ಬೀದರ್: ಶತಮಾನೋತ್ಸವ ಸಂಭ್ರಮದಲ್ಲಿರುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಡಿಜಿಟಲ್ ರೂಪದ ಮಾರ್ಟಿಗೇಜ್ ಸಾಲದ ಮಿತಿಯನ್ನು ರೂ. 1 ಲಕ್ಷದಿಂದ ₹ 3 ಲಕ್ಷಕ್ಕೆ ಹೆಚ್ಚಿಸಿದೆ.
ಸಾಲದ ಮಿತಿ ಹೆಚ್ಚಳ ಏಪ್ರಿಲ್ 1 ರಿಂದಲೇ ಜಾರಿಗೆ ಬರಲಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಇ ಆಡಳಿತ ಇಲಾಖೆಯು ಜಾರಿಗೆ ತಂದಿರುವ ಡಿಜಿಟಲ್ ರೂಪದ ಮಾರ್ಟಿಗೇಜ್ (ಭೂಮಿ ಮೇಲೆ ಋಣಭಾರ) ಸಾಲ ಜಿಲ್ಲೆಯ ರೈತರಿಗೆ ಸಹಕಾರಿಯಾಗಿದೆ. ಸದ್ಯ ₹ 1 ಲಕ್ಷದ ವರೆಗಿನ ಮಾರ್ಟಿಗೇಜ್ ಸಾಲ ಸಂಘಗಳಲ್ಲಿಯೇ ಲಭ್ಯ ಇದೆ. ಅದಕ್ಕಿಂತ ಹೆಚ್ಚಿನ ಸಾಲಕ್ಕಾಗಿ ಉಪ ನೋಂದಣಾಧಿಕಾರಿ ಕಚೇರಿಗೆ ಹೋಗಬೇಕಿದೆ. ಹೀಗಾಗಿ ರೈತರ ಅಲೆದಾಟ ತಪ್ಪಿಸಲು ಸಾಲದ ಮಿತಿ ₹ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.
ಸಾಲದ ಮಿತಿ ಏರಿಕೆಯಿಂದ ರೈತ ಕುಟುಂಬಗಳಿಗೆ ಆದಾಯೋತ್ಪನ್ನ ಚಟುವಟಿಕೆ, ಶಿಕ್ಷಣ, ಆರೋಗ್ಯ, ಜೀವನ ಸಮೃದ್ಧಿಗೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.
ಬರುವ ದಿನಗಳಲ್ಲಿ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಕೇಂದ್ರ ಸರ್ಕಾರದ ಪ್ಯಾಕ್ಸ್ ಗಣಕೀಕರಣ ಯೋಜನೆಯಡಿ ಗಣಕೀಕರಣ ಮಾಡಲಾಗುವುದು. ಸರ್ಕಾರದ ನಿರ್ದೇಶನದಂತೆ ಪಿಕೆಪಿಎಸ್‍ಗಳನ್ನು ಕಾಮನ್ ಸರ್ವಿಸ್ ಸೆಂಟರ್‍ಗಳಾಗಿ ಪರಿವರ್ತಿಸಲಾಗುವುದು. ಸಹಕಾರ ಸಂಘಗಳ ಮೂಲಕ ಆಯಾ ಗ್ರಾಮಗಳಲ್ಲಿ ಸರ್ಕಾರದ ಸುಮಾರು 300 ಸೇವೆಗಳನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯಲು ಶ್ರಮಿಸಲಾಗುವುದು ಎಂದು ಹೇಳಿದ್ದಾರೆ.
ಬ್ಯಾಂಕ್ 188 ಪ್ಯಾಕ್ಸ್‍ಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಯೋಜನೆಗಳನ್ನು ಈಗಾಗಲೇ ರೈತರ ಮನೆಗೆ ಬಾಗಿಲಿಗೆ ತಲುಪಿಸುತ್ತಿದೆ.
ಜಿಲ್ಲೆಯ 2,15000 ಕೃಷಿ ಅವಲಂಬಿತ ಕುಟುಂಬಗಳ ಪೈಕಿ 1,75,000 ರೈತರು ಪಿಕೆಪಿಎಸ್‍ಗಳಲ್ಲಿ ಸುಮಾರು ₹ 1,000 ಕೋಟಿ ಸಾಲ ಪಡೆದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.