ಗುರುವಾರ , ಮೇ 13, 2021
22 °C
ಹಾರಕೂಡದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಗಂಭೀರ ಆರೋಪ

ನಾರಾಯಣರಾವ್‌ಗೂ ‘ಆಪರೇಷನ್’ ಬಲೆ ಬೀಸಿದ್ದ ಬಿಜೆಪಿ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾರಕೂಡ (ಬಸವಕಲ್ಯಾಣ): ‘ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಯಡಿಯೂರಪ್ಪನವರು ಮುಖ್ಯಮಂತ್ರಿ ಆದರು. ಶಾಸಕ ದಿ.ಬಿ.ನಾರಾಯಣರಾವ್ ಅವರಿಗೂ ಬಿಜೆಪಿ ಸೇರ್ಪಡೆಗೆ ಸಾಕಷ್ಟು ಒತ್ತಡ ತಂದರೂ ಅವರು ಹಣಕ್ಕೆ ಆಸೆಪಡದೆ ಪಕ್ಷ ನಿಷ್ಠೆ ಹಾಗೂ ಪ್ರಾಮಾಣಿಕತೆ ಮೆರೆದರು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

ತಾಲ್ಲೂಕಿನ ಹಾರಕೂಡದಲ್ಲಿ ಶುಕ್ರವಾರ ನಡೆದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ.ನಾರಾಯಣರಾವ್ ಪ್ರಚಾರ ಸಭೆಗೂ ಮೊದಲು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ಯಾವಾಗ ಚುನಾವಣೆ ಬರುತ್ತದೋ ಎಂಬಂಥ ಪರಿಸ್ಥಿತಿ ಇದೆ. ಇದನ್ನು ವಿರೋಧ ಪಕ್ಷದವರು ಹೇಳುತ್ತಿಲ್ಲ. ಸಚಿವ ಈಶ್ವರಪ್ಪ, ಶಾಸಕ ಬಸವರಾಜ ಪಾಟೀಲ ಯತ್ನಾಳ ಅವರೇ ತೊಡೆತಟ್ಟಿ ನಿಂತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಈ ಭಾಗದ ಅಭಿವೃದ್ಧಿಗೆ ಮಹತ್ವದ ಯೋಜನೆ ಜಾರಿಗೊಳಿಸಿಲ್ಲ’ ಎಂದು ಹೇಳಿದರು.

‘ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆಯ ಅನುಭವ ಮಂಟಪ ಸ್ಥಾಪಿಸಿದ ಅಣ್ಣ ಬಸವಣ್ಣನವರ ನೆಲದಲ್ಲಾದರೂ ಅವರು ವಿಕಾಸ ಕೈಗೊಳ್ಳಬೇಕಾಗಿತ್ತು. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ರಚಿಸಿದವರು ನಾವು. ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಶಂಕುಸ್ಥಾಪನೆ ಇವರು ನೆರವೇರಿಸಿದರೂ ಭೂಸ್ವಾಧೀನ ನಡೆಸಿಲ್ಲ. ಈ ಚುನಾವಣೆ ಫಲಿತಾಂಶದ ಮೂಲಕ ಉತ್ತಮ ಸಂದೇಶ ಕೊಡಬೇಕು’ ಎಂದು ಅವರು ಹೇಳಿದರು.

ಒಂದು ವೇಳೆ ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ₹ 6 ಸಾವಿರ ನಿರುದ್ಯೋಗ ಭತ್ಯೆ ನೀಡಲಾಗುವುದು. ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ವಿತರಿಸಲಾಗುವುದು’ ಎಂದು ಭರವಸೆ ನೀಡಿದರು. ಅಭ್ಯರ್ಥಿ ಮಾಲಾ ಬಿ.ನಾರಾಯಣರಾವ್, ಶಾಸಕರಾದ ರಾಜಶೇಖರ ಪಾಟೀಲ, ಪ್ರಿಯಾಂಕ್ ಖರ್ಗೆ, ರಹೀಂಖಾನ್, ಅಜಯಸಿಂಗ್, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ, ಡಾ.ಶರಣಪ್ರಕಾಶ ಪಾಟೀಲ, ಬಿ.ಆರ್.ಪಾಟೀಲ, ವಿಧಾನಪರಿಷತ್ ಸದಸ್ಯರಾದ ವಿಜಯಸಿಂಗ್, ಅರವಿಂದಕುಮಾರ ಅರಳಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ರಾಠೋಡ, ಬಾಬು ಹೊನ್ನಾನಾಯಕ್, ದತ್ತು ಮೂಲಗೆ, ಶಿವರಾಜ ನರಶೆಟ್ಟಿ, ಆನಂದ ದೇವಪ್ಪ, ಅರ್ಜುನ ಕನಕ, ಕೇಶಪ್ಪ ಬಿರಾದಾರ, ಮನೋಜ ಮಾಶೆಟ್ಟೆ, ಯುವರಾಜ ಭೆಂಡೆ, ದಿಲೀಪ ಶಿಂಧೆ, ಸಂದೀಪ ಬುಯೆ, ಶರಣು ಆಲಗೂಡ, ಮಹಾದೇವ ಪೂಜಾರಿ, ದೇವೇಂದ್ರ ಬಾಳಿ, ಅನ್ನಪೂರ್ಣ ಅಂಬಾರಾಯ ಪಾಲ್ಗೊಂಡಿದ್ದರು. ಕಾರ್ಯಕರ್ತರು, ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಸೇರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು