ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಎಂ ಸಭೆ: ಶಾಸಕರ ನಡೆಗೆ ಆಕ್ಷೇಪ

ಸಿಎಂ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ವರ್ಚುವಲ್ ಸಭೆ
Published : 14 ಜುಲೈ 2021, 7:21 IST
ಫಾಲೋ ಮಾಡಿ
Comments

ಬಸವಕಲ್ಯಾಣ: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸೋಮವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಅನುಭವ ಮಂಟಪ ನಿರ್ಮಾಣ ಕುರಿತಾದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ವರ್ಚುವಲ್ ಸಭೆಗೆ ಶಾಸಕ ಶರಣು ಸಲಗರ ಗೈರಾಗಿರುವುದು ಖಂಡನೀಯ’ ಎಂದು ಉಪ ಚುನಾವಣೆಯ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮಾಲಾ ಬಿ.ನಾರಾಯಣರಾವ್ ಅಪಸ್ವರ ಎತ್ತಿದ್ದಾರೆ.

‘ಈ ಕಾರಣ ಬಸವಣ್ಣನವರ ಅನುಯಾಯಿಗಳಿಗೆ ನೋವಾಗಿದೆ. ಮಾಜಿ ಶಾಸಕ ದಿ.ಬಿ.ನಾರಾಯಣರಾವ್ ಅವರು ಅನುಭವ ಮಂಟಪ ನಿರ್ಮಾಣಕ್ಕಾಗಿ ವಿಧಾನಸೌಧದಲ್ಲಿ ಸವಿಸ್ತಾರ ಭಾಷಣ ಮಾಡಿ ಸರ್ಕಾರದ ಮನವೊಲಿಸಿದ್ದರು. ಆದರೆ, ಈಗಿನ ಶಾಸಕರು ಸಭೆಯಲ್ಲಿ ಪಾಲ್ಗೊಂಡು ಅಭಿವೃದ್ಧಿ ಬಗ್ಗೆ ದನಿ ಎತ್ತದಿರುವುದು ವಿಷಾದನೀಯ. ಇನ್ನು ಮುಂದಾದರೂ ಇವರು ಶರಣರ ಸ್ಥಳಗಳ ವಿಕಾಸ ಕಾರ್ಯದ ಬಗ್ಗೆ ನಿರ್ಲಕ್ಷ್ಯ ತಾಳಬಾರದು’ ಎಂದು ಸಲಹೆ ನೀಡಿದ್ದಾರೆ.

ಅನುಪಸ್ಥಿತಿ ಸಲ್ಲದು: ‘ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಐದು ವರ್ಷಗಳ ಬಳಿಕ ಮಂಡಳಿ ಸಭೆ ನಡೆದಿದ್ದು ಶಾಸಕ ಶರಣು ಸಲಗರ ಇಂಥ ಮಹತ್ವದ ಸಭೆಗೆ ಅನುಪಸ್ಥಿತರಾಗಿರುವುದು ಸರಿಯಲ್ಲ’ ಎಂದು ಯುವ ಮುಖಂಡ ಶಿವಕುಮಾರ ಬಿರಾದಾರ ಹೇಳಿದ್ದಾರೆ.

‘ಬಸವಣ್ಣನವರ ಪರುಷಕಟ್ಟೆಯ ಅಭಿವೃದ್ಧಿಗಾಗಿ ಸಂಬಂಧಿತರಿಗೆ ಒತ್ತಾಯಿಸಬೇಕು. ಮಂಡಳಿ ಸದಸ್ಯರ ನ್ನಾಗಿ ಸ್ಥಳೀಯರ ಹಾಗೂ ಬಸವತತ್ವದ ಆಳವಾದ ಜ್ಞಾನ ಇರುವವರ ನೇಮಕ ಆಗುವಂತೆ ಆಗ್ರಹಿಸಬೇಕು’ ಎಂದಿದ್ದಾರೆ.

‘ಅನುಭವ ಮಂಟಪದ ಸಭೆಗೆ ಶಾಸಕ ಸಲಗರ ಗೈರಾಗಿರುವುದು ಸರಿಯಲ್ಲ’ ಎಂದು ಕಾಂಗ್ರೆಸ್ ಮುಖಂಡ ಮನೋಜಕುಮಾರ ಮಾಶೆಟ್ಟೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶಾಸಕ ಶರಣು ಸಲಗರ ಸ್ಪಷ್ಟನೆ

‘ನಾನು ದೆಹಲಿಯಲ್ಲಿ ಬೀದರ್ ಸಂಸದರು ಹಾಗೂ ಸಚಿವರಾದ ಭಗವಂತ ಖೂಬಾ ಅವರ ಜತೆ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡಿದ್ದರೂ ಕೆಲವರು ಬೇಕೆಂತಲೇ ಸುಳ್ಳು ಹೇಳಿ ಅಪಪ್ರಚಾರ ನಡೆಸಿದ್ದಾರೆ’ ಎಂದು ಶಾಸಕ ಶರಣು ಸಲಗರ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಅವರು ಫೇಸ್‌ಬುಕ್ ಲೈವ್ ಮೂಲಕವೂ ಸ್ಪಷ್ಟೀಕರಣ ನೀಡಿದ್ದಾರೆ.

‘ಮಂಡಳಿ ಆಯುಕ್ತ ಶರಣಬಸಪ್ಪ ಕೊಟ್ಟಪ್ಪಗೋಳ ಅವರಿಂದಲೂ ನಾನು ಭಾಗವಹಿಸಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ನಾನು ಹಾಜರಾದ ಕಾರಣವೇ ಸಭೆ ಆರಂಭಕ್ಕೂ ಮೊದಲು ನನ್ನ ಹೆಸರು ಹೇಳಿ ಸ್ವಾಗತ ಕೋರಲಾಗಿದೆ. ನಾನು ಅಪ್ಪಟ ಬಸವಭಕ್ತನಾಗಿದ್ದು, ಅನುಭವ ಮಂಟಪದ ಕಾಮಗಾರಿ ಶೀಘ್ರ ಪೂರ್ಣಗೊಳ್ಳಬೇಕು ಎಂಬ ಬಯಕೆ ಹೊಂದಿದ್ದೇನೆ. ಅದಕ್ಕಾಗಿ ನಿರಂತರವಾಗಿ ಪ್ರಯತ್ನಿಸುತ್ತೇನೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT