ಗುರುವಾರ , ಫೆಬ್ರವರಿ 27, 2020
19 °C
ಸಿಎಎ ಅಳಿಸಿ, ಪ್ರಜಾಪ್ರಭುತ್ವ ಉಳಿಸಿ ಸಮಾವೇಶದಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿಕೆ

ಸಿಎಎಯಿಂದ ಶೇ 85 ರಷ್ಟು ಜನರಿಗೆ ತೊಂದರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‍ಆರ್‌ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್) ಜಾರಿಯಿಂದ ದಲಿತರು, ಮುಸ್ಲಿಮರಷ್ಟೇ ಅಲ್ಲ; ದೇಶದ ಸುಮಾರು ಶೇ 85 ರಷ್ಟು ಜನರಿಗೆ ತೊಂದರೆಯಾಗಲಿದೆ’ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ರಾಷ್ಟ್ರೀಯ ಭಾವೈಕ್ಯತೆ ಮತ್ತು ಭ್ರಾತೃತ್ವ ವೇದಿಕೆ ವತಿಯಿಂದ ಇಲ್ಲಿಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ್ದ ಸಿಎಎ, ಎನ್‍ಆರ್‌ಸಿ ಹಾಗೂ ಎನ್‌ಪಿಆರ್ ಅಳಿಸಿ ಪ್ರಜಾಪ್ರಭುತ್ವ ಉಳಿಸಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಎನ್‌ಆರ್‌ಸಿಯಲ್ಲಿ ಕೇಳಲಾದ ಅಜ್ಜನ ಹುಟ್ಟಿದ ದಿನಾಂಕ, ಅದಕ್ಕೆ ಸಂಬಂಧಿಸಿದ ದಾಖಲೆಗಳು ಯಾರಿಗೂ ಸಿಗುವುದಿಲ್ಲ. ಹೀಗಾಗಿ ಬಹುತೇಕರು ಸಮಸ್ಯೆ ಎದುರಿಸಬೇಕಾಗಲಿದೆ’ ಎಂದು ತಿಳಿಸಿದರು.

‘ಡಾ. ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಬುಡಮೇಲು ಮಾಡಿ ಹಿಂದುತ್ವವನ್ನು ಜಾರಿಗೊಳಿಸುವ ಹುನ್ನಾರ ನಡೆದಿದೆ. ಸಿಎಎ, ಎನ್‍ಆರ್‌ಸಿ, ಎನ್‌ಪಿಆರ್ ಬೇರುಗಳು ಹಿಂದುತ್ವದಲ್ಲಿ ಇವೆ’ ಎಂದು ಆರೋಪಿಸಿದರು.

‘ಹಿಂದುತ್ವದ ಬೇರು ಮನುವಾದದಲ್ಲಿ, ಮನುವಾದದ ಬೇರು ಬ್ರಾಹ್ಮಣವಾದದಲ್ಲಿ, ಬ್ರಾಹ್ಮಣ ವಾದದ ಬೇರು ವರ್ಣಾಶ್ರಮದಲ್ಲಿ ಹಾಗೂ ವರ್ಣಾಶ್ರಮದ ಬೇರು ಆರ್‌ಎಸ್‍ಎಸ್‌ನಲ್ಲಿ ಇದೆ’ ಎಂದು ಹೇಳಿದರು.

ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮಾತನಾಡಿ, ‘ಬಿಜೆಪಿಯವರು ಸಿಎಎ, ಎನ್‍ಆರ್‌ಸಿ ಮತ್ತು ಎನ್‌ಪಿಆರ್‌ಗಳ ಮೂಲಕ ತಮ್ಮ ವಿರೋಧಿಗಳನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಡಾ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ತೆಗೆದು ಮನುಸ್ಮೃತಿಯನ್ನು ಜಾರಿಗೊಳಿಸಲು ಹವಣಿಸುತ್ತಿದ್ದಾರೆ. ಆದರೆ, ನಾವು ಅದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ತಿಳಿಸಿದರು.

‘ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ದಲಿತ, ಮುಸ್ಲಿಮ್ ಹಾಗೂ ಇತರ ಹಿಂದುಳಿದ ವರ್ಗಗಳ ವಿರುದ್ಧ ಕೆಲಸ ಮಾಡುತ್ತಿದೆ. ಮೂರೂ ಕಾಯ್ದೆಗಳನ್ನು ಕೈಬಿಡದಿದ್ದರೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ’ ಎಂದು ಹೇಳಿದರು.

ನವದೆಹಲಿಯ ಮೋಹಿತ್ ಶರ್ಮಾ ಮಾತನಾಡಿ, ‘ಹಿಂದೂ-ಮುಸ್ಲಿಮ್ ಇಬ್ಬರೂ ಸೇರಿದಾಗಲೇ ಹಿಂದೂಸ್ತಾನ ಆಗುತ್ತದೆ. ಆದರೆ, ಪ್ರಧಾನಿ ಹಿಂದೂತ್ವದ ಮೂಲಕ ಜಾತಿಯ ವಿಷ ಬೀಜ ಬಿತ್ತುತ್ತಿದ್ದಾರೆ. ಮೇಲ್ನೋಟಕ್ಕೆ ರಾಷ್ಟ್ರ ಪ್ರೇಮ ತೋರುತ್ತಿದ್ದಾರೆ’ ಎಂದು ಟೀಕಿಸಿದರು.

‘ಸಿಎಎ, ಎನ್‍ಆರ್‌ಸಿ, ಎನ್‌ಪಿಆರ್ ಬಗ್ಗೆ ಸ್ಪಷ್ಟ ಮಾಹಿತಿ ನೀಡದೆ, ಗೊಂದಲ ಉಂಟು ಮಾಡುತ್ತಿದ್ದಾರೆ. ಬರೀ ಸುಳ್ಳು ಹೇಳುತ್ತಿದ್ದಾರೆ. ಹೀಗಾಗಿ ಜನ ಜಾಗೃತರಾಗಬೇಕಾಗಿದೆ’ ಎಂದು ತಿಳಿಸಿದರು.

ಹೈಕೋರ್ಟ್ ವಕೀಲ ಅನಂತ ನಾಯ್ಡು, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಡಾ. ಸುಶೀಲ ಗೌತಮ ಮಾತನಾಡಿದರು.

ಭಂತೆ ಸಂಘರಖ್ಖಿತ, ಮೌಲಾನಾ ಮುಫ್ತಿ ಶೇಕ್ ಅಬ್ದುಲ್ ಗಫಾರ್ ಸಾನಿಧ್ಯ ವಹಿಸಿದ್ದರು. ರಾಷ್ಟ್ರೀಯ ಭಾವೈಕ್ಯತೆ ಮತ್ತು ಭ್ರಾತೃತ್ವ ವೇದಿಕೆಯ ಅಧ್ಯಕ್ಷ ಅಭಿ ಕಾಳೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಾಧ್ಯಕ್ಷ ಸೈಯದ್ ವಹೀದ್ ಲಖನ್, ರಾಜಕುಮಾರ ಮೂಲಭಾರತಿ, ರವಿ ವಾಘಮಾರೆ, ಮನ್ಸೂರ್ ಖಾದ್ರಿ, ಲಕ್ಷ್ಮಿ ಬಾವುಗೆ, ರೇಷ್ಮಾ ಕುಂದನ್, ಇಂದುಮತಿ ಸಾಗರ್ ಉಪಸ್ಥಿತರಿದ್ದರು.

ವೇದಿಕೆಯ ಗೌರವಾಧ್ಯಕ್ಷ ಉಮೇಶಕುಮಾರ ಸ್ವಾರಳ್ಳಿಕರ್ ಸ್ವಾಗತಿಸಿದರು. ಮಹೇಶ ಗೋರನಾಳಕರ್ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು