ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ನೌಕರಿ ಆಸೆಗೆ ₹ 28 ಸಾವಿರ ಕಳೆದುಕೊಂಡ ಯುವಕ

ಅರ್ಜಿ ಸಲ್ಲಿಸಿದ ವಾರದಲ್ಲೇ ನಕಲಿ ನೇಮಕಾತಿ ಪತ್ರ
Last Updated 6 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಬೀದರ್‌: ನೌಕರಿ ಹುಡುಕಾಟದಲ್ಲಿರುವ ಯುವಕರನ್ನು ಗುರಿಯಾಗಿಸಿಕೊಂಡು ಮೋಸದ ಜಾಲಗಳು ಆನ್‌ಲೈನ್‌ನಲ್ಲಿ ಜಾಹೀರಾತು ಕೊಡುವ ಮೂಲಕ ಮೋಸದ ಬಲೆಗೆ ಬೀಳಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಶಿಕ್ಷಕರ ಮಕ್ಕಳೂ ಇಂತಹ ಬಲೆಗೆ ಸಿಲುಕಿದ್ದು, ಹದಿನೈದು ದಿನಗಳಲ್ಲಿ ಇಬ್ಬರು ಶಿಕ್ಷಕರ ಮಕ್ಕಳು ಮೋಸಕ್ಕೆ ಒಳಗಾಗಿದ್ದಾರೆ.

ಒಬ್ಬರು ಶಿಕ್ಷಕರ ಪುತ್ರ ₹28 ಸಾವಿರ ಕಳೆದುಕೊಂಡರೆ, ಇನ್ನೊಬ್ಬರು ಶಿಕ್ಷಕರ ಪುತ್ರ ₹ 2,500 ಕಳೆದುಕೊಂಡಿದ್ದಾರೆ. ಮತ್ತೊಬ್ಬ ಯುವಕನಿಗೆ ಹಣ ಪಾವತಿಸಿ ನೌಕರಿ ಪಡೆದುಕೊಳ್ಳುವಂತೆ ಮೋಸದ ಕಂಪನಿಯ ಮಹಿಳೆಯರು ನಿರಂತರವಾಗಿ ದೂರವಾಣಿ ಕರೆ ಮಾಡುತ್ತಿದ್ದಾರೆ.

ಮೋಸದ ಕಂಪನಿಗಳು ವಿಮಾನ ನಿಲ್ದಾಣಗಳ ಪ್ರಾಧಿಕಾರದ ಹೆಸರಲ್ಲಿ ಆನ್‌ಲೈನ್‌ನಲ್ಲಿ ಜಾಹೀರಾತುಗಳನ್ನು ಪ್ರಕಟಿಸುತ್ತಿವೆ. ಬೀದರ್– ಯಶವಂತಪುರ ರೈಲಿನಲ್ಲೂ ಪಾಂಪ್ಲೆಟ್‌ಗಳನ್ನು ಅಂಟಿಸಿವೆ. ನಿರುದ್ಯೋಗಿ ಯುವಕರು ಅದನ್ನು ನಂಬಿ ಅರ್ಜಿ ಸಲ್ಲಿಸಿ ಮೋಸ ಹೋಗುತ್ತಿದ್ದಾರೆ.

‘ವಿಮಾನ ನಿಲ್ದಾಣಗಳ ಪ್ರಾಧಿಕಾರ ಜಾಹೀರಾತು ನೋಡಿ ನನ್ನ ಮಗ ನವೆಂಬರ್ 18 ರಂದು ಆನ್‌ಲೈನ್‌ ಮೂಲಕ ‘ಚೆಕ್ಕರ್‌’ ಹುದ್ದೆಗೆ ಅರ್ಜಿ ಸಲ್ಲಿಸಿದ್ದ. ಒಂದೇ ವಾರದಲ್ಲಿ ಅಂದರೆ ನವೆಂಬರ್ 25 ರಂದು ನೇಮಕಾತಿ ಆದೇಶ ಪತ್ರ ಬಂದಿತು. ಡಿಸೆಂಬರ್ 5 ರಂದು ಕರ್ತವ್ಯಕ್ಕೆ ಹಾಜರಾಗುವ ಮೊದಲು ಎರಡು ಹಂತದಲ್ಲಿ ₹28 ಸಾವಿರ ಪಾವತಿಸುವಂತೆ ಸೂಚಿಸಿದ್ದರು. ನಾನು ನವೆಂಬರ್ 25 ರಂದು ₹2,500 ಹಾಗೂ 28 ರಂದು ₹25,500 ಪಾವತಿಸಿದ್ದೇನೆ’ ಎಂದು ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ರಾಠೋಡ ತಿಳಿಸಿದರು.

‘ಡಿಸೆಂಬರ್ 4 ರಂದು ಬೆಂಗಳೂರಿಗೆ ಹೋದ ದಿನ ಮತ್ತೆ ಸಮವಸ್ತ್ರ, ಲ್ಯಾಪ್‌ಟಾಪ್‌ ಹಾಗೂ ವಾಕಿಟಾಕಿ ಪೂರೈಸಲು ₹ 32 ಸಾವಿರ ಪಾವತಿಸುವಂತೆ ಸೂಚಿಸಿದಾಗ ನನಗೆ ಸಂಶಯ ಬಂದಿತು. ಬೆಂಗಳೂರಿನಲ್ಲಿರುವ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಕಚೇರಿಗೆ ಹೋಗಿ ಅಲ್ಲಿನ ಅಧಿಕಾರಿಗಳಿಗೆ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಯಿತು’ ಎಂದು ಹೇಳಿದರು.

‘ಜ್ಯೋತಿ (88602 40619), ಶಿವಾನಿ (99119 62456), ರಾಹುಲ್ (99905 13983), ನಿತೀಶ್‌ ಭಾರದ್ವಾಜ್ 99905 13679, ಅಜೀತಕುಮಾರ ಮಿಶ್ರಾ (85889 01643), ಅಜೀತಕುಮಾರ (97737 67681) ಹಾಗೂ ಪ್ರದೀಪ (9718396127) ಎನ್ನುವವರು ಕರೆ ಮಾಡಿ ಹಣ ಬ್ಯಾಂಕ್‌ ಖಾತೆಗೆ ಜಮಾ ಮಾಡುವಂತೆ ಸೂಚಿಸಿದ್ದರು. ಆಸ್ಸಾಂನ ಜೋಹರಾಟ ಕಮಲಬರಿಯ ಯುನೈಟೆಡ್‌ ಬ್ಯಾಂಕ್‌ನ ಪ್ರದೀಪ ಸರ್ಕಾರ ಅವರ ಖಾತೆ ಸಂಖ್ಯೆ A/c 0646010380843 ಗೆ ಹಣ ಜಮಾ ಮಾಡಿದ್ದೇನೆ. ಇದೀಗ ಮೋಸ ಹೋಗಿದ್ದೇನೆ’ ಎಂದು ತಿಳಿಸಿದರು.

ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿರುವ ಇಬ್ಬರು ಯುವಕರು ಮೋಸ ಹೋಗಿದ್ದಾರೆ. ದೀಪಕ ರಾಠೋಡ ₹ 28 ಸಾವಿರ ಹಾಗೂ ಕಮಠಾಣದ ನಿರಂಕಾರ 2,500 ಕಳೆದುಕೊಂಡಿದ್ದಾರೆ. ಆಶೀಶ್‌ ಎನ್ನುವ ವಿದ್ಯಾರ್ಥಿಗೂ ಮೋಸದ ಕಂಪನಿ ಜಾಲ ಬೀಸಿದೆ.

‘ಪ್ರತಿ ತಿಂಗಳು 3,4 ಪ್ರಕರಣಗಳು ದಾಖಲಾಗುತ್ತಿವೆ. ಕೆಲವರು ಹಣದ ಆಸೆಗಾಗಿ ಕೂಡಿಟ್ಟ ಹಣ ಪಾವತಿಸಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ನೌಕರಿ ಹೆಸರಲ್ಲೂ ಮೋಸಗಳು ನಡೆಯುತ್ತಿವೆ. ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಸೂಕ್ತ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT