ಸೋಮವಾರ, ಜುಲೈ 4, 2022
24 °C
ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಶಾಸಕ ರಹೀಂಖಾನ್ ಸಲಹೆ

ಮಹಾತ್ಮರ ತತ್ವಾದರ್ಶ ಪಾಲಿಸಿ: ಶಾಸಕ ರಹೀಂಖಾನ್ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಮಹಾತ್ಮರ ಜಯಂತಿಗಳು ಆಚರಣೆಗಷ್ಟೇ ಸೀಮಿತವಾಗಬಾರದು. ಪ್ರತಿಯೊಬ್ಬರೂ ಅವರ ತತ್ವಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು’ ಎಂದು ಶಾಸಕ ರಹೀಂಖಾನ್ ನುಡಿದರು.

ಇಲ್ಲಿಯ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಬಿಗರ ಚೌಡಯ್ಯನವರ ವಚನಗಳನ್ನು ಹಾಗೂ ತತ್ವಗಳ ಅನುಕರಿಸಬೇಕು’ ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಮಾತನಾಡಿ, ‘12ನೇ ಶತಮಾನದ ಬಸವಾದಿ ಶರಣರ ಸಮಕಾಲಿನರಾದ ಅಂಬಿಗರ ಚೌಡಯ್ಯ ಸಮಾಜ ಸುಧಾರಣೆಗಾಗಿ ನೇರ, ನಿಷ್ಠುರತೆಯಿಂದ ಕೂಡಿದ ವಚನಗಳನ್ನು ರಚಿಸಿದ್ದರು’ ಎಂದು ಹೇಳಿದರು.

‘ಚೌಡಯ್ಯ ಶ್ರೇಷ್ಠ ವಚನಕಾರರಲ್ಲಿ ಒಬ್ಬರಾಗಿದ್ದರು. ಅವರ 279 ವಚನಗಳು ಲಭಿಸಿವೆ. ಇಂದಿನ ಮಠ, ಮಂದಿರ ಹಾಗೂ ಮಸೀದಿಗಳು ಸಾರುವ ಸಮಾನತೆಯ ಸಂದೇಶವನ್ನು ಅವರು 12ನೇ ಶತಮಾನದಲ್ಲಿಯೇ ತಮ್ಮ ವಚನಗಳ ಮೂಲಕ ವಿಶ್ವಕ್ಕೆ ಸಾರಿದ್ದರು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಹಳ್ಳಿಖೇಡದ ದತ್ತಾತ್ರೇಯ ಸ್ವಾಮೀಜಿ, ಸಮಾಜದ ಮುಖಂಡ ಜಗನ್ನಾಥ ಜಮಾದಾರ, ಅಂಬಿಗರ ಚೌಡಯ್ಯ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ ಇದ್ದರು.

ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಸ್ವಾಗತಿಸಿದರು. ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಚನ್ನಬಸವ ಹೇಡೆ ನಿರೂಪಿಸಿದರು.

ಅಂಬಿಗರ ಚೌಡಯ್ಯ ಭಾವಚಿತ್ರದ ಮೆರವಣಿಗೆ: ಅಂಬಿಗರ ಚೌಡಯ್ಯ ಜಯಂತಿ ಪ್ರಯುಕ್ತ ನಗರದಲ್ಲಿ ಗುರುವಾರ ಅಂಬಿಗರ ಚೌಡಯ್ಯ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಮೆರವಣಿಗೆಗೆ
ಚಾಲನೆ ನೀಡಿದರು. ಮೆರವಣಿಗೆಯು ಭಗತ್ ಸಿಂಗ್ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಕನ್ನಡಾಂಬೆ ರೋಟರಿ ವೃತ್ತದ ಮಾರ್ಗವಾಗಿ ಜಿಲ್ಲಾ ರಂಗಮಂದಿರವನ್ನು ತಲುಪಿ ಸಮಾರೋಪಗೊಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು