಲರನ್ನೂ ವಾಪಸ್‌ ಕಳಿಸಲಾಗಿದೆ. ಹೈದರಾಬಾದ್‌ನಿಂದ ಬಂದಿರುವ ದಾಖಲೆ ಇಲ್ಲದವರಿಗೆ ಜಹೀರಾಬಾದ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಅವರ ಮೇಲೆ ತೆಲಂಗಾಣ ಪೊಲೀಸರು ನಿಗಾ ಇಟ್ಟಿದ್ದಾರೆ. ಮಧ್ಯರಾತ್ರಿ ದಾಖಲೆ ಇಲ್ಲದೆ ಬರುತ್ತಿರುವ ಬೀದರ್‌ ಜಿಲ್ಲೆಯ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಹೊರಟಿರುವ ಕಾರ್ಮಿಕರ ಕೈಗಳ ಮೇಲೆ 21 ದಿನ ಅಳಿದು ಹೋಗದಂತೆ ಶಾಯಿ ಗುರುತು ಹಾಕಲಾಗುತ್ತಿದೆ.

ದೊಣ್ಣೆ ಹಿಡಿದ ಗ್ರಾಮಸ್ಥರು

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ವಡ್ಡಿ ಗ್ರಾಮಕ್ಕೆ ರಾಜ್ಯದ ಗಡಿಯೊಳಗಿನಿಂದ ಹೋಗಬೇಕಾಗುತ್ತದೆ. ಆದರೆ, ಅವರು ಗ್ರಾಮದೊಳಗೆ ಯಾರನ್ನೂ ಒಳಬರಲು ಬಿಡುತ್ತಿಲ್ಲ. ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮದ ಕೆಲ ಯುವಕರು ದೊಣ್ಣೆಗಳನ್ನು ಹಿಡಿದು ಕಾವಲು ಕಾಯುತ್ತಿದ್ದಾರೆ.

ಎರಡು ದಿನಗಳ ಹಿಂದೆ ರಸ್ತೆ ಮೇಲೆ ಮುಳ್ಳು ಹಾಕಿದ್ದರು. ರಾತ್ರಿ ವೇಳೆಯಲ್ಲಿ ಕೆಲವರು ತೆರವುಗೊಳಿಸುತ್ತಿದ್ದಾರೆ. ಹೀಗಾಗಿ ಭಾನುವಾರದಿಂದ ರಸ್ತೆಗೆ ಅಡ್ಡಲಾಗಿ ಮರಗಳಿಗೆ ಹಗ್ಗ ಕಟ್ಟಿ ರಸ್ತೆ ಮಧ್ಯೆ ಕುಳಿತುಕೊಂಡಿದ್ದಾರೆ. ಪರಿಚಿತರು ಇದ್ದರೆ ಮಾತ್ರ ಗ್ರಾಮದೊಳಗೆ ಪ್ರವೇಶ ಕಲ್ಪಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT