ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಬಾಲ್ಯ ವಿವಾಹ ಮಾಡಿದರೆ ಜೈಲು ಶಿಕ್ಷೆ: ಜಿಲ್ಲಾಧಿಕಾರಿ

Published 23 ಮಾರ್ಚ್ 2024, 15:35 IST
Last Updated 23 ಮಾರ್ಚ್ 2024, 15:35 IST
ಅಕ್ಷರ ಗಾತ್ರ

ಬೀದರ್‌: ‘ಬಾಲ್ಯ ವಿವಾಹ ಮಾಡುವುದು ಹಾಗೂ ಅದಕ್ಕೆ ಪ್ರೋತ್ಸಾಹ ನೀಡುವ ವ್ಯಕ್ತಿ ಮತ್ತು ಹುಡುಗಿಯ ಪೋಷಕರಿಗೆ ಮೂರು ತಿಂಗಳು ಜೈಲು ಶಿಕ್ಷೆ, ದಂಡ ವಿಧಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ಜಿಲ್ಲಾ ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗಾಗಿದೆ. ಇದರ ನಿರ್ಮೂಲನೆಗೆ ವಿವಿಧ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು, ಸಾರ್ವಜನಿಕ ಪಾತ್ರ ಬಹಳ ಮುಖ್ಯವಾದುದು’ ಎಂದು ಹೇಳಿದರು.

‘ಬಾಲಕಿಯರ ಬಾಲ ಮಂದಿರ, ಜಿಲ್ಲೆಯಲ್ಲಿ ಇಲ್ಲಿಯವರೆಗೆ ದಾಖಲಾದ ಪೋಕ್ಸೋ ಪ್ರಕರಣಗಳ ಮಾಹಿತಿ, ಮಾತೃವಂದನಾ ಯೋಜನೆ, ಸಖಿ ಒನ್ ಸ್ಟಾಪ್‌, ಸ್ವಧಾರ ಗೃಹ ಸೇರಿದಂತೆ ಇತರೆ ವಿಷಯಗಳ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಅವುಗಳನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕು. ದೇವದಾಸಿ ಮತ್ತು ಎಚ್.ಐ.ವಿ ಪೀಡಿತ ಮಹಿಳೆಯರಿಗೆ ಜಾಗವಿದ್ದರೆ ಅವರಿಗೆ ಮನೆ ಕಟ್ಟಿಸಿಕೊಡಲು ಅವಕಾಶವಿದೆ. ಅಂತಹವರ ಪಟ್ಟಿ ನೀಡಬೇಕು’ ಎಂದು ಸೂಚಿಸಿದರು. 

‘ಬೇಸಿಗೆ ಇರುವುದರಿಂದ ಈಗ ಹೆಚ್ಚಿನ ಮದುವೆ ಹಾಗೂ ಸಾಮೂಹಿಕ ವಿವಾಹಗಳು ನಡೆಯುತ್ತವೆ. ಬೀದರ್‌ ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ನಡೆಯದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಬಾಲ್ಯವಿವಾಹ ನಡೆಯುತ್ತಿದೆ ಎಂಬ ದೂರು ಕಂಡು ಬಂದ ತಕ್ಷಣ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಅದು ನಿಜವಾಗಿದ್ದರೆ ಸಂಬಂಧಿಸಿದವರ ಮೇಲೆ ಪ್ರಕರಣ ದಾಖಲಿಸಬೇಕು. ಮುಂದೆ ಬಾಲ್ಯ ವಿವಾಹಗಳು ನಡೆಯುವುದಿಲ್ಲ. ಎಲ್ಲಾ ಭಾಗಿದಾರ ಇಲಾಖೆಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪಾತ್ರ ಬಹಳ ಮುಖ್ಯವಾಗಿದೆ. ಈ ಕುರಿತು ಹೆಚ್ಚಿನ ನಿಗಾ ವಹಿಸಬೇಕು’ ಎಂದು ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ್ ಮಾತನಾಡಿ, ‘ಬೀದರ್‌ ಜಿಲ್ಲೆಯಲ್ಲಿ 2023ರ ಏಪ್ರಿಲ್‌ನಿಂದ ಫೆಬ್ರುವರಿ 2024ರ ವರೆಗೆ ಒಟ್ಟು 31 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ನಾಲ್ಕು ಬಾಲ್ಯ ವಿವಾಹಗಳು ನಡೆದಿದ್ದು ಅವುಗಳನ್ನು ನಡೆಸಿದವರ ಮೇಲೆ ಎಫ್.ಐ.ಆರ್. ದಾಖಲಿಸಲಾಗಿದೆ. ಸದರಿ ಪಾಲಕರಿಂದ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಅವರಿಗೆ ಬಾಲ್ಯವಿವಾಹದ ಕುರಿತು ಅರಿವು ಮೂಡಿಸಿ, ಸದರಿ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಜಿಯಾ ಬಳಬಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಗುರುರಾಜ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅವಿನಾಶ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸದಾಶಿವ ಬಡಿಗೇರ, ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಬಾಲ್ಯ ವಿವಾಹ ಸಾಮಾಜಿಕ ಪಿಡುಗು ಬಾಲ್ಯ ವಿವಾಹ; ಪೋಷಕರಿಗೆ ಶಿಕ್ಷೆ ಸಾಮೂಹಿಕ ವಿವಾಹಗಳ ಮೇಲೆ ನಿಗಾ ಇಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT