ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ–ಡಿಕೆಶಿ ಜಗಳದಿಂದ ಕಾಂಗ್ರೆಸ್ ದೂಳಿಪಟ: ನಳಿನ್‌ಕುಮಾರ ಕಟೀಲ್

Last Updated 8 ಮಾರ್ಚ್ 2021, 5:23 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯೆ ಒಳಜಗಳ ಆರಂಭವಾಗಿದ್ದರಿಂದ ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ದೂಳಿಪಟ ಆಗಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ ಕಟೀಲ್ ವಾಗ್ದಾಳಿ ನಡೆಸಿದರು.

ನಗರದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಇದು ಪರಿವರ್ತನೆ ಯುಗವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯಕ್ಕೆ ಮೆಚ್ಚಿ ಅನೇಕರು ಬಿಜೆಪಿ ಸೇರ್ಪಡೆ ಆಗುತ್ತಿದ್ದಾರೆ. ಕೆಲ ಶಾಸಕರು ಕೂಡ ಬರುತ್ತೇವೆ ಎನ್ನುತ್ತಿದ್ದಾರೆ. ಕಾಂಗ್ರೆಸ್ ಬರೀ ಗಾಂಧಿ ಹಾಗೂ ಸ್ವಾತಂತ್ರ್ಯ ಚಳವಳಿ ಹೆಸರಲ್ಲಿ ಮತ ಕೇಳುತ್ತಿತ್ತು. ಆದರೆ, ಬಿಜೆಪಿ ಗಾಂಧಿ ಕನಸಿನ ಗ್ರಾಮ ಸ್ವರಾಜ್ಯ ಜಾರಿಗೆ ಪ್ರಯತ್ನಿಸುತ್ತಿರುವ ಕಾರಣ ಜನರ ಮನಸ್ಸು ಗೆದ್ದಿದೆ’ ಎಂದರು.

‘ತಾಲ್ಲೂಕಿನ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲಾಗುವುದು. ಗೋರಟಾ(ಬಿ) ಸ್ಮಾರಕದ ಕಾಮಗಾರಿ ಕೆಲ ತಿಂಗಳಲ್ಲಿ ಪೂರ್ಣಗೊಳಿಸಲಾಗುತ್ತದೆ. ಹುಲಸೂರ ಹೊಸ ತಾಲ್ಲೂಕಿಗೆ ಕೆಲ ಗ್ರಾಮಗಳ ಸೇರ್ಪಡೆಗೆ ಪ್ರಯತ್ನಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ‘ಅನುಭವ ಮಂಟಪದ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಯೇ ಶಂಕುಸ್ಥಾಪನೆ ನೆರವೇರಿಸಲಾಗಿದೆ. ₹600 ಕೋಟಿ ಮಂಜೂರು ಮಾಡಲಾಗಿದ್ದು, ₹100 ಕೋಟಿ ಬಿಡುಗಡೆ ಆಗಿದೆ. ಕೆಲಸ ಶೀಘ್ರ ಆರಂಭ ಆಗಲಿದೆ. ಮರಾಠಾ ಸಮುದಾಯದ ಅಭಿವೃದ್ಧಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದ್ದು, ಅದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರು. ಆದರೆ, ಮರಾಠಿಗರು ಹಾಗೂ ಶಿವಾಜಿ ಮಹಾರಾಜ ಕನ್ನಡಿಗರೇ ಎನ್ನುವುದನ್ನು ತಿಳಿದುಕೊಳ್ಳಬೇಕು. ಮರಾಠಾ ಸಮಾಜಕ್ಕೂ ಮಹಾರಾಷ್ಟ್ರ ಏಕೀಕರಣ ಸಮಿತಿಗೂ ಸಂಬಂಧವಿಲ್ಲ’ ಎಂದರು.

ಸಚಿವ ವಿ.ಸೋಮಣ್ಣ ಮಾತನಾಡಿ, ‘ಈ ತಾಲ್ಲೂಕಿಗೆ 7,000 ಮನೆಗಳನ್ನು ಮಂಜೂರು ಮಾಡಲಾಗಿದ್ದು, 20 ತಿಂಗಳಲ್ಲಿ ಇದನ್ನು ಗುಡಿಸಲುರಹಿತ ತಾಲ್ಲೂಕನ್ನಾಗಿ ಪರಿವರ್ತಿಸಲಾಗುವುದು. ಉಪ ಚುನಾವಣೆ ಇಲ್ಲಿನ ಸರ್ವಾಂಗೀಣ ಅಭಿವೃದ್ಧಿಗಾಗಿಯೇ ಬಂದಿದೆಯೇನೋ ಅನ್ನಿಸುತ್ತಿದೆ’ ಎಂದು ಹೇಳಿದರು.

ಸಂಸದ ಭಗವಂತ ಖೂಬಾ ಮಾತನಾಡಿ, ‘ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅನುಭವ ಮಂಟಪಕ್ಕೆ ಭೂಸ್ವಾಧಿನ ಆಗಿಲ್ಲ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ 25,000 ಮತಗಳ ಅಂತರದಿಂದ ಪಕ್ಷದ ಅಭ್ಯರ್ಥಿ ಗೆಲ್ಲಲ್ಲಿದ್ದಾರೆ’ ಎಂದರು.

ಸಚಿವ ಪ್ರಭು ಚವಾಣ್, ಚುನಾವಣಾ ಉಸ್ತುವಾರಿಗಳಾದ ಈಶ್ವರಸಿಂಗ್ ಠಾಕೂರ, ನಗರ ಘಟಕದ ಅಧ್ಯಕ್ಷ ಕೃಷ್ಣಾ ಗೋಣೆ, ಮಲ್ಲಿಕಾರ್ಜುನ ಕುಂಬಾರ ಮಾತನಾಡಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ತಾಲ್ಲೂಕು ಅಧ್ಯಕ್ಷ ಅಶೋಕ ವಕಾರೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ್, ರಾಜಕುಮಾರ ಪಾಟೀಲ ತೇಲ್ಕೂರ್‌, ಬಸವರಾಜ ಮತ್ತಿಮೂಡ, ರಘುನಾಥ ಮಲ್ಕಾಪುರೆ, ಶಶೀಲ್ ನಮೋಶಿ, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಬಾಬುರಾವ್ ಚಿಂಚನಸೂರ, ಅಮರನಾಥ ಪಾಟೀಲ ಇದ್ದರು.

ನಳಿನ್‌ಕುಮಾರ ಕಟೀಲ್‌ಗೆ ಬೆಳ್ಳಿ ಖಡ್ಗ ನೀಡಿ ಸನ್ಮಾನ

ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹಾಗೂ ತಾಲ್ಲೂಕು ಕೋಲಿ ಸಮಾಜ ಸಂಘದ ಪ್ರಮುಖರು ನಳಿನ್‌ಕುಮಾರ ಕಟೀಲ್ ಅವರಿಗೆ ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಿದರು.

ಉಪ ಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹಾಗೂ ಇತರೆ 17 ಜನರು ವೇದಿಕೆಯ ಎದುರಲ್ಲಿ ಕುಳಿತಿದ್ದರು. ಸಂಸದ ಭಗವಂತ ಖೂಬಾ ಅವರು ಅವರೆಲ್ಲರನ್ನೂ ವೇದಿಕೆಗೆ ಬರುವಂತೆ ಕೇಳಿಕೊಂಡರಾದರೂ ಬರಲಿಲ್ಲ. ಆದರೆ, ಲಕ್ಷ್ಮಣ ಸವದಿ ಕರೆದಾಗ ಒತ್ತಾಯಕ್ಕೆ ಮಣಿದು ಎಲ್ಲರೂ ವೇದಿಕೆ ಮೇಲೆ ನಿಂತು ಕೈಬೀಸಿ ಒಗ್ಗಟ್ಟು ಪ್ರದರ್ಶಿಸಿದರು.

ಸಮಾವೇಶದ ಮೊದಲು ನಳಿನ್‌ಕುಮಾರ ಕಟೀಲ್ ಹಾಗೂ ಇತರೆ ಗಣ್ಯರನ್ನು ತ್ರಿಪುರಾಂತದಿಂದ ಕೋಟೆಯವರೆಗೆ ಹಾಗೂ ಅಲ್ಲಿಂದ ಕಾರ್ಯಕ್ರಮದ ವೇದಿಕೆಯ ವರೆಗೆ ಮೆರವಣಿಗೆಯ ಮೂಲಕ ಕರೆತರಲಾಯಿತು.

ಲಂಬಾಣಿ ನೃತ್ಯ ತಂಡ, ಡೊಳ್ಳುಕುಣಿತ, ಬ್ಯಾಂಡಬಾಜಾ ತಂಡಗಳು ಪಾಲ್ಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT