ಶನಿವಾರ, ಡಿಸೆಂಬರ್ 5, 2020
25 °C
ಬೀದರ್‌, ಔರಾದ್, ಭಾಲ್ಕಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿದ ಚಳಿ

ಬೀದರ್: ದೀಪಾವಳಿ ಮುಗಿಯುವವರೆಗೂ ಮೈಕೊರೆಯುವ ಚಳಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಹಿಂದಿನ ವಾರದ ವರೆಗೂ ಜಿಲ್ಲೆಯಲ್ಲಿ ಮಳೆಗಾಲದ ವಾತಾವರಣವೇ ಇತ್ತು. ಮಧ್ಯಾಹ್ನ ಮಾತ್ರ ಬೇಸಿಗೆಯ ಅನುಭವವಾಗುತ್ತಿತ್ತು. ಇದ್ದಕ್ಕಿದ್ದಂತೆಯೇ ನಾಲ್ಕು ದಿನಗಳಿಂದ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾಗಿದೆ. ಸಂಜೆಯಾಗುತ್ತಲೇ ಚಳಿ ಆವರಿಸಿಕೊಳ್ಳುತ್ತಿದೆ. ರಾತ್ರಿ ಹಾಗೂ ಬೆಳಗಿನ ಜಾವ ಮನೆಗಳಿಂದ ಹೊರಗೆ ಬರದಷ್ಟು ಚಳಿ ಮೈಕೊರೆಯುತ್ತಿದೆ.

ಬೀದರ್‌ ತಾಲ್ಲೂಕಿನ ಜನವಾಡ, ಮನ್ನಳ್ಳಿ ಹಾಗೂ ಔರಾದ್ ತಾಲ್ಲೂಕಿನ ಸಂತಪುರ ಹೋಬಳಿಯಲ್ಲಿ ಮಂಗಳವಾರ ಕನಿಷ್ಠ ತಾಪಮಾನ 7.6 ರಿಂದ 10 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಬೀದರ್‌, ಔರಾದ್, ಭಾಲ್ಕಿ ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಚಳಿ ಆವರಿಸಿದೆ. ಜಿಲ್ಲೆಯಲ್ಲಿ ಸರಾಸರಿ 12 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ಮುಂದುವರಿದಿದೆ.

ಕಳೆದ ವರ್ಷ ನವೆಂಬರ್‌ ಮೊದಲ ವಾರದಲ್ಲೇ ಮೈಕೊರೆಯುವ ಚಳಿ ಆರಂಭವಾಗಿತ್ತು. ಈ ಬಾರಿ ಎರಡನೇ ವಾರದಿಂದ ಚಳಿ ಶುರುವಾಗಿದೆ. ಕನಿಷ್ಠ ತಾಪಮಾನ 7 ರಿಂದ 12 ಡಿಗ್ರಿ ಸೆಲ್ಸಿಯಸ್‌ ಇದೆ. ನದಿ ದಂಡೆ ಗ್ರಾಮಗಳು ಹಾಗೂ ಕಬ್ಬಿನ ತೋಟ ಇರುವ ಪ್ರದೇಶಗಳಲ್ಲಿ ಚಳಿ ಒಂದಂಕಿ ಡಿಗ್ರಿ ಸೆಲ್ಸಿಯಸ್‌ ಸುತ್ತ ಸುಳಿದಾಡುತ್ತಿದೆ.

1901ರ ಜನವರಿ 5ರಂದು ಬೀದರ್ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಕನಿಷ್ಠ 2.9 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. 2015ರ ಜನವರಿ 10 ರಂದು 5.8 ಡಿಗ್ರಿ ಸೆಲ್ಸಿಯಸ್‌, 2017ರ ನವೆಂಬರ್‌ 13 ರಂದು ಭಾಲ್ಕಿ ತಾಲ್ಲೂಕಿನ ಹಲಬರ್ಗಾದಲ್ಲಿ ಕನಿಷ್ಠ ಉಷ್ಣಾಂಶ 7.2 ಡಿಗ್ರಿ ಸೆಲ್ಸಿಯಸ್‌, 2018ರ ಡಿಸೆಂಬರ್ 31 ರಂದು ಬೀದರ್‌ ತಾಲ್ಲೂಕಿನ ಮನ್ನಳ್ಳಿಯಲ್ಲಿ 4 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.

ಬೀದರ್‌ನ ಹೂಗೇರಿಯಲ್ಲಿ 2019ರ ಜನವರಿ 1ರಂದು 6 ಡಿಗ್ರಿ ಸೆಲ್ಸಿಯಸ್‌ ಹಾಗೂ ಜ. 2 ರಂದು 7.2 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿರುವುದನ್ನು ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಭಾಗ ಖಚಿತಪಡಿಸಿದೆ.

‘ದೀಪಾವಳಿ ಮುಗಿಯುವ ವರೆಗೂ ಮೈಕೊರೆಯುವ ಚಳಿ ಮುಂದುವರಿಯಲಿದೆ. ಕನಿಷ್ಠ ಉಷ್ಣಾಂಶ 10 ರಿಂದ 12 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ಇರಲಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಈ ವರ್ಷ ಚೆನ್ನಾಗಿ ಮಳೆಯಾಗಿದೆ. ಜಲಾಶಯ, ಬ್ಯಾರೇಜ್‌ಗಳು ಭರ್ತಿಯಾಗಿವೆ. ಕೆರೆ ಕಟ್ಟೆಗಳು ತುಂಬಿವೆ. ನದಿ ದಂಡೆ, ಕುರುಚಲು ಕಾಡು ಹಾಗೂ ಕಬ್ಬಿನ ಗದ್ದೆಗಲ್ಲಿ ಈಗಲೂ ಅಲ್ಪ ಪ್ರಮಾಣದಲ್ಲಿ ನೀರಿದೆ. ನಗರ ಪ್ರದೇಶದಲ್ಲಿ ಕನಿಷ್ಠ 10, 12 ಡಿಗ್ರಿ ಸೆಲ್ಸಿಯಸ್‌ ಹಾಗೂ ಹಳ್ಳಿಗಳಲ್ಲಿ ಒಂದಂಕಿ ಡಿಗ್ರಿ ಸೆಲ್ಸಿಯಸ್ ಸುತ್ತಮುತ್ತ ಚಳಿ ಆವರಿಸಿಕೊಳ್ಳುತ್ತಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಭಾಗದ ತಾಂತ್ರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಚಳಿಯ ಜತೆಗೆ ಮೋಡ ಕವಿದ ವಾತಾವರಣ ಇರುವ ಕಾರಣ ಬೆಳೆಗಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ಬೆಳೆಗಳ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಇದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ನದಿ ದಂಡೆ ಗ್ರಾಮಗಳಲ್ಲಿ ಮೈ ಕೊರೆಯುವ ಚಳಿ ಇದೆ. ಬೆಳಿಗ್ಗೆ ಬೇಗ ಏಳಲೂ ಬಿಡದಷ್ಟು ಶೀತ ಆವರಿಸಿಕೊಳ್ಳುತ್ತಿದೆ. ಕೋವಿಡ್‌ನಿಂದಾಗಿ ಶಾಲಾ ಕಾಲೇಜುಗಳಿಗೆ ರಜೆ ಇರುವ ಕಾರಣ ವಿದ್ಯಾರ್ಥಿಗಳು ಮನೆಗಳಲ್ಲೇ ಇದ್ದಾರೆ. ನೌಕರಸ್ಥರು ಸ್ವೇಟರ್‌, ಕೈಗವಸು ಹಾಗೂ ತಲೆಗೆ ಟೊಪ್ಪಿಗೆ ಹಾಕಿಕೊಂಡು ಮನೆಗಳಿಂದ ಹೊರಗೆ ಬರುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಜನರು ಬೆಳಿಗ್ಗೆ ಚಹಾ ಅಂಗಡಿಗಳ ಮುಂದೆ ಕಸಕ್ಕೆ ಬೆಂಕಿ ಹಚ್ಚಿ ಮೈಕಾಯಿಸಿಕೊಳ್ಳುತ್ತಿದ್ದಾರೆ.

ಎರಡು ಮೂರು ದಿನಗಳಿಂದ ಚಳಿ ಇರುವ ಕಾರಣ ಜನ ಮಾರುಕಟ್ಟೆಗೆ ಬಂದು ಸ್ವೆಟ್ಟರ್‌, ಜರ್ಕಿನ್‌, ಮಫ್ಲರ್‌ ಹಾಗೂ ಟೊಪ್ಪಿಗೆಗಳನ್ನು ಖರೀದಿಸುತ್ತಿದ್ದಾರೆ. ವ್ಯಾಪಾರಿಗಳು ರಸ್ತೆ ಬದಿಗೆ ಕುಳಿತು ಜರ್ಕಿನ್‌ ಮಾರಾಟ ಮಾಡಲು ಶುರು ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು