ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಪ್ರಿಯ ರೈತರಿಗೆ ಉಚಿತ ದೇವಣಿ ಕರು ವಿತರಣೆ

ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಹೇಳಿಕೆ
Last Updated 6 ಜುಲೈ 2021, 10:57 IST
ಅಕ್ಷರ ಗಾತ್ರ

ಬೀದರ್: ‘ಗೋವುಗಳ ಬಗ್ಗೆ ಪ್ರೀತಿ ಇರುವ ರೈತರಿಗೆ ರಾಮಕೃಷ್ಣ ವಿವೇಕಾನಂದ ಆಶ್ರಮ ಉಚಿತ ಆಕಳು ಕರುಗಳನ್ನು ನೀಡಲು ನಿರ್ಧರಿಸಿದೆ. ಪ್ರಾರಂಭಿಕ ಹಂತದಲ್ಲಿ ಐವರು ಕೃಷಿಕರಿಗೆ ಕರುಗಳನ್ನು ವಿತರಿಸಿದೆ’ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ತಿಳಿಸಿದರು.

ಮಠದ ವತಿಯಿಂದ ಆರಂಭಿಸಲಾದ ಗೋಶಾಲೆಯಲ್ಲಿ ಮೊದಲು ಎರಡು ಗೋವುಗಳು ಮಾತ್ರ ಇದ್ದವು. ಇದೀಗ ಅವುಗಳ ಸಂಖ್ಯೆ 60ಕ್ಕೆ ಏರಿದೆ. ಎರಡು ವರ್ಷಗಳ ಅವಧಿಯಲ್ಲಿ 25 ಕರುಗಳು ಜನಿಸಿವೆ. ಗೋಶಾಲೆಯಲ್ಲಿ ಜಾಗದ ಕೊರತೆಯಾಗುತ್ತಿರುವ ಕಾರಣ ರೈತರ ಮೂಲಕ ತಳಿ ಸಂರಕ್ಷಣೆಗೆ ನಿರ್ಧರಿಸಿದ್ದೇವೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

‘ದೇಶಕ್ಕೆ ಇಂದು ಕೃಷಿಯೇ ಮೂಲಾಧಾರವಾಗಿದೆ. ದೇಶದ ಸುಮಾರು 108 ಗೋವು ತಳಿಗಳಲ್ಲಿ ಇಂದು 15 ತಳಿಗಳು ಮಾತ್ರ ನಮ್ಮ ಪರಿಸರದಲ್ಲಿ ಉಳಿದುಕೊಂಡಿದೆ. ದೇಸಿ ತಳಿಗಳ ಸಂರಕ್ಷಣೆಯ ದೃಷ್ಟಿಯಿಂದ ಗೋಶಾಲೆ ಆರಂಭಿಸಲಾಗಿದೆ. ಗೋವುಗಳ ಉತ್ಪನ್ನಗಳಿಂದ ಬಂದ ಆದಾಯವನ್ನು ಗೋವುಗಳ ಸಂರಕ್ಷಣೆಗೆ ಬಳಸಲಾಗುತ್ತಿದೆ’ ಎಂದರು.

‘ಗೋಶಾಲೆ ರೈತರಿಗೆ ಸ್ಫೂರ್ತಿಯ ಕೇಂದ್ರವಾಗಬೇಕು ಎನ್ನುವುದೇ ಆಶ್ರಮದ ಉದ್ದೇಶವಾಗಿದೆ. ಕಸಾಯಿ ಖಾನೆಗಳಿಗೆ ಸಾಗಿಸಬಾರದು. ತಳಿ ಅಭಿವೃದ್ಧಿ ಪಡಿಸಬೇಕು ಎನ್ನುವುದು ಸೇರಿದಂತೆ ಕೆಲ ಷರತ್ತುಗಳನ್ನು ವಿಧಿಸಿ ರೈತರಿಗೆ ಉಚಿತವಾಗಿ ಕರುಗಳನ್ನು ಕೊಡಲಾಗುತ್ತಿದೆ’ ಎಂದು ತಿಳಿಸಿದರು.

’ದೇವಣಿ ಹಸುವಿನ ಹಾಲಿಗೆ ಬಹಳ ಬೇಡಿಕೆ ಇದೆ. ದೇವಣಿ ಹಾಲಿನ ಮಹತ್ವ ಅರಿತವರು ಮಠದ ಗೋಶಾಲೆಗೆ ಬಂದು ಒಯ್ಯುತ್ತಿದ್ದಾರೆ. ಪ್ರಸ್ತುತ ಪ್ರತಿ ಲೀಟರ್‌ಗೆ ₹ 80ರಂತೆ ಮಾರಾಟವಾಗುತ್ತಿದೆ. ತುಪ್ಪ ಪ್ರತಿ ಕೆ.ಜಿಗೆ ₹ 2,800 ಇದೆ. ಗೋವುಗಳ ಗೊಬ್ಬರದಿಂದ ಅಗರಬತ್ತಿ ಹಾಗೂ ಧೂಪ ತಯಾರು ಮಾಡಲಾಗುತ್ತಿದೆ. ಬೇಡಿಕೆ ಅಧಿಕ ಇದೆ. ಜಾಗದ ಕೊರತೆ ಇರುವ ಕಾರಣ ಹೆಚ್ಚು ಉತ್ಪಾದನೆ ಸಾಧ್ಯವಾಗುತ್ತಿಲ್ಲ’ ಎಂದರು.

‘ಆಶ್ರಮದಲ್ಲಿ ಕಾಂಗ್ರೆಜ್, ದೇವಣಿ ಹಾಗೂ ಗಿರ್‌ ತಳಿಯ ಹಸುಗಳಿವೆ. ಖಿಲಾರಿ ಸೇರಿದಂತೆ ಇನ್ನೂ ಒಂದೆರಡು ತಳಿಗಳನ್ನು ತಂದು ಇಲ್ಲಿ ಸಾಕುವ ಯೋಜನೆ ಇದೆ’ ಎಂದು ತಿಳಿಸಿದರು.

ಬೆಂಗಳೂರಿನ ಯಲಹಂಕದ ರಾಮಕೃಷ್ಣ ವೇದಾಂತ ಆಶ್ರಮದ ಅಧ್ಯಕ್ಷ ಅಭಯಾನಂದ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT