ಮಂಗಳವಾರ, ಆಗಸ್ಟ್ 3, 2021
26 °C
ದೂರದ ಊರುಗಳ ಬಸ್‌ಗಳಲ್ಲಿ ಹೆಚ್ಚಿದ ಪ್ರಯಾಣಿಕರ ಸಂಖ್ಯೆ

ದರ್ಶನಕ್ಕೆ ತೆರೆದುಕೊಂಡ ಪ್ರಾರ್ಥನಾ ಮಂದಿರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಕೋವಿಡ್‌ ಕಾರಣ ಎರಡು ತಿಂಗಳಿಂದ ಬಾಗಿಲು ಮುಚ್ಚಿದ್ದ ಜಿಲ್ಲೆಯ ಅನೇಕ ತೀರ್ಥ ಕ್ಷೇತ್ರಗಳು, ಐತಿಹಾಸಿಕ ದೇಗುಲಗಳು ಹಾಗೂ ಪ್ರಾರ್ಥನಾ ಮಂದಿರಗಳು ಸೋಮವಾರ ತೆರೆದುಕೊಂಡವು. ಭಕ್ತರು ಹೂವು ಕಾಯಿ, ಕರ್ಪೂರದೊಂದಿಗೆ ದೇವಸ್ಥಾನಗಳಿಗೆ ಬಂದು ದೇವರ ದರ್ಶನ ಪಡೆದರು.

ಸಿಖ್‌ರ ಪವಿತ್ರ ಕ್ಷೇತ್ರ ಗುರುದ್ವಾರಕ್ಕೆ ಜನ ಬರಲು ಆರಂಭಿಸಿದ್ದಾರೆ. ಸಿಖ್‌ರು ಮಹಾರಾಷ್ಟ್ರದ ನಾಂದೇಡದಿಂದ ಮಿನಿ ಬಸ್‌ ಹಾಗೂ ಮಾಕ್ಸಿಕ್ಯಾಬ್‌ಗಳಲ್ಲಿ ಬಂದು ಗುರುಗ್ರಂಥ ಸಾಹೇಬ ದರ್ಶನ ಪಡೆದರು. ಗುರುನಾನಕ ಪ್ರಬಂಧಕ ಕಮಿಟಿಯವರು ವಿಶೇಷ ಪೂಜೆ ನಡೆಸಿದರು. ಭಜನಾ ಕಾರ್ಯಕ್ರಮವೂ ನಡೆಯಿತು.

ಮಹಾರಾಷ್ಟ್ರದಿಂದ ಧಾರ್ಮಿಕ ಪ್ರವಾಸಕ್ಕೆ ಬಂದಿದ್ದವರು ಜನವಾಡದಲ್ಲಿರುವ ಎರಡು ಗುರುದ್ವಾರಗಳಿಗೂ ಭೇಟಿ ನೀಡಿ ದರ್ಶನ ಪಡೆದರು. ದೇವರಿಗೆ ಭಕ್ತಿ ಸೇವೆ ಮಾಡಿ ಕೃತಾರ್ಥರಾದರು.

ತೆಲಂಗಾಣದ ಅನೇಕ ಭಕ್ತರು ಖಾಸಗಿ ವಾಹನಗಳಲ್ಲಿ ನರಸಿಂಹ ಝರಣಾ ದೇವಸ್ಥಾನಕ್ಕೆ ಬಂದಿದ್ದರು. ತಾಂತ್ರಿಕ ಕಾರಣದಿಂದ ಗುಹೆಯೊಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಿರಲಿಲ್ಲ. ಹೀಗಾಗಿ ಗುಹೆಯ ಪ್ರವೇಶ ದ್ವಾರದಲ್ಲಿಯೇ ಇರುವ ನರಸಿಂಹ ಸ್ವಾಮಿಯ ದರ್ಶನ ಪಡೆದು ಮರಳಿದರು.

ಕುಟುಂಬದ ಸದಸ್ಯರೊಂದಿಗೆ ಬಂದಿದ್ದ ಅನೇಕರು ಗುಹಾ ದೇವಾಲಯದೊಳಗೆ ಪ್ರವೇಶಿಸಲು ಅವಕಾಶ ದೊರೆಯದ ಕಾರಣ ನಿರಾಶರಾಗಿ ತೆರಳಿದರು. ಪಾಪನಾಶ ಮಂದಿರಕ್ಕೂ ಅನೇಕ ಜನ ಭೇಟಿ ಕೊಟ್ಟು ಹೊರಗಿನಿಂದ ಶಿವಲಿಂಗ ದರ್ಶನ ಪಡೆದರು. ಗರ್ಭಗುಡಿಯ ಬಾಗಿಲು ಮುಚ್ಚಿದ್ದರಿಂದ ಹೊರಗಿನಿಂದ ನೈವೇದ್ಯ ಸಮರ್ಪಿಸಿದರು.

ಮಸೀದಿಗಳಲ್ಲೂ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮೊದಲು ನಾಲ್ವರಿಗೆ ಮಾತ್ರ ನಮಾಜ್‌ ಮಾಡಲು ಅವಕಾಶ ನೀಡಲಾಗಿತ್ತು. ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ನಗರದಲ್ಲಿರುವ ದರ್ಗಾಗಳಲ್ಲೂ ಭಕ್ತರು ಕಂಡು ಬಂದರು.

* * *
ರಾತ್ರಿ ವರೆಗೂ ವಹಿವಾಟು ನಡೆಸಿದ ವ್ಯಾಪಾರಿಗಳು: ಲಾಕ್‌ಡೌನ್‌ ಸಡಿಲಗೊಳಿಸಿದ ನಂತರ ನಗರದಲ್ಲಿ ಅಂಗಡಿಗಳು ರಾತ್ರಿ 9 ಗಂಟೆಯ ವರೆಗೂ ತೆರೆದುಕೊಂಡ ಕಾರಣ ವ್ಯಾಪಾರ ವಹಿವಾಟಿನಲ್ಲಿ ಚೇತರಿಕೆ ಕಂಡು ಬಂದಿತು. ಜನ ಅಂಗಡಿಗಳಿಗೆ ತೆರಳಿ ಅಗತ್ಯ ಸಾಮಾಗ್ರಿ ಖರೀದಿಸಿದರು. ವ್ಯಾಪಾರಿಗಳು ಸಹ ರಾತ್ರಿಯ ವರೆಗೂ ವಹಿವಾಟು ನಡೆಸಿದರು.

ಜನ ಬಟ್ಟೆ ಅಂಗಡಿಗಳು, ಎಲೆಕ್ಟ್ರಾನಿಕ್ಸ್‌ ಹಾಗೂ ಎಲೆಕ್ಟ್ರಿಕಲ್‌ ಅಂಗಡಿಗಳಲ್ಲಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದರು. ಉದಗಿರ ರಸ್ತೆ, ಮೋಹನ್‌ ಮಾರ್ಕೆಟ್‌ ಹಾಗೂ ಓಲ್ಡ್‌ಸಿಟಿಯಲ್ಲಿ ಜನರ ಓಡಾಟ ಕಂಡು ಬಂದಿತು.

* * *
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಕಲರವ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್‌ ವಿಭಾಗದ ಎಲ್ಲ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಕಲರವ ಕೇಳಿ ಬಂದಿತು. ದೂರದ ಊರುಗಳಿಗೆ ಹೋಗುವ ಪ್ರಯಾಣಿಕರು ಖುಷಿಯಿಂದ ಬಸ್‌ಗಳಲ್ಲಿ ಕುಳಿತು ಸಾಗಿದರು. ಕೆಲವರು ಮೊದಲೇ ಟಿಕೆಟ್‌ ಬುಕ್‌ ಮಾಡಿದ್ದರು. ಉಳಿದವರು ಬಸ್‌ನಲ್ಲೇ ಟಿಕೆಟ್‌ ಪಡೆದರು.

ಬೆಂಗಳೂರು, ದಾವಣಗೆರೆ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಹೈದರಾಬಾದ್‌ ಬಸ್‌ಗಳಲ್ಲಿ ಪ್ರಯಾಣಿಕರ ಕೊರತೆ ಇರಲಿಲ್ಲ. ಪ್ರಯಾಣಿಕರು ಮಾಸ್ಕ್ ಧರಿಸಿ ಬಸ್‌ಗಳಲ್ಲಿ ಸಂಚರಿಸಿದರು. ಕೆಲವರು ಆಸನದಲ್ಲಿ ಕೂರುವ ಮೊದಲು ಸ್ಯಾನಿಟೈಸ್‌ ಮಾಡಿದರು.

ನಗರದ ಹಳೆಯ ಬಸ್‌ ನಿಲ್ದಾಣದಿಂದ ನೌಬಾದ್‌ ಕಡೆಗೆ ಸಾಗುತ್ತಿದ್ದ ಕೆಲ ಟಂಟಂ ಹಾಗೂ ಅಟೊರಿಕ್ಷಾಗಳು ಕೋವಿಡ್‌ ನಿಯಮ ಪಾಲನೆ ಮಾಡದೆ ಮನಬಂದಂತೆ ಪ್ರಯಾಣಿಕರನ್ನು ಕೂರಿಸಿಕೊಂಡು ಸಾಗಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು