ಸೋಮವಾರ, ಜನವರಿ 25, 2021
19 °C
ನಗರದ ಮಧ್ಯ ಭಾಗದಲ್ಲೇ ನಿರ್ಮಿಸಲು ಶಾಸಕ ರಹೀಂಖಾನ್ ಒತ್ತಾಯ

ಜಿಲ್ಲಾಡಳಿತ ಕಚೇರಿ ಸಂಕೀರ್ಣ: ಮುಖ್ಯಮಂತ್ರಿಯಿಂದ ಕ್ರಮದ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ನಗರದ ಮಧ್ಯಭಾಗದಲ್ಲಿರುವ ಸದ್ಯದ ಜಿಲ್ಲಾಧಿಕಾರಿ ಕಚೇರಿ ಸ್ಥಳದಲ್ಲೇ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸುವ ಬೇಡಿಕೆ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ನಗರದಲ್ಲಿ ನಡೆದ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ
ತಾವು ಸಲ್ಲಿಸಿದ ಮನವಿಯಲ್ಲಿನ ಎಲ್ಲ ಅಂಶಗಳನ್ನು ತಿಳಿದುಕೊಂಡ ಮುಖ್ಯಮಂತ್ರಿಯವರು, ಬೆಂಗಳೂರಿಗೆ ಬಂದು ಚರ್ಚಿಸುವಂತೆ ತಿಳಿಸಿದ್ದಾರೆ ಎಂದು ಶಾಸಕ ರಹೀಂ ಖಾನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸಲು ಈಗಿರುವ ಜಿಲ್ಲಾಧಿಕಾರಿ ಕಚೇರಿ ಸ್ಥಳವೇ ಸೂಕ್ತವಾಗಿದೆ. ಇಲ್ಲಿ ಸಂಕೀರ್ಣ ನಿರ್ಮಿಸುವುದರಿಂದ ಜನರಿಗೆ ಆಗುವ ಅನುಕೂಲಗಳ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸ್ಥಳದಲ್ಲೆ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸಲು ಹಿಂದಿನ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ತೀರ್ಮಾನಿಸಿತ್ತು. ಶಂಕುಸ್ಥಾಪನೆಯನ್ನೂ ನೆರವೇರಿಸಲಾಗಿತ್ತು. ಕಟ್ಟಡ ನಿರ್ಮಾಣಕ್ಕೆ ಅನುದಾನವೂ ಲಭ್ಯವಿರುವ ಸಂಗತಿಯನ್ನು ಮುಖ್ಯಮಂತ್ರಿಯವರಿಗೆ ತಿಳಿಸಲಾಗಿದೆ. ಅನುದಾನ ಲಭ್ಯವಿದ್ದ ನಂತರವೂ ವಿಳಂಬ ಆಗುತ್ತಿರುವ ಬಗ್ಗೆ ಸ್ವತ: ಮುಖ್ಯಮಂತ್ರಿ ಅಚ್ಚರಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಶೀಘ್ರದಲ್ಲಿಯೇ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗೆ ಮತ್ತೊಂದು ಬಾರಿ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಈಗಿರುವ ಜಿಲ್ಲಾಧಿಕಾರಿ ಕಚೇರಿ ಆವರಣ, ಹಿಂಭಾಗದಲ್ಲಿ ಇರುವ ಶಿಕ್ಷಣ ಇಲಾಖೆ ಹಾಗೂ ಕೃಷಿ ಇಲಾಖೆ ಕಚೇರಿಗಳ ಸ್ಥಳ ಬಳಸಿಕೊಂಡು ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸುವಂತೆ ಮುಖ್ಯಮಂತ್ರಿ ಅವರನ್ನು ಕೋರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಮೇಲಿಂದ ಮೇಲೆ ಸ್ಥಳ ಬದಲಾವಣೆ ಮಾಡಲಾಗುತ್ತಿದೆ. ಹೈದರಾಬಾದ್ ರಸ್ತೆ, ಅಗ್ರಹಾರ, ಕೊಳಾರ ಬಳಿಯ ರೇಷ್ಮೆ ಇಲಾಖೆ ಆವರಣ ಹೀಗೆ ಹಲವು ಸ್ಥಳಗಳನ್ನು ಪ್ರಸ್ತಾಪಿಸಲಾಗುತ್ತಿದೆ. ಈ ಪೈಕಿ ಯಾವ ಸ್ಥಳವೂ ಸಂಕೀರ್ಣ ನಿರ್ಮಾಣಕ್ಕೆ ಸೂಕ್ತವಾಗಿಲ್ಲ ಎಂದು ತಿಳಿಸಿದ್ದಾರೆ.

ಕಲಬುರ್ಗಿ ರಸ್ತೆಯಲ್ಲಿ ಕೊಳಾರ ಬಳಿಯ ರೇಷ್ಮೆ ಇಲಾಖೆ ಸ್ಥಳದಲ್ಲಿ ಕಚೇರಿ ಸಂಕೀರ್ಣ ನಿರ್ಮಿಸುವುದು ಸರಿಯಲ್ಲ. ಈ ಸ್ಥಳವನ್ನು ಬೀದರ್ ತೊಟಗಾರಿಕೆ ಕಾಲೇಜಿಗೆ ಕೊಡಲು ಈಗಾಗಲೇ ಸರ್ಕಾರದ ಮಟ್ಟದಲ್ಲಿಯೇ ತೀರ್ಮಾನ ಆಗಿದೆ. ಇಲ್ಲಿರುವ 70 ಎಕರೆ ಜಮೀನಿನ ಪೈಕಿ 40 ಎಕರೆ ಜಮೀನು, ಕಟ್ಟಡದ ಒಂದು ಭಾಗ, ಶೀತಗೃಹ ಹಾಗೂ ಪ್ರಯೋಗಾಲಯ ಕಟ್ಟಡವನ್ನು ತೋಟಗಾರಿಕೆ ಕಾಲೇಜಿಗೆ ನೀಡಲು ನಿರ್ಧರಿಸಲಾಗಿದೆ. ಈ ಜಮೀನು ಹಸ್ತಾಂತರ ಮಾಡದಿದ್ದಲ್ಲಿ ತೋಟಗಾರಿಕೆ ಕಾಲೇಜಿನ ಮಾನ್ಯತೆ ರದ್ದಾಗಲಿದೆ. ಇದರಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಶಾಸಕರು ಕಳವಳ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸ್ಥಳವೇ ಸಂಕೀರ್ಣಕ್ಕೆ ಸೂಕ್ತವಾಗಿದ್ದು, ಮುಖ್ಯಮಂತ್ರಿ ಸೂಕ್ತ ತೀರ್ಮಾನ ಕೈಗೊಳ್ಳುವ ವಿಶ್ವಾಸ ಇದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು