ಶುಕ್ರವಾರ, ಜನವರಿ 24, 2020
27 °C

ಕಬ್ಬಿಗೆ ಲಘು ಪೋಷಕಾಂಶ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನವಾಡ: ಬೀದರ್ ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಕಬ್ಬು ಕಟಾವು ಆದ ಜಮೀನುಗಳಲ್ಲಿ ಲಘು ಪೋಷಕಾಂಶ ಕೊರತೆ ಕಂಡು ಬಂದಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ರವಿ ಎಸ್. ತಿಳಿಸಿದ್ದಾರೆ.

ಲಘು ಪೋಷಕಾಂಶ ಕೊರತೆಯಿಂದ ಕಬ್ಬಿನ ಚಿಗುರು ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಮರಿಗಳ ಸಂಖ್ಯೆ ಕಡಿಮೆ ಆಗಿ ಶೇ 10 ರಿಂದ ಶೇ 15 ರಷ್ಟು ಇಳುವರಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದ್ದಾರೆ.

ಕಬ್ಬಿಣ ಅಂಶವು ಸಸ್ಯಗಳಲ್ಲಿ ಚಲಿಸುವುದಿಲ್ಲ. ಕಬ್ಬಿನ ಎಲೆಗಳಲ್ಲಿ ಲಘು ಪೋಷಕಾಂಶ ಕೊರತೆ ಹೆಚ್ಚಾದಂತೆ ನರಗಳ ಮಧ್ಯಭಾಗ ಹಳದಿಯಾಗುತ್ತವೆ. ದೂರದಿಂದ ನೋಡಿದರೆ ಬಿಳಿ, ಬಿಳಿ ಬಣ್ಣದಂತೆ ಕಾಣುತ್ತವೆ. ಬೇರುಗಳ ಬೆಳವಣಿಗೆ ಸರಿಯಾಗಿ ಆಗದ ಕಾರಣ ಪೋಷಕಾಂಶ ಹೀರಿಕೊಳ್ಳಲು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ಲಘು ಪೋಷಕಾಂಶ ಕೊರತೆಯು ಹೆಚ್ಚಾಗಿ ಸುಣ್ಣದ ಅಂಶ ಅಧಿಕವಾಗಿರುವ, ಕ್ಷಾರ ಭೂಮಿ (ಮಣ್ಣಿನ ರಸಸಾರ ಹೆಚ್ಚು ಇರುವ ಭೂಮಿ), ಸಾವಯವ ಅಂಶ ಕಡಿಮೆ ಇರುವ ಭೂಮಿ ಹಾಗೂ ನೀರು ಹೆಚ್ಚಾಗಿ ಬಸಿದು ಹೋಗದಿರುವ ಮಣ್ಣಿನಲ್ಲಿ ಕಂಡು ಬರುತ್ತದೆ ಎಂದು ತಿಳಿಸಿದ್ದಾರೆ.

ಲಘು ಪೋಷಕಾಂಶ ಕೊರತೆ ನಿರ್ವಹಣೆಗೆ ಪ್ರತಿ ಎಕರೆ ಜಮೀನಿಗೆ 10 ಕೆ.ಜಿ. ಕಬ್ಬಿಣದ ಸಲ್ಫೇಟ್, 25 ಕೆ.ಜಿ. ಎರೆಗೊಬ್ಬರ ಅಥವಾ ತಿಪ್ಪೆ ಗೊಬ್ಬರ ಮಿಶ್ರಣ ಮಾಡಿ ಭೂಮಿಗೆ ಹಾಕಬೇಕು. ಅಥವಾ ಶೇ 0.25-0.5 ರ ಕಬ್ಬಿಣದ ಸಲ್ಫೇಟ್ ದ್ರಾವಣವನ್ನು ಎಲೆಗಳಿಗೆ ಸಿಂಪಡಿಸಬೇಕು ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)