ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪೂರ: ನೀರಿನ ಸಮಸ್ಯೆ ಉಲ್ಬಣ

ಮಲಿನ ಚರಂಡಿ; ಸಾಂಕ್ರಾಮಿಕ ರೋಗ ಭೀತಿಯಲ್ಲಿ ಸಾರ್ವಜನಿಕರು
Last Updated 21 ಏಪ್ರಿಲ್ 2021, 5:34 IST
ಅಕ್ಷರ ಗಾತ್ರ

ಭಾಲ್ಕಿ: ‘ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಿಸಿಲಿನ ತೀವ್ರತೆಯ ಜೊತೆಗೆ ಉಲ್ಬಣಿಸುತ್ತಿರುವ ನೀರಿನ ಸಮಸ್ಯೆ, ಸದಾ ದುರ್ಗ೦ಧ ಸೂಸುವ ಮಲಿನ ಚರಂಡಿ ನೆಮ್ಮದಿಯ ಜೀವನಕ್ಕೆ ತೊಡಕಾಗಿವೆ...’

–ಇದು ತಾಲ್ಲೂಕಿನ ಮಳಚಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾನಾಪೂರ ಗ್ರಾಮದ ಸರ್ಕಾರಿ ಶಾಲೆ ಸಮೀಪದ ಓಣಿಯ ಜನರ ಹೇಳಿಕೆ.

‘ನಮ್ಮ ಓಣಿಯಲ್ಲಿ ಈಚೆಗೆ ಕೊರೆದ ಕೊಳವೆಬಾವಿಗೆ ಸ್ವಲ್ಪಮಟ್ಟಿಗೆ ನೀರು ಇದೆ. ಆದರೆ ಮೋಟರ್‌ ಅಳವಡಿಸಿಲ್ಲ. ಮನೆ-ಮನೆಗೆ ನಳಗಳ ವ್ಯವಸ್ಥೆ ಇದ್ದರೂ ಮೂರ್ನಾಲ್ಕು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಇದರಿಂದ ದನ-ಕರುಗಳಿಗೆ, ನಿತ್ಯದ ಕಾರ್ಯಗಳಿಗೆ ಅಗತ್ಯವಾಗಿರುವ ನೀರನ್ನು ತರಲು ಅರ್ಧ ಕಿ.ಮೀ ದೂರದ ಮಲ್ಲಪ್ಪ ಗೌಡರ ಹೊಲಕ್ಕೆ ಹೋಗಿ ನೀರು ತರಬೇಕಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲು ವಾಟರ್‌ ಮ್ಯಾನ್‌ಗೆ ಹೇಳಿದರೆ ಬೇಜವಬ್ದಾರಿಯಿಂದ ಉತ್ತರ ನೀಡುತ್ತಾರೆ. ಇತರ ಓಣಿಗಳಂತೆ ಸಮ ಪ್ರಮಾಣದಲ್ಲಿ ನೀರು ಹರಿಸುವುದಿಲ್ಲ’ ಎಂದು ಲಲಿತಾಬಾಯಿ, ಮೋಹಿತಾ, ರೇಣುಕಾ, ಸತೀಶ ಅಸಮಾಧಾನ ಹೊರ ಹಾಕುತ್ತಾರೆ.

‘ಸಿ.ಸಿ ರಸ್ತೆ ಜೊತೆಗೆ ಗುಣಮಟ್ಟದ ಚರಂಡಿ ನಿರ್ಮಿಸಲಾಗಿದೆ. ಆದರೆ, ಸುಮಾರು ವರ್ಷಗಳಿಂದ ಚರಂಡಿ ಸ್ವಚ್ಛಗೊಳಿಸಿಲ್ಲ. ಹಾಗಾಗಿ, ಚರಂಡಿಯಲ್ಲಿ ನೀರು ಸಂಗ್ರಹಗೊಂಡು ಗಬ್ಬು ನಾರುತ್ತಿದೆ. ಇದರಿಂದ ಎಲ್ಲೆಡೆ ದುರ್ನಾತ ಸೂಸುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಚಿಕುನ್‌ಗುನ್ಯ ಸೇರಿದಂತೆ ಇತರ ರೋಗಗಳ ಭಯ ನಮ್ಮನ್ನು ಬಹುವಾಗಿ ಕಾಡುತ್ತಿದೆ’ ಎಂದು ಅವರು ಅಳಲು ತೋಡಿಕೊಂಡರು.

‘ಸದ್ಯ ಎಲ್ಲೆಡೆ ಕೊರೊನಾ ಸೋಂಕು ಪಸರುವಿಕೆ ಹೆಚ್ಚಾಗಿದೆ. ಇಂತಹ ತುರ್ತು ಪರಿಸ್ಥಿಯಲ್ಲಿಯೂ ಚರಂಡಿ ಸುತ್ತಮುತ್ತ ಬ್ಲೀಚಿಂಗ್‌ ಪೌಡರ್‌ ಸಿಂಪಡಿಸಿಲ್ಲ. ಈಚೆಗೆ ಕೆಲ ಕಡೆ ಚರಂಡಿ ಸ್ವಚ್ಛಗೊಳಿಸಿದ್ದರೂ, ಹೊಲಸು ಮಾತ್ರ ಚರಂಡಿ ಪಕ್ಕವೇ ಸಂಗ್ರಹಿಸಿದ್ದಾರೆ. ಇನ್ನು ಕೆಲ ಮನೆಯ ಮುಂಭಾಗದಲ್ಲಿರುವ ಚರಂಡಿಯಲ್ಲಿ ಮಣ್ಣು ತುಂಬಿದ್ದು, ನೀರು ಹರಿಯಲ್ಲ’ ಎಂದು ಚರಂಡಿ ಅವ್ಯವಸ್ಥೆಯನ್ನು ಓಣಿ ನಿವಾಸಿಗಳು ತಿಳಿಸುತ್ತಾರೆ.

‘ನೀರಿನ ಸಮಸ್ಯೆ ಪರಿಹಾರಕ್ಕೆ ಸಂಬಂಧಪಟ್ಟ ಜನಪ್ರತಿನಿಧಿ, ಅಧಿಕಾರಿಗಳು ಶೀಘ್ರದಲ್ಲಿ ನೂತನ ಕೊಳವೆಬಾವಿ ಕೊರೆಯಿಸಿ, ಸಣ್ಣ ನೀರಿನ ಟ್ಯಾಂಕ್‌ ಅಳವಡಿಸಬೇಕು. ಚರಂಡಿಯನ್ನು ಕಾಲ-ಕಾಲಕ್ಕೆ ಸ್ವಚ್ಛ ಗೊಳಿಸಬೇಕು. ಸದ್ಯ ಹಾಳುಬಿದ್ದಿರುವ ನೀರಿನ ಟ್ಯಾಂಕ್‌ ಕಾರ್ಯ ನಿರ್ವಹಣೆಗೆ ವ್ಯವಸ್ಥೆ ಮಾಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT