ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಮನಾಬಾದ್ | ವಿದ್ಯಾರ್ಥಿಗಳಿಗೆ ತೊಂದರೆ: ಶಾಲಾ ಸಮಯಕ್ಕೆ ಬಸ್‌ ವ್ಯವಸ್ಥೆಗೆ ಆಗ್ರಹ

ಗುಂಡು ಅತಿವಾಳ
Published 5 ಜನವರಿ 2024, 6:13 IST
Last Updated 5 ಜನವರಿ 2024, 6:13 IST
ಅಕ್ಷರ ಗಾತ್ರ

ಹುಮನಾಬಾದ್: ತಾಲ್ಲೂಕಿನ ಮದರಗಾಂವ ಗ್ರಾ.ಪ‍ಂ ವ್ಯಾಪ್ತಿಯ ಅಲ್ಲೂರ ಗ್ರಾಮಕ್ಕೆ ಸೂಕ್ತ ಬಸ್‌ ವ್ಯವಸ್ಥೆಯಿಲ್ಲ. ಶಾಲಾ–ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ರೋಗಿಗಳು, ಗ್ರಾಮಸ್ಥರು ವೈಯಕ್ತಿಕ ಕೆಲಸಗಳಿಗಾಗಿ ಪಟ್ಟಣಕ್ಕೆ ಹೋಗಿಬರಲು ತೊಂದರೆಯಾಗುತ್ತಿದೆ. ಹೀಗಾಗಿ ಅಲ್ಲೂರ ಗ್ರಾಮಕ್ಕೆ ಸೂಕ್ತ ಬಸ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹುಮನಾಬಾದ್‌ನಿಂದ ಗ್ರಾಮಕ್ಕೆ ಬೆಳಿಗ್ಗೆ 8.30ಕ್ಕೆ ಒಂದು ಬಸ್ ಬರುತ್ತಿತ್ತು. ಆದರೆ ಸಮಯ ಪಾಲನೆಯಾಗುತ್ತಿಲ್ಲ. ಇದರಿಂದಾಗಿ ನಿತ್ಯವೂ ತರಗತಿಗಳನ್ನು ತಪ್ಪಿಸಿಕೊಳ್ಳಬೇಕಾಗುತ್ತಿದೆ. ನಮ್ಮ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ತಮ್ಮ ಸಮಸ್ಯೆ ತೋಡಿಕೊಂಡರು.

ವಿದ್ಯಾರ್ಥಿಗಳು ನಿತ್ಯವೂ ಅಲ್ಲೂರ ಗ್ರಾಮದಿಂದ ಹಳ್ಳಿಖೇಡ್(ಬಿ) ಪಟ್ಟಣಕ್ಕೆ ಹೋಗಿ ಅಲ್ಲಿಂದ ಹುಮನಾಬಾದ್‌ಗೆ ತೆರಳಬೇಕಿದ್ದು, ಶಾಲಾ–ಕಾಲೇಜುಗಳಿಗೆ ತೆರಳಲು ಅನಾನುಕೂಲ ಆಗುತ್ತಿದೆ. ಅಲ್ಲೂರ್‌ ಗ್ರಾಮದಿಂದ ಹಳ್ಳಿಖೇಡ್(ಬಿ) 5 ಕಿ.ಮೀ. ಇದ್ದು, ಅಲ್ಲಿಗೆ ನಡೆದೇ ಹೋಗಬೇಕು. ಇಲ್ಲದಿದ್ದರೆ ಅಂದಿನ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಹಿಂದಿನಂತೆ ಸಮಕ್ಕೆ ಸರಿಯಾಗಿ 8.30ಕ್ಕೆ ಬಸ್‌ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಹುಮನಾಬಾದ್ ಪಟ್ಟಣದಿಂದ ನಿಂಬೂರು ಗ್ರಾಮಕ್ಕೆ ಬರುವ ಬಸ್‌ ಅನ್ನು ಅಲ್ಲೂರ ಗ್ರಾಮಕ್ಕೆ ವಾಯಾ ಮಾಡಿಕೊಂಡು ತೆರಳಬೇಕು ಎಂದು ಗ್ರಾಮದ ಮುಖಂಡರಾದ ಅಶೋಕ ರೆಡ್ಡಿ, ಪರಮೇಶ್ವರ, ಶರಣಪ್ಪ ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಬಿಡಬೇಕು. ಬಸ್ ಬಾರದ ಕಾರಣ ನಿತ್ಯವೂ ವಿದ್ಯಾರ್ಥಿಗಳು ಬೇರೆ ಗ್ರಾಮಕ್ಕೆ ಹೋಗಿ ಅಲ್ಲಿಂದ ಬಸ್ ಹತ್ತಿ ಹುಮನಾಬಾದ್ ಹೋಗುವ ಪರಿಸ್ಥಿತಿಯಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಅಲ್ಲೂರ ಗ್ರಾಮಕ್ಕೆ ಬೆಳಿಗ್ಗೆ ಬಸ್ ಬರುವಂತೆ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಅಶೋಕ ರೆಡ್ಡಿ ಆಗ್ರಹಿಸಿದರು.

ಸೂಕ್ತ ಚರಂಡಿ ವ್ಯವಸ್ಥೆಗೆ ಆಗ್ರಹ: ತಾಲ್ಲೂಕಿನ ಅಲ್ಲೂರ ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲ. ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಸಿಸಿ ರಸ್ತೆಗಳು, ನಿಯಂತ್ರಣಕ್ಕೆ ಬಾರದ ಬಹಿರ್ದೆಸೆ ಹಾಗೂ ಸ್ವಚ್ಛತೆಯ ಸಮಸ್ಯೆಯಿಂದ ಗ್ರಾಮಸ್ಥರು ಪರದಾಡುವಂತಾಗಿದೆ.

ಗ್ರಾಮದಲ್ಲಿ ಈವರೆಗೂ ಸೂಕ್ತ ಚರಂಡಿ ವ್ಯವಸ್ಥೆಯಾಗಿಲ್ಲ. ಅಲ್ಲದೇ ಗ್ರಾ.ಪಂ. ಸಿಬ್ಬಂದಿ, ಅಧಿಕಾರಿಗಳು ಚರಂಡಿಯಲ್ಲಿನ ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಂಡಿಲ್ಲ. ಕೊಳಚೆ ನೀರು ಹರಿಯಲು ಸೂಕ್ತ ವ್ಯವಸ್ಥೆಯಿಲ್ಲದೇ ರಸ್ತೆ ಮೇಲೆಯೇ ಹರಿಯುತ್ತಿದೆ. ಕೊಳಚೆ ನೀರು ಖಾಲಿ ನಿವೇಶನಗಳಲ್ಲಿ ಸಂಗ್ರಹಗೊಂಡು ಸೊಳ್ಳೆಗಳ ಉತ್ಪತ್ತಿ ತಾಣವಾಗುತ್ತಿವೆ. ಸೊಳ್ಳೆಗಳಿಂದಾಗಿ ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಶೀಘ್ರದಲ್ಲೇ ಚರಂಡಿಗಳಲ್ಲಿ ನೀರು ಹರಿಯುವಂತೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.

ಗ್ರಾಮಸ್ಥರಲ್ಲಿ ಶೌಚಾಲಯದ ಅರಿವು ಮೂಡಿಸಿ: ಗ್ರಾಮದಲ್ಲಿ ಬಹುತೇಕರು ಸ್ವಚ್ಛಗ್ರಾಮ ಯೋಜನೆ ಅಡಿಯಲ್ಲಿ ತಮ್ಮ ಮನೆಗಳಲ್ಲೇ ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೂ ಗ್ರಾಮಸ್ಥರು ಅವುಗಳನ್ನು ಬಳಸದೇ ಬಹಿರ್ದಸೆಗೆಂದು ತೆರಳುತ್ತಾರೆ. ಗ್ರಾ.ಪಂ. ಸಿಬ್ಬಂದಿ ಹಾಗೂ ಅಧಿಕಾರಿಗಳು, ಗ್ರಾಮಸ್ಥರಲ್ಲಿ ಶೌಚಾಲಯ ಬಳಕೆ ಕುರಿತು ಜಾಗೃತಿ ಹಾಗೂ ಅರಿವು ಮೂಡಿಸಬೇಕು ಎಂದು ಉಮೇಶ ಒತ್ತಾಯಿಸಿದ್ದಾರೆ.

ಅಲ್ಲೂರ ಗ್ರಾಮದಲ್ಲಿ ಚರಂಡಿ ನಿರ್ಮಾಣ ಮಾಡಿಸಲಾಗುವುದು. ಈಗಾಗಲೇ ಗ್ರಾಮದ ಬಹುತೇಕರ‌ ಮನೆಗಳಲ್ಲಿ ಶೌಚಾಲಯವಿದೆ. ಶೌಚಾಲಯವನ್ನು ಎಲ್ಲರೂ ಬಳಸಬೇಕು
ಗೀತಾ ಪಿಡಿಒ ಮದರಗಾಂವ ಗ್ರಾ.ಪಂ.
ಅಲ್ಲೂರ ಗ್ರಾಮಕ್ಕೆ ಬಸ್‌ ವ್ಯವಸ್ಥೆ ಮಾಡುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಿ ಸಮಯಕ್ಕೆ ಸರಿಯಾಗಿ ಗ್ರಾಮಕ್ಕೆ ಬಸ್‌ ಹೋಗುವಂತೆ ಮಾಡುತ್ತೇವೆ
ಗಣಪತಿರಾವ ಡಿಪೋ ಪ್ರಭಾರ ವ್ಯವಸ್ಥಾಪಕ
ಅಲ್ಲೂರ ಗ್ರಾಮದಿಂದ ನಿತ್ಯವೂ ಹುಮನಾಬಾದ್ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕಾಗಿ 18ರಿಂದ 20 ಜನ ವಿದ್ಯಾರ್ಥಿಗಳು ಹೋಗುತ್ತಾರೆ. ಅವರ ಅನುಕೂಲಕ್ಕಾಗಿ ಬೆಳಿಗ್ಗೆ ಬಸ್ ವ್ಯವಸ್ಥೆ ಮಾಡಬೇಕು
ಶರಣಪ್ಪ ಗ್ರಾಮದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT