ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದ ಪ್ರಕಾಶ ಉಮ್ಮರಗೆ ಕೈಲಿ ಮೂಡಿದ ಪರಿಸರ ಸ್ನೇಹಿ ಗಣಪನಿಗೆ ಹೆಚ್ಚಿದ ಬೇಡಿಕೆ

ಉಮ್ಮರಗೆ ಕೈಯಲ್ಲಿ ಅರಳಿದ ಗಣೇಶ ಮೂರ್ತಿಗಳು
Last Updated 18 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮದ ಚಿನ್ನದ ಪದಕ ವಿಜೇತ ಕಲಾವಿದ ಪ್ರಕಾಶ ಉಮ್ಮರಗೆ ಕೈಚಳಕದಲ್ಲಿ ವಿಘ್ನ ನಿವಾರಕನ ಆಕರ್ಷಕ ಮೂರ್ತಿಗಳು ಅರಳಿದ್ದು, ಖರೀದಿಗೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ.

ಆಗಸ್ಟ್ 22ರಂದು ನಡೆಯುವ ಗೌರಿ ಗಣೇಶ ಹಬ್ಬದ ಪ್ರಯುಕ್ತ ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶನ ಮೂರ್ತಿಗಳಿಗೆ ನಿಧಾನವಾಗಿ ಜನರಿಂದ ಬೇಡಿಕೆ ಬರುತ್ತಿದ್ದು, ಕಲಾವಿದರ ಶ್ರಮಕ್ಕೆ ಬೆಲೆ ಬಂದಂತಾಗಿದೆ.

ಕೊರೊನಾ ಭೀತಿಯಿಂದಾಗಿ ಈ ವರ್ಷ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ದೊಡ್ಡ ಗಾತ್ರದ ಗಣೇಶ ಮೂರ್ತಿಗಳ ತಯಾರಿಕೆಗೆ ಮುಂದಾಗದೆ, ಹೊಲದಲ್ಲಿನ ಕೆಂಪು ಮಣ್ಣು, ಟೆಂಗಿನ ನಾರನ್ನು ಬಳಸಿ ಇಲಿ, ಶಂಖ, ಪೀಠದ ಮೇಲೆ ಕುಳಿತ ಗಣೇಶ, ಲಾಲ್‍ಬಾಗ್ ರಾಜ್, ದಗಡು, ಪೇಟ್ ಗಣೇಶ ಸೇರಿದಂತೆ ಸುಮಾರು 18 ಮಾದರಿಯ ಮೂರ್ತಿಗಳನ್ನು ತಯಾರಿಸಿದ್ದೇನೆ. ಮೂರ್ತಿಗಳ ಬೆಲೆ ₹100 ರಿಂದ ₹250 ಆಗಿದೆ. ಬಲಗೈ ಕಡೆಯಿರುವ ಸೊಂಡಲಿನ ಗಣೇಶ ಮೂರ್ತಿಗೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಇದೆ. 700 ಗಣೇಶ ಮೂರ್ತಿಗಳ ಮಾರಾಟ ಆಗಿವೆ’ ಎಂದು ಕಲಾವಿದ ಪ್ರಕಾಶ ಉಮ್ಮರಗೆ ತಿಳಿಸುತ್ತಾರೆ. ಲಾಕ್‍ಡೌನ್‍ನಿಂದ ಬೆಂಗಳೂರಿನಲ್ಲಿದ್ದ ಉದ್ಯೋಗ ಕಳೆದುಕೊಂಡು ಗ್ರಾಮಕ್ಕೆ ವಾಪಸ್ಸಾಗಿರುವ ಗೆಳೆಯರಿಗೂ ಅನುಕೂಲವಾಗಲೆಂದು ಚನ್ನಾರೆಡ್ಡಿ, ದಿಲೀಪ ಪಾಟೀಲ, ಭೀಮಾಶಂಕರ ಅವರನ್ನು ಮೂರ್ತಿ ತಯಾರಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಜೂನ್ ತಿಂಗಳ ಕೊನೆಯ ವಾರದಲ್ಲಿ ಮೂರ್ತಿ ತಯಾರಿಕೆ ಆರಂಭಿಸಿದ್ದು ಅಂದಾಜು 2 ಸಾವಿರ ಮೂರ್ತಿಗಳನ್ನು ತಯಾರಿಸಿದ್ದೇವೆ.

ಮೂರ್ತಿ ತಯಾರಿಕೆಗೆ ₹25 ಸಾವಿರ ಖರ್ಚಾಗಿದ್ದು, ಏನಿಲ್ಲವೆಂದರೂ ನಿವ್ವಳ ₹2 ಲಕ್ಷ ಆದಾಯ ಬರುವ ನಿರೀಕ್ಷೆ ಇದೆ ಎಂದು ಸಂತಸದಿಂದ ನುಡಿಯುತ್ತಾರೆ ಪ್ರಕಾಶ ಉಮ್ಮರಗೆ.

ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ನಿರುದ್ಯೋಗಿ ಯುವಕರು ಮೂರ್ತಿಗಳ ತಯಾರಿಕೆಗೆ ಮುಂದಾಗಿದ್ದಾರೆ. ಕಲಾವಿದರಲ್ಲಿ ಅದ್ಭುತ ಪ್ರತಿಭೆ ಇರುತ್ತದೆ. ಹಾಗಾಗಿ, ಅವರಿವರ ಬಳಿ ಸಂಬಳಕ್ಕಾಗಿ ದುಡಿಯದೆ ತಮ್ಮ ಸ್ವಂತ ಕೌಶಲವನ್ನು ಉಪಯೋಗಿಸಿಕೊಂಡು ವಿವಿಧ ಬಗೆಯ ಮೂರ್ತಿ, ಗಿಫ್ಟ್ ಸೇರಿದಂತೆ ಇತರ ಕೆಲಸಗಳನ್ನು ನಿರ್ವಹಿಸಿ ಕೈತುಂಬಾ ಹಣ ಸಂಪಾದಿಸಬಹುದು. ಯುವಕರು ಇಂಥ ಕೆಲಸಗಳಿಗೆ ಮುಂದಾಗಬೇಕು ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT