ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರ ಹೊಟ್ಟೆ ತುಂಬಲು ಗೋವು ಕಡಿಯಲು ಪ್ರೇರಣೆ ನೀಡುತ್ತಿದ್ದೀರಿ? –ಪ್ರಭು ಚವಾಣ್‌

Published 6 ಜೂನ್ 2023, 10:58 IST
Last Updated 6 ಜೂನ್ 2023, 10:58 IST
ಅಕ್ಷರ ಗಾತ್ರ

ಬೀದರ್‌: ‘ಯಾರ ಹೊಟ್ಟೆ ತುಂಬಲು ಗೋವುಗಳನ್ನು ಕಡಿಯಲು ಪ್ರೇರಣೆ ನೀಡುತ್ತಿದ್ದೀರಿ?’ ಎಂದು ಮಾಜಿ ಪಶು ಸಂಗೋಪನಾ ಸಚಿವರೂ ಆದ ಔರಾದ್‌ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಭು ಚವಾಣ್‌ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ತನ್ನ ನಿಜ ಬಣ್ಣವನ್ನು ತೋರಿಸಲು ಪ್ರಾರಂಭಿಸಿದೆ. ಹಸು ಏಕೆ ಕಡಿಯಬಾರದು? ಎಂಬ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರ ಹೇಳಿಕೆ ತೀವ್ರ ಖಂಡನಾರ್ಹವಾದುದು ಎಂದು ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೋವುಗಳನ್ನು ಏಕೆ ಕಡಿಯಬಾರದು ಎನ್ನುವ ನಿಮ್ಮ ಮನಸ್ಥಿತಿಯೇ ನನಗೆ ವಿಚಿತ್ರವಾಗಿ ಕಾಣಿಸುತ್ತಿದೆ. ಒಂದಿಷ್ಟು ಕಸಾಯಿಖಾನೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ, ಗೋವುಗಳ ದಾರುಣ ಅಂತ್ಯ ಎಲ್ಲವನ್ನು ನೋಡಿದ ನಂತರ ಮತ್ತೊಮ್ಮೆ ಆಲೋಚಿಸಿ ಹೇಳಿಕೆ ನೀಡಬೇಕೆಂದು ಸಚಿವ ವೆಂಕಟೇಶ್‌ ಅವರಿಗೆ ಸಲಹೆ ಮಾಡಿದ್ದಾರೆ.

ಗೋ ಹತ್ಯೆ ನಿಷೇಧ ಕಾಯ್ದೆ ಕಾಂಗ್ರೆಸ್ ಅವಧಿಯಲ್ಲೇ ಜಾರಿಗೆ ಬಂದಿದೆ. ಆಗಲೂ ಸಹ ಹಸುವನ್ನು ಕಡಿಯಬಾರದು ಎಂದು ಕಾನೂನಾಗಿತ್ತು. ಆದರೆ, ಆ ಕಾನೂನಿನಲ್ಲಿದ್ದ ಕೆಲ ದುರ್ಬಲವಾದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಗೋಹತ್ಯೆ ನಿಷೇಧ ಕಾಯ್ದೆಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಬಲಪಡಿಸಲಾಗಿದೆ. ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕೇವಲ ರಾಜಕೀಯ ಲಾಭ, ನಷ್ಟದ ದೃಷ್ಟಿಯಿಂದ ನೋಡುವ ಬದಲು ಜನಸಾಮಾನ್ಯನ, ರೈತನ ಜೀವನದಲ್ಲಿ ಇರುವ ಅದರ ಭಾವನಾತ್ಮಕ ಸಂಬಂಧದ ಬಗ್ಗೆ ತಿಳಿದುಕೊಂಡು ಮಾತನಾಡುವುದು ಒಳ್ಳೆಯದು ಎಂದು ಹೇಳಿದ್ದಾರೆ.

ಮನೆಯಲ್ಲಿ ಗೋವು ಸಾಕುವುದಿಲ್ಲವೆಂದ ಕಾರಣಕ್ಕೆ ಅದರ ಬಗ್ಗೆ ಭಾವನಾತ್ಮಕ ಸಂಬಂಧ ಇರಬಾರದು ಎಂದೇನಿಲ್ಲ. ಅದು ತಾಯಿಯಂತೆ ನಿತ್ಯ ಪೂಜೆಗೊಳಗಾಗುವ ದೈವ. ಅದರ ಸಂರಕ್ಷಣೆ, ಪೋಷಣೆ ಮತ್ತು ಗೋ ತಳಿಗಳ ಅಭಿವೃದ್ಧಿ ಸರ್ಕಾರದ ಮೂಲ ಕರ್ತವ್ಯವಾಗಿರಬೇಕೇ ಹೊರತು ಗೋವುಗಳನ್ನು ಕಡಿಯುವುದಕ್ಕೆ ಪ್ರೇರೇಪಿಸುವುದಲ್ಲ ಎಂದು ಕಿಡಿ ಕಾರಿದ್ದಾರೆ.

ನಮ್ಮ ಸರ್ಕಾರದ ಅವಧಿಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಅನುಷ್ಠಾನದ ನಂತರ ಗೋವುಗಳ ಸಂರಕ್ಷಣೆಗೆ ಶ್ರಮ ಪಟ್ಟಿದ್ದೇವೆ. ಪ್ರಾಣಿ ಕಲ್ಯಾಣ ಸಹಾಯವಾಣಿ, ಪ್ರಾಣಿ ಕಲ್ಯಾಣ ಮಂಡಳಿ, ಜಿಲ್ಲೆಗೊಂದು ಗೋಶಾಲೆ, ಪಶು ಚಿಕಿತ್ಸಾ ವಾಹನ ಹೀಗೆ ಗೋ ಸಂರಕ್ಷಣೆಗೆ ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಗೋವನ್ನು ಒಮ್ಮೆ ವೈಜ್ಞಾನಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅಧ್ಯಯನ ನಡೆಸಿ ನಂತರ ತೀರ್ಮಾನಿಸಿ ಎಂದು ಸಲಹೆ ಕೊಟ್ಟಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT