ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್ | ಬೇಸಿಗೆಯಲ್ಲೂ ಶುದ್ಧ ನೀರು ಪೂರೈಕೆ

ಅಂತರ್ಜಲ ಹೆಚ್ಚಿಸುವಲ್ಲಿ ಪಂಚಾಯಿತಿಯಿಂದ ಮಹತ್ವದ ಹೆಜ್ಜೆ
Last Updated 10 ಮೇ 2020, 19:45 IST
ಅಕ್ಷರ ಗಾತ್ರ

ಔರಾದ್: ಬೇಸಿಗೆಯಲ್ಲಿ ಸದಾ ನೀರಿನ ಸಮಸ್ಯೆ ಎದುರಿಸುತ್ತಿದ್ದ ತಾಲ್ಲೂಕಿನ ಜೋಜನಾ ಗ್ರಾಮದ ನಿವಾಸಿಗಳಿಗೆ ಈಗ ಶುದ್ಧ ಕುಡಿಯುವ ನೀರಿನ ಭಾಗ್ಯ ಸಿಕ್ಕಿದೆ.

ಜನರ ಸಹಕಾರ ಹಾಗೂ ಅಧಿಕಾರಿಗಳ ಕಾಳಜಿಯಿಂದಾಗಿ ಜೋಜನಾ ಗ್ರಾಮಸ್ಥರ ನೀರಿನ ದಾಹ ನೀಗಿದೆ.

ರಿಲಯನ್ಸ್ ಫೌಂಡೇಶನ್ ನೆರವಿನಿಂದ ₹7.21 ಲಕ್ಷ ವೆಚ್ಚದಲ್ಲಿ ಇಲ್ಲಿ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ಜನರಿಗೆ ಅನುಕೂಲವಾಗಿದೆ. 2 ಸಾವಿರ ಲೀಟರ್ ಸಾಮರ್ಥ್ಯದ ಈ ಘಟಕದ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿ ನೋಡಿಕೊಳ್ಳುತ್ತದೆ. ₹5 ನಾಣ್ಯ ಹಾಕಿದರೆ 20 ಲೀಟರ್ ನೀರು ಬರುತ್ತದೆ. ನಿತ್ಯ 1,000 ರಿಂದ 1,500 ಲೀಟರ್ ನೀರು ಮಾರಾಟವಾಗುತ್ತದೆ. ಈ ಹಣವನ್ನು ಶುದ್ಧೀಕರಣ ಘಟಕದ ನಿರ್ವಹಣೆಗೆ ಬಳಕೆ ಮಾಡಲಾಗುತ್ತದೆ.

‘ಶುದ್ಧೀಕರಣ ಘಟಕ ಸ್ಥಾಪಿಸಿದಾಗಿನಿಂದ ನಮ್ಮ ಊರಿನ ನೀರಿನ ಸಮಸ್ಯೆ ಬಗೆಹರಿದಿದೆ. ನಾಗೂರ, ಬೋರ್ಗಾ ಹಾಗೂ ಸಂತಪುರ ಗ್ರಾಮಗಳ ಜನರು ಇಲ್ಲಿಗೆ ಬಂದು ನೀರು ಕೊಂಡೊಯ್ಯುತ್ತಾರೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಘಾಳೆರೆಡ್ಡಿ ಹೇಳುತ್ತಾರೆ.

‘ಜೋಜನಾ ಸುತ್ತಲಿನ ಗ್ರಾಮಗಳಲ್ಲಿ ತೀವ್ರ ತರವಾದ ನೀರಿನ ಸಮಸ್ಯೆ ಇತ್ತು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ನೀಡಿದ ₹10 ಲಕ್ಷ ನೆರವು ಹಾಗೂ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಿ ₹28 ಲಕ್ಷ ಖರ್ಚು ಮಾಡಿ ಕೆರೆ ನಿರ್ಮಾಣ ಮಾಡಲಾಗಿದೆ. ಜೋಜನಾ ಗ್ರಾಮದ ಸಮೀಪದ ಕಿರು ನಾಲೆಯ ನೀರನ್ನು ಈ ಕೆರೆಗೆ ತುಂಬಿಸಲಾಗುತ್ತದೆ. ರಿಲಯನ್ಸ್ ಸಹಯೋಗದಲ್ಲಿ 10ಕ್ಕೂ ಹೆಚ್ಚು ತೆರೆದ ಬಾವಿ, ಚೆಕ್‌ಡ್ಯಾಂ, ಗೋಕಟ್ಟೆಗಳನ್ನು ಕಟ್ಟಲಾಗಿದೆ. ಈ ಎಲ್ಲದರ ಪ್ರತಿಫಲವಾಗಿ ಊರಿನ ಬಹುತೇಕ ಕೊಳವೆ ಬಾವಿ, ತೆರೆದ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಇದರಿಂದ ಸಾಕಷ್ಟು ರೈತರಿಗೆ ಅನುಕೂಲವಾಗಿದೆ. ಬೇಸಿಗೆಯಲ್ಲಿ ಎದುರಾಗುತ್ತಿದ್ದ ನೀರಿನ ಸಮಸ್ಯೆಯಿಂದ ಮುಕ್ತಿ ಸಿಕ್ಕಿದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ ತಿಳಿಸುತ್ತಾರೆ.

‘ನೀರು ಸಂಗ್ರಹಣೆ ಮತ್ತು ನಿರ್ವಹಣೆಯಲ್ಲಿ ನಮ್ಮ ಪಂಚಾಯಿತಿ ಮಾದರಿ ಎನಿಸಿದೆ. ನವದೆಹಲಿಯ ಸಂಸ್ಥೆಯೊಂದು ಈ ಕುರಿತು ಸರ್ವೆ ಮಾಡಿ ನಮ್ಮ ಪಂಚಾಯಿತಿಗೆ ರಾಷ್ಟ್ರಮಟ್ಟದ ಪ್ರತಿಷ್ಠಿತ ‘ಸ್ಕೋಚ್ ಪ್ರಶಸ್ತಿ’ ನೀಡಿ ಗೌರವಿಸಿದೆ. ಭಾರತ ಜಲಶಕ್ತಿ ಮಂಡಳಿ ಈಚೆಗೆ ನಡೆಸಿದ ಸರ್ವೆಯಲ್ಲಿ ಆಯ್ಕೆಯಾದ ದಕ್ಷಿಣ ಭಾರತದ ಐದು ಗ್ರಾಮ ಪಂಚಾಯಿತಿಗಳ ಪೈಕಿ ಜೋಜನಾ ಕೂಡ ಒಂದು. ಇದು ನಮ್ಮ ಪಂಚಾಯಿತಿಯ ಕಾರ್ಯಕ್ಕೆ ಸಂದ ಗೌರವ’ ಎಂದು ಅವರು ತಿಳಿಸಿದ್ದಾರೆ.

‘ಮೊದಲು ನಮ್ಮ ಊರಿನಲ್ಲಿ ಕುಡಿಯುವ ನೀರಿಗಾಗಿ ಸಾಕಷ್ಟು ಕಷ್ಟ ಪಡಬೇಕಿತ್ತು. ಈಗ ಎರಡು ವರ್ಷಗಳಿಂದ ಸಮಸ್ಯೆ ಕಡಿಮೆಯಾಗಿದೆ. ಶೇ.90ರಷ್ಟು ಜನರಿಗೆ ಶುದ್ಧ ನೀರು ಸಿಗುತ್ತಿದೆ’ ಎಂದು ಜೋಜನಾ ಗ್ರಾಮದ ಬಾಬಶೆಟ್ಟಿ ಹೇಳುತ್ತಾರೆ.

*
ನೀರು ಸಂಗ್ರಹಣೆ ಮತ್ತು ನಿರ್ವಹಣೆಯಲ್ಲಿ ನಮ್ಮ ಪಂಚಾಯಿತಿ ಮಾಡಿದ ಕೆಲಸಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇದರಿಂದ ನಮಗೆ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ಸಿಕ್ಕಿದೆ.
-ಸಂತೋಷ ಪಾಟೀಲ, ಪಿಡಿಒ ಜೋಜನಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT