ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ಬಾಕಿ ಹಣ ಬಿಡುಗಡೆಗೆ ಬಿಜೆಪಿ ರೈತ ಮೋರ್ಚಾ ಆಗ್ರಹ

Published 18 ಮೇ 2024, 15:13 IST
Last Updated 18 ಮೇ 2024, 15:13 IST
ಅಕ್ಷರ ಗಾತ್ರ

ಬೀದರ್‌: ರಾಜ್ಯ ಸರ್ಕಾರವು ರೈತ ಉತ್ಪಾದಕರ ಸಂಸ್ಥೆಗಳಿಗೆ (ಎಫ್‌ಪಿಒ) ಬಾಕಿ ಇರುವ ಹಣ ಬಿಡುಗಡೆಗೊಳಿಸಬೇಕು ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಆಗ್ರಹಿಸಿದೆ.

ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಮೋರ್ಚಾ ಪ್ರಮುಖರು ನಗರದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಸಲ್ಲಿಸಿ ಒತ್ತಾಯಿಸಿದರು.

‘ಕೇಂದ್ರದ ಮಾದರಿಯಂತೆ ರಾಜ್ಯ ಸರ್ಕಾರ ಎಫ್‌ಪಿಒ ರಚನೆ ಮಾಡಿದೆ. ಆದರೆ, ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡದೆ ಬಾಕಿ ಉಳಿಸಿಕೊಂಡಿದೆ. ರಾಜ್ಯ ಸರ್ಕಾರ ಸ್ವಾತಂತ್ರ್ಯ ಅಮೃತ ನೆನಪಿಗಾಗಿ ಅಮೃತ ರೈತ ಉತ್ಪಾದಕರ ಸಂಸ್ಥೆಗಳನ್ನು ಹಿಂದಿನ ಬಿಜೆಪಿ ಸರ್ಕಾರದಲ್ಲಿ ರಚನೆ ಮಾಡಲಾಗಿತ್ತು. 2021-22ರಿಂದ ಈವರೆಗೆ ರಾಜ್ಯದಲ್ಲಿ 490 ರೈತ ಉತ್ಪಾದಕರ ಸಂಸ್ಥೆಗಳು ರಚನೆಯಾಗಿವೆ. ಅಂದಾಜು ₹150 ಕೋಟಿ ಅನುದಾನ ಬಿಡುಗಡೆ ಮಾಡಬೇಕಿದೆ. ಇದರಲ್ಲಿ ಶೇ.12ರಷ್ಟು ಅನುದಾನ ಹಿಂದಿನ ಬಿಜೆಪಿ ಸರ್ಕಾರ ಬಿಡುಗಡೆಗೊಳಿಸಿದೆ. ಅನುದಾನ ಕೊಡದ ಕಾರಣ ರೈತ ಉತ್ಪಾದಕರ ಸಂಸ್ಥೆಗಳ ಅಭಿವೃದ್ಧಿ ಕುಂಠಿತವಾಗಿದೆ’ ಎಂದು ಆರೋಪಿಸಿದರು.

ಅನುದಾನ ಬಿಡುಗಡೆಯಾಗದ ಕಾರಣ ಹತ್ತು ಲಕ್ಷ ರೈತರಿಗೆ ಮತ್ತು ಹನ್ನೆರಡು ಸಾವಿರ ರೈತ ಉತ್ಪಾದಕ ಸಂಸ್ಥೆಗಳ ನಿರ್ದೇಶಕರಿಗೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಬಾಕಿ ಇರುವ ಅನುದಾನವನ್ನು ಸಂಸ್ಥೆಗಳಿಗೆ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಂಜುಕುಮಾರ ಪಾಟೀಲ, ಪಕ್ಷದ ವಿಭಾಗೀಯ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್, ಪ್ರಮುಖರಾದ ರಾಜೇಂದ್ರ ಪೂಜಾರಿ, ಮಹೇಶ ಪಾಲಂ, ಚಂದ್ರಶೇಖರ ಪಾಟೀಲ, ನಾಗರಾಜ ಕರ್ಪೂರ, ರಾಜಕುಮಾರ ಹರಕಂಚಿ, ಸುದರ್ಶನ, ವೆಂಕಟ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT