ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ನೂತನ ಮಾರುಕಟ್ಟೆ ಸ್ಥಾಪನೆಗೆ ಆಗ್ರಹ

Published 8 ಫೆಬ್ರುವರಿ 2024, 15:43 IST
Last Updated 8 ಫೆಬ್ರುವರಿ 2024, 15:43 IST
ಅಕ್ಷರ ಗಾತ್ರ

ಬೀದರ್‌: ನಗರದಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ನೂತನ ಮಾರುಕಟ್ಟೆ ಸ್ಥಾಪಿಸಬೇಕು ಎಂದು ಗಾಂಧಿಗಂಜ್‍ ‘ದಿ ಗ್ರೇನ್ ಅಂಡ್‌ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್’ ಆಗ್ರಹಿಸಿದೆ.

ಅಸೋಸಿಯೇಷನ್ ಪದಾಧಿಕಾರಿಗಳು ನಗರದಲ್ಲಿ ಬುಧವಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಪರಮೇಶ್ವರಿ ಫುಲೇಕರ್ ಅವರನ್ನು ಭೇಟಿ ಮಾಡಿ, ಈ ಕುರಿತು ಕೃಷಿ ಮಾರಾಟ ಇಲಾಖೆ ನಿರ್ದೇಶಕರಿಗೆ ಬರೆದ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

60 ವರ್ಷಗಳ ಹಿಂದೆ 30 ಎಕರೆಯಲ್ಲಿ ಸ್ಥಾಪಿಸಿದ ಈಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಬಹಳ ಕಿರಿದಾಗಿದೆ. ವ್ಯಾಪಾರ, ವಹಿವಾಟಿಗೆ ತೀವ್ರ ತೊಂದರೆಯಾಗುತ್ತಿದೆ. ವಾಹನಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಗಮನ ಸೆಳೆದರು.

ಬೀದರ್ ಮಾರುಕಟ್ಟೆ ಉತ್ತರ ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಜಿಲ್ಲೆ ಸೇರಿದಂತೆ ನೆರೆಯ ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳ ರೈತರು ಕೂಡ ತಮ್ಮ ಉತ್ಪನ್ನಗಳನ್ನು ಮಾರಾಟಕ್ಕಾಗಿ ಇಲ್ಲಿಗೆ ತರುತ್ತಾರೆ. ಎಲ್ಲ ಬಗೆಯ ದ್ವಿದಳ ಧಾನ್ಯ, ಎಣ್ಣೆ ಬೀಜ, ಬೆಲ್ಲ, ಮಸಾಲೆ ಪದಾರ್ಥ ಪ್ರಮುಖವಾಗಿ ಆವಕ ಆಗುತ್ತವೆ. ಸುಗ್ಗಿಯಲ್ಲಿ ಪ್ರತಿ ದಿನ 20 ರಿಂದ 30 ಸಾವಿರ ಕ್ವಿಂಟಲ್‍ವರೆಗೂ ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತವೆ ಎಂದು ಹೇಳಿದರು.

ದಲ್ಲಾಳಿಗಳು, ವರ್ತಕರು, ದಾಲ್‍ಮಿಲ್, ಆಯಿಲ್ ಮಿಲ್ ವ್ಯಾಪಾರಿಗಳು ಸೇರಿದಂತೆ ವ್ಯಾಪಾರಿಗಳ ಸಂಖ್ಯೆಯೂ ಹೆಚ್ಚಾಗಿದೆ. ಅಂಗಡಿಗಳ ಕೊರತೆ ಹಿನ್ನೆಲೆಯಲ್ಲಿ ಮಾರುಕಟ್ಟೆಯ ಖಾಲಿ ಇದ್ದ ಎಲ್ಲ ಜಾಗಗಳಲ್ಲಿ ನಿವೇಶನ ಸೃಷ್ಟಿಸಿ, ಅಂಗಡಿಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಸುಗ್ಗಿಯ ವೇಳೆ ವಾಹನ ಸಂಚಾರ ಸಾಧ್ಯವಾಗುವುದೇ ಇಲ್ಲ.
ಕಾಲ್ನಡಿಗೆಯೂ ಕಷ್ಟಸಾಧ್ಯವಾಗುತ್ತದೆ. ಮುಂದಿನ ನೂರು ವರ್ಷ ಉಪಯೋಗಕ್ಕೆ ಬರುವಂತಹ ಹೊಸ ಮಾರುಕಟ್ಟೆ ನಿರ್ಮಾಣ ಅನಿವಾರ್ಯವಾಗಿದೆ. ನೂತನ ಮಾರುಕಟ್ಟೆ ನಿರ್ಮಿಸುವವರೆಗೆ ಕಳ್ಳತನಗಳು ಆಗುತ್ತಿರುವ ಕಾರಣ ಈಗಿನ ಮಾರುಕಟ್ಟೆಯಲ್ಲಿ ಸಿಸಿಟಿವಿ ಕ್ಯಾಮೆರಾ, ಮೇಲ್ಛಾವಣಿಯಲ್ಲಿ ಸೀಲಿಂಗ್ ದೀಪ, ಮಾರುಕಟ್ಟೆಯ ಎಲ್ಲ ರಸ್ತೆಗಳಲ್ಲಿ ಗೇಟ್ ಅಳವಡಿಸಬೇಕು ಎಂದು ಒತ್ತಾಯಿಸಿದರು.

ಅಸೋಸಿಯೇಷನ್‍ ಪ್ರಮುಖರಾದ ನಾಗಶೆಟ್ಟೆಪ್ಪ ದಾಡಗಿ, ಭಗವಂತ ಔದತ್‍ಪುರ, ಬಂಡೆಪ್ಪ, ನಾಗಶೆಟ್ಟಿ ಕಾರಾಮುಂಗಿ, ರಾಜಕುಮಾರ ಗುನ್ನಳ್ಳಿ, ಸೋಮನಾಥ ಗಂಗಶೆಟ್ಟಿ, ಬಾಲಾಜಿ, ವಿಶ್ವನಾಥ ಕಾಜಿ, ಗೋವಿಂದರಾವ್ ಬಿರಾದಾರ, ನರಸಿಂಗ್ ಸಿಂಧೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT