ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆ: ಏರಿದ ಬದನೆಕಾಯಿ, ಇಳಿದ ನುಗ್ಗೆಕಾಯಿ

ತರಕಾರಿ ಮಾರುಕಟ್ಟೆಯಲ್ಲಿ ಕೊತಂಬರಿ ಘಮ ಘಮ
Last Updated 31 ಜುಲೈ 2021, 12:56 IST
ಅಕ್ಷರ ಗಾತ್ರ

ಬೀದರ್: ಉತ್ತರ ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲಿನ ತರಕಾರಿ ಬೆಳೆಯುವ ಬಹುತೇಕ ಜಿಲ್ಲೆಗಳಲ್ಲಿ ಅತಿವೃಷ್ಟಿಯಾಗಿದೆ. ಹೊಲಗಳಲ್ಲಿ ನೀರು ನಿಂತಿರುವ ಕಾರಣ ತರಕಾರಿ ಕೊಳೆಯಲು ಆರಂಭಿಸಿ ಕೆಲ ತರಕಾರಿ ಬೆಲೆ ದಿಢೀರ್‌ ಕುಸಿದರೆ, ಇನ್ನೂ ಕೆಲ ತರಕಾರಿ ಬೆಲೆ ಗ್ರಾಹಕರು ಹುಬ್ಬೇರಿಸುವಂತೆ ಹೆಚ್ಚಾಗಿದೆ.

ಮಾರುಕಟ್ಟೆಯಲ್ಲಿ ತರಕಾರಿ ರಾಜ ಬದನೆಕಾಯಿ ಘನತೆ ಹೆಚ್ಚಿಸಿಕೊಂಡಿದೆ. ಹೂಕೋಸು ಅರಳಿ ನಿಂತಿದೆ. ಕೊತಂಬರಿ ಮಾರುಕಟ್ಟೆ ತುಂಬ ಘಮ ಘಮಿಸುತ್ತಿದೆ. ಹೂಕೋಸು ಬೆಲೆ ಪ್ರತಿಕ್ವಿಂಟಲ್‌ಗೆ ₹ 2 ಸಾವಿರ, ಎಲೆಕೋಸು, ಗಜ್ಜರಿ, ಬದನೆಕಾಯಿ, ಬೆಂಡೆಕಾಯಿ, ಪಾಲಕ್‌ ₹ 1,500 ಬೆಲೆ, ಕರಿಬೇವು ₹ 1 ಸಾವಿರ, ತೊಂಡೆಕಾಯಿ ₹ 500 ಹೆಚ್ಚಾಗಿದೆ. ಕೊತಂಬರಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 3 ಸಾವಿರದಿಂದ ₹ 7 ಸಾವಿರಕ್ಕೆ ಏರಿದೆ.

ಬೀನ್ಸ್‌ ₹ 6 ಸಾವಿರ, ಮೆಣಸಿನಕಾಯಿ ₹ 3,500, ಆಲೂಗಡ್ಡೆ ₹ 2,500, ಬೆಳ್ಳುಳ್ಳಿ ₹ 2 ಸಾವಿರ, ಈರುಳ್ಳಿ ಹಾಗೂ ಮೆಂತೆ ಸೊಪ್ಪು ₹ 500 ಕಡಿಮೆಯಾಗಿದೆ. ನುಗ್ಗೆಕಾಯಿ ₹ 5 ಸಾವಿರಕ್ಕೆ ಕುಸಿದಿದೆ. ಹಿರೇಕಾಯಿ ಮಾರುಕಟ್ಟೆಯಲ್ಲಿ ನಮಗೇಕೆ ಊರು ಉಸಾಬರಿ ಎಂದು ಮೆತ್ತಗಾಗಿದೆ. ಹಿರೇಕಾಯಿ, ಬೀಟ್‌ರೂಟ್‌, ಟೊಮೆಟೊ ಹಾಗೂ ಸಬ್ಬಸಗಿ ಬೆಲೆ ಸ್ಥಿರವಾಗಿದೆ.

ಬೆಳಗಾವಿ ಹಾಗೂ ಬಾಗಲಕೋಟೆಯಿಂದ ಹಸಿ ಮೆಣಸಿನಕಾಯಿ ಬೀದರ್‌ ಮಾರುಕಟ್ಟೆಗೆ ಬಂದಿದೆ. ಕೃಷ್ಣ, ಘಟಪ್ರಭಾ ನದಿಗಳಿಗೆ ಮಹಾಪೂರ ಬಂದಿರುವ ಕಾರಣ ತರಕಾರಿ ಬೆಳೆಗಳು ನೀರಿನಲ್ಲಿ ಮುಳುಗಿವೆ. ಕೊಳೆತು ಹೋದರೆ ಇನ್ನೂ ಕಷ್ಟ ಎಂದು ರೈತರು ಮೆಣಸಿನಕಾಯಿ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಿದ್ದಾರೆ. ಒಂದೇ ಬಾರಿಗೆ ಹೆಚ್ಚು ಆವಕವಾದ ಕಾರಣ ಬೆಲೆ ಕುಸಿದಿದೆ. ಹೀಗಾಗಿ ಕಳೆದ ವಾರಕ್ಕಿಂತ ಈ ವಾರ ಖಾರ ಕಡಿಮೆಯಾಗಿದೆ.

ಮಳೆ ಇರುವ ಕಾರಣ ಈರುಳ್ಳಿ ಬೆಲೆ ಹೆಚ್ಚಳವಾಗಲಿದೆ ಎಂದು ಗ್ರಾಹಕರು ಭಾವಿಸಿದ್ದರು. ಗ್ರಾಹಕರ ಲೆಕ್ಕಾಚಾರ ಬುಡ ಮೇಲಾಗಿ ಈರುಳ್ಳಿ ಬೆಲೆ ಇಳಿದಿದೆ. ಮಹಾರಾಷ್ಟ್ರದ ಸೋಲಾಪುರದಿಂದ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ.

ತೆಲಂಗಾಣದ ವಿವಿಧ ಜಿಲ್ಲೆಗಳಿಂದ ಹೈದರಾಬಾದ್‌ಗೆ ಬಂದ ಹಿರೇಕಾಯಿ, ತೊಂಡೆಕಾಯಿ, ಬೀಟ್‌ರೂಟ್‌ ಹಾಗೂ ನುಗ್ಗೆಕಾಯಿ ಇದೀಗ ಬೀದರ್‌ ತರಕಾರಿ ಮಾರುಕಟ್ಟೆ ಸೇರಿದೆ.

ಎಲ್ಲೆಡೆ ಮಳೆ ಆವಾಂತರ ಸೃಷ್ಟಿಸಿರುವ ಕಾರಣ ತರಕಾರಿ ಬೆಲೆಯಲ್ಲೂ ಏರುಪೇರಾಗಿದೆ. ಬೆಲೆ ಹೆಚ್ಚಳದಿಂದಾಗಿ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಗ್ರಾಹಕರು ಹೆಚ್ಚು ಅವಧಿಗೆ ಉಳಿಯುವ ತರಕಾರಿಯನ್ನು ಮಾತ್ರ ಖರೀದಿಸುತ್ತಿದ್ದಾರೆ ಎಂದು ತರಕಾರಿ ಸಗಟು ವ್ಯಾಪಾರಿ ವಿಜಯಕುಮಾರ ಹೇಳುತ್ತಾರೆ.

* * * *
ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
........................................................................
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ
........................................................................
ಈರುಳ್ಳಿ 20-25, 25-30
ಮೆಣಸಿನಕಾಯಿ 60-65, 25-30
ಆಲೂಗಡ್ಡೆ 40-45, 20-25
ಎಲೆಕೋಸು 15-20, 30-35
ಬೆಳ್ಳುಳ್ಳಿ 100-110, 80-90
ಗಜ್ಜರಿ 40-45, 50-60
ಬೀನ್ಸ್‌ 180-200, 70-80
ಬದನೆಕಾಯಿ 40-45, 50-60
ಮೆಂತೆ ಸೊಪ್ಪು 80-85, 60-80
ಹೂಕೋಸು 30-40, 50-60
ಸಬ್ಬಸಗಿ 40-50, 40-50
ಬೀಟ್‌ರೂಟ್‌ 40-50,40-50
ತೊಂಡೆಕಾಯಿ 30-35, 30-40
ಕರಿಬೇವು 20-30, 30-40
ಕೊತಂಬರಿ 20-30, 80-100
ಟೊಮೆಟೊ 25-30, 20-30
ಪಾಲಕ್‌ 40-45, 50-60
ಬೆಂಡೆಕಾಯಿ 40-45, 50-60
ಹಿರೇಕಾಯಿ 45-50, 40-50
ನುಗ್ಗೆಕಾಯಿ 80-100, 40-50

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT