ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭು ಚವಾಣ್ ಅವರಿಂದ BJP ಕಾರ್ಯಕರ್ತರು ಆರ್ಥಿಕವಾಗಿ ದಿವಾಳಿ– ಕೇಂದ್ರ ಸಚಿವ ಖೂಬಾ

ಚವಾಣ್ ಹುಕುಂಷಾಹಿ ವರ್ತನೆಗೆ ಕಾರ್ಯಕರ್ತರು ದೂರ
Published 14 ಆಗಸ್ಟ್ 2023, 15:48 IST
Last Updated 14 ಆಗಸ್ಟ್ 2023, 15:48 IST
ಅಕ್ಷರ ಗಾತ್ರ

ಔರಾದ್‌ (ಬೀದರ್‌): ‘ಶಾಸಕ ಪ್ರಭು ಚವಾಣ್ ಅವರ ಹುಕುಂಷಾಹಿ ವರ್ತನೆಯಿಂದ ಅನೇಕ ಹಿರಿಯ ನಿಷ್ಠಾವಂತ ಕಾರ್ಯಕರ್ತರು ಅವರಿಂದ ದೂರ ಆಗುತ್ತಿದ್ದಾರೆ’ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ಪಟ್ಟಣದ ಅಮರೇಶ್ವರ ದೇವಸ್ಥಾನದಲ್ಲಿ ಸೋಮವಾರ ಏರ್ಪಡಿಸಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಭೆಯಲ್ಲಿ ಶಾಸಕ ಪ್ರಭು ಚವಾಣ್ ತಮ್ಮ ಮೇಲೆ ಮಾಡಿದ ಆರೋಪಗಳ ಕುರಿತು ಪ್ರಸ್ತಾಪಿಸಿ ಮಾತನಾಡಿದ ಅವರು, ತಮಗೆ ಆಗದ ಕಾರ್ಯಕರ್ತರನ್ನು ಚವಾಣ್‌ ಅವರು ಪಕ್ಷದಿಂದ ಹೊರ ಹಾಕುತ್ತಿದ್ದಾರೆ. ಅವರನ್ನು ಆರ್ಥಿಕವಾಗಿ ದಿವಾಳಿ ಮಾಡುವಂತಹ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನನ್ನ ವಿರುದ್ಧ ಚವಾಣ್‌ ಮಾಡಿರುವ ಕೊಲೆ ಆರೋಪದಲ್ಲಿ ಹುರುಳಿಲ್ಲ. ಅಂತಹ ನೀಚ ವ್ಯಕ್ತಿತ್ವ ನನ್ನದಲ್ಲ. ಅವರ ಎಲ್ಲಾ ಆರೋಪಗಳನ್ನು ಅಮರೇಶ್ವರ ದೇವರ ಮುಡಿಗೆ ಅರ್ಪಿಸಿದ್ದೇನೆ. ಅದಕ್ಕಾಗಿಯೇ ಇಲ್ಲಿಗೆ ಬಂದಿರುವೆ ಎಂದರು.

ಇತ್ತೀಚೆಗೆ ಔರಾದ್‌ನಲ್ಲಿ ಏರ್ಪಡಿಸಿದ್ದ ಬಿಜೆಪಿ ಸಭೆಯಲ್ಲಿ ಅವರು ನನ್ನ ವಿರುದ್ಧ ಮಾಡಿದ ಸಾಲು ಸಾಲು ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಅದೊಂದು ಪ್ರಚಾರ ಗಿಟ್ಟಿಸುವ ತಂತ್ರ. ನಾನು ಯಾವುದೇ ಚೆಕ್ ಬೌನ್ಸ್‌ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿಲ್ಲ. ಸರ್ಕಾರಿ ಜಮೀನು ಖರೀದಿಸಿಲ್ಲ. ಸ್ವಜನಪಕ್ಷಪಾತ ಮಾಡಿಲ್ಲ ಎಂದು ಚವಾಣ್ ಅವರಿಗೆ ಕುಟುಕಿದರು.

ವಿಧಾನಸಭೆ ಚುನಾವಣೆ ಮುಂಚೆ ನಡೆದ ಪಕ್ಷದ ರಾಜ್ಯ ಮಟ್ಟದ ನಾಯಕರ ಸಭೆಯಲ್ಲಿ ಹಳೆ ಕಾರ್ಯರ್ಕತರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಹೆಚ್ಚು ಅನುಕೂಲವಾಗುತ್ತದೆ ಎಂಬ ನನ್ನ ಅಭಿಪ್ರಾಯವನ್ನು ಚವಾಣ್ ತಿರಸ್ಕರಿಸಿದರು. ನಾಮಮಪತ್ರ ಸೇರಿದಂತೆ ಇಡೀ ಚುನಾವಣೆ ಮುಗಿದರೂ ನನಗೆ ಅವರು ಕರೆಯಲಿಲ್ಲ. ಆದರೂ ನಾನು ಪಕ್ಷದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಪರವಾಗಿ ಮತ ಕೇಳಿದೆ. ಆದರೂ ಅವರು ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಪ್ರಯತ್ನಿಸಿದರು ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ನನ್ನ ಮೇಲೆ ಭ್ರಷ್ಟಾಚಾರದ ಸಣ್ಣ ಆರೋಪ ಮಾಡಲು ವಿರೋಧಿಗಳಿಗೆ ಸಿಗುತ್ತಿಲ್ಲ. ನಾನು ನನ್ನ ಜಮೀನು ಮಾರಿ ಚುನಾವಣೆ ಎದುರಿಸಿದ್ದೇನೆ. ಕಳೆದ 9 ವರ್ಷಗಳಲ್ಲಿ ಒಂದು ಗುಂಟೆ ಜಮೀನು ಸಹ ಖರೀದಿ ಮಾಡಿಲ್ಲ. ಇದನ್ನು ಸಹಿಸದ ಕೆಲವರು ನನ್ನ ಮೇಲೆ ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡರಾದ ಗಣಪತರಾವ ಖೂಬಾ, ಚಂದ್ರಪಾಲ ವಕೀಲ, ಬಂಡೆಪ್ಪ ಕಂಟೆ, ರವಿ ಮೀಸೆ, ರಮೇಶ ಬಿರಾದಾರ, ಪ್ರಕಾಶ ಘುಳೆ, ನಾರಾಯಣರಾವ ಪಾಟೀಲ, ಶರಣಪ್ಪ ಪಂಚಾಕ್ಷಿರೆ ಹಾಜರಿದ್ದರು. 

‘ಕೊಲೆ ಆರೋಪ, ಖಂಡ್ರೆಗೆ ಯಾಕಿಷ್ಟು ಆಸಕ್ತಿ’

‘ಶಾಸಕ ಪ್ರಭು ಚವಾಣ್ ಅವರು ನನ್ನ ಮೇಲೆ ಮಾಡಿದ ಕೊಲೆ ಆರೋಪ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ಯಾಕಿಷ್ಟು ಆಸಕ್ತಿ? ಕೂಡಲೇ ತನಿಖೆ ನಡೆಸಬೇಕು ಎಂದು ಹೇಳಿರುವ ಹಿಂದೆ ಚವಾಣ್-ಖಂಡ್ರೆ ನಡುವೆ ಹೊಂದಾಣಿಕೆ ರಾಜಕಾರಣಕ್ಕೆ ನಿದರ್ಶನ. ನನ್ನ ಮತ್ತು ಚವಾಣ್ ನಡುವೆ ಖಂಡ್ರೆ ಅವರು ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ’ ಕೇಂದ್ರ ಸಚಿವ ಭಗವಂತ ಖೂಬಾ ಅವರು ಪತ್ರಕರ್ತರೊಂದಿಗೆ ಮಾತನಾಡುವಾಗ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT