ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಮುಖ್ಯಮಂತ್ರಿ

ನಾಳೆಯಿಂದ ನಾಗರಿಕ ವಿಮಾನ ಹಾರಾಟ ಆರಂಭ
Last Updated 5 ಫೆಬ್ರುವರಿ 2020, 15:18 IST
ಅಕ್ಷರ ಗಾತ್ರ

ಬೀದರ್: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಫೆಬ್ರುವರಿ 7 ರಂದು ಬೆಳಿಗ್ಗೆಯಿಂದ ಸಂಜೆಯ ವರೆಗೆ ಇಲ್ಲಿ ಬಿಡುವಿಲ್ಲದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಯಡಿಯೂರಪ್ಪ ಅವರು ಬೆಂಗಳೂರಿನಿಂದ ವಿಮಾನದಲ್ಲಿ ಬೀದರ್‌ಗೆ ಬರುವರು. ಬೆಳಿಗ್ಗೆ 11.30ಕ್ಕೆ ಕಮಠಾಣ ರಸ್ತೆಯಲ್ಲಿರುವ ಬೀದರ್‌ ವಿಮಾನ ನಿಲ್ದಾಣ ಉದ್ಘಾಟಿಸುವರು. ಮಧ್ಯಾಹ್ನ 12.15ಕ್ಕೆ ಬೀದರ್‌ ತಾಲ್ಲೂಕಿನ ಕಮಠಾಣ ಸಮೀಪದ ಪಶು, ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಪಶು ಮೇಳದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.


ಮಧ್ಯಾಹ್ನ 2.30ಕ್ಕೆ ಬೀದರ್‌ನ ‘ಪೂಜ್ಯ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರ’ದ ಮರು ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 2.45ಕ್ಕೆ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ಆಯೋಜಿಸಿರುವ ವಚನ ವಿಜಯೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಲೋಹದ ಹಕ್ಕಿಯ ಹಾರಾಟ ನಾಳೆ

ಕಲ್ಯಾಣ ಕರ್ನಾಟಕದ ಎರಡನೆಯ ನಾಗರಿಕ ವಿಮಾನಯಾನ ಸೇವೆಗೆ ಪರಂಪರೆ ನಗರದಲ್ಲಿ ಫೆಬ್ರುವರಿ 7 ರಂದು ಚಾಲನೆ ದೊರೆಯಲಿದೆ.

2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಬೀದರ್‌ ನಾಗರಿಕ ವಿಮಾನ ನಿಲ್ದಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದರು. ನಿಲ್ದಾಣ ನಿರ್ಮಾಣವಾದರೂ ಜಿಎಂಆರ್ ಸಂಸ್ಥೆಯು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದೊಂದಿಗೆ ಮಾಡಿಕೊಂಡಿದ್ದ ಒಪ್ಪಂದವೇ ತೊಡಕಾಗಿದ್ದ ಕಾರಣ ನಿಲ್ದಾಣ ಪಾಳು ಬಿದ್ದಿತ್ತು.

ಮತ್ತೆ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ಮೇಲೆ ವಿಮಾನ ನಿಲ್ದಾಣದ ನವೀಕರಣಕ್ಕೆ ಅನುದಾನ ಒದಗಿಸಿದರು. ಈ ಮೂಲಕ ಜಿಲ್ಲೆಯ ಜನರ ವಿಮಾನಯಾನ ಸೇವೆಯ ಕನಸು ನನಸಾಗಿಸುತ್ತಿದ್ದಾರೆ.
‘ಕೆಎಸ್ಐಡಿಸಿ ನಿರ್ದೇಶನದಲ್ಲಿ ₹ 12.28 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ಬೀದರ್‌ ವಿಮಾನ ನಿಲ್ದಾಣ ಅಭಿವೃದ್ಧಿ ಮಾಡಲಾಗಿದೆ. ಪಾರ್ಕಿಂಗ್‌ ಹಾಗೂ ಇನ್ನಿತರ ಸೌಕರ್ಯಗಳನ್ನು ಒದಗಿಸಲು ₹ 3.39 ಕೋಟಿ ವೆಚ್ಚದಲ್ಲಿ 4.02 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಹಾಗೂ ಸಂಸದ ಭಗವಂತ ಖೂಬಾ ಅವರ ಆಸಕ್ತಿಯ ಫಲವಾಗಿ ಕಲ್ಯಾಣ ಕರ್ನಾಟಕದಲ್ಲಿ ಎರಡನೆಯ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ.

ಮಕ್ಕಳ ಆಸ್ಪತ್ರೆ ಉದ್ಘಾಟನೆ ಮುಂದೂಡಿಕೆ

ಬೀದರ್‌ ನಗರದಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯ ಕಟ್ಟಡ ನಿರ್ಮಾಣಗೊಂಡು ವರ್ಷ ಕಳೆಯುತ್ತ ಬಂದರೂ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡದ ಕಾರಣ ಆಸ್ಪತ್ರೆಯ ಉದ್ಘಾಟನೆಯನ್ನು ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT