ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ತಾಲ್ಲೂಕುಗಳಿಗೆ ಅನುದಾನ ಸಮಾನ ಹಂಚಿಕೆ: ಸಚಿವ ಈಶ್ವರ ಖಂಡ್ರೆ

ಜನಸ್ಪಂದನ ಕಾರ್ಯಕ್ರಮದಲ್ಲಿ ಮನವಿಗಳ ಮಹಾಪುರ, ನೂಕು ನುಗ್ಗಲು
Published 9 ಫೆಬ್ರುವರಿ 2024, 18:28 IST
Last Updated 9 ಫೆಬ್ರುವರಿ 2024, 18:28 IST
ಅಕ್ಷರ ಗಾತ್ರ

ಔರಾದ್: ‘ನಮ್ಮ ಕಾಂಗ್ರೆಸ್ ಸರ್ಕಾರ ಬಂದ ನಂತರ ಜಿಲ್ಲೆಯ ಎಲ್ಲ ಎಂಟು ತಾಲ್ಲೂಕು ಅಭಿವೃದ್ಧಿಗೆ ಒಂದೇ ರೀತಿಯ ಆದ್ಯತೆ ನೀಡಲಾಗುತ್ತಿದೆ. ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೂ ಸಮಾನವಾಗಿ ಅನುದಾನ ನೀಡುತ್ತಿದ್ದೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಪಟ್ಟಣದ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜಿಲ್ಲಾಡಳಿತ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಜನಸ್ಪಂದನ ಹಾಗೂ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಜಿಲ್ಲೆಗೆ ಬಂದ ₹ 400 ಕೋಟಿ ಪೈಕಿ ನಮ್ಮ ಶಾಸಕರು ಇಲ್ಲದಿದ್ದರೂ ಔರಾದ್ ಕ್ಷೇತ್ರಕ್ಕೆ ₹100 ಕೋಟಿ ಅನುದಾನ ಕೊಡಲಾಗಿದೆ. ಇಲ್ಲಿ ಎರಡು ವಸತಿ ಶಾಲೆ ಕಟ್ಟಡಕ್ಕೆ ₹ 30 ಕೋಟಿ, ಕೋರ್ಟ್ ಕಟ್ಟಡಕ್ಕೆ ₹13 ಕೋಟಿ ಹಾಗೂ ಔರಾದ್ ಪಟ್ಟಣಕ್ಕೆ ಕಾರಂಜಾದಿಂದ ನೀರು ಪೂರೈಸಲು ₹ 90 ಕೋಟಿ ಅನುದಾನ ನೀಡಿದ್ದೇವೆ’ ಎಂದು ಹೇಳಿದರು.

‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಒಂಬತ್ತು ತಿಂಗಳಲ್ಲಿ ನೀಡಿದ ಎಲ್ಲ ಐದು ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಜಿಲ್ಲೆಯ 3.50 ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯುತ್ತಿದ್ದಾರೆ. ಇದಕ್ಕಾಗಿ ವರ್ಷಕ್ಕೆ ₹ 800 ಕೋಟಿ ಅನುದಾನ ಬೇಕಾಗುತ್ತದೆ. ಗೃಹ ಜ್ಯೋತಿ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ ₹ 500 ರಿಂದ 1500 ವರೆಗೆ ಉಳಿತಾಯವಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ ₹ 170 ಹಣ ನೀಡುತ್ತಿದ್ದೇವೆ. ಶಕ್ತಿ ಯೋಜನೆಯಡಿ ಜಿಲ್ಲೆಯ 1.7 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಯುವ ನಿಧಿ ಯೋಜನೆಯಡಿ 5 ಸಾವಿರ ಯುವಕರು ಹೆಸರು ನೋಂದಾಯಿಸಿದ್ದು ಅವರಿಗೂ ಮಾಸಿಕ ಗೌರವಧನ ನೀಡಲಾಗುವುದು’ ಎಂದು ತಿಳಿಸಿದರು.

ಜನಸ್ನೇಹಿ ಆಡಳಿತ ನಡೆಸುವ ಉದ್ದೇಶದಿಂದ ಸರ್ಕಾರ ಎಲ್ಲ ತಾಲ್ಲೂಕುಗಳಲ್ಲಿ ಈ ರೀತಿಯ ಜನಸ್ಪಂದನೆ ಸಭೆ ನಡೆಸುತ್ತಿದೆ. ಸಾಧ್ಯವಾದಷ್ಟು ಸಮಸ್ಯೆಗಳು ಸ್ಥಳದಲ್ಲೇ ಪರಿಹರಿಸಲಾಗುತ್ತಿದೆ. ಉಳಿದ ಅಹವಾಲು ವಾರದಲ್ಲಿ ಪರಿಹಾರವಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಸಭೆಯಲ್ಲಿ ತಿಳಿಸಿದರು.

ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಗಿರೀಶ್ ಬದೋಲೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ವಾನತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಸ್. ತಹಶೀಲ್ದಾರ್ ನಾಗಯ್ಯ ಹಿರೇಮಠ ಸೇರಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಔರಾದ್ ಪಟ್ಟಣದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಅಹವಾಲು ಸಲ್ಲಿಸಲು ಮುಗಿಬಿದ್ದ ಜನ
ಔರಾದ್ ಪಟ್ಟಣದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಅಹವಾಲು ಸಲ್ಲಿಸಲು ಮುಗಿಬಿದ್ದ ಜನ
ಗ್ಯಾರಂಟಿ ಯೋಜನೆ ಲಾಭ ಜನರಿಗೆ ತಲುಪಿದೆ. ಹೀಗಾಗಿ ನುಡಿದಂತೆ ನಡೆದಿದ್ದೇವೆ ಎಂಬ ಖುಷಿ ನಮಗಿದೆ. ಸುಳ್ಳು ಭರವಸೆಗೆ ಜನ ನಂಬಬಾರದು. ಧರ್ಮ ಜಾತಿ ಹೆಸರಿನಲ್ಲಿ ಜನರನ್ನು ಎತ್ತಿ ಕಟ್ಟುವ ಬಿಜೆಪಿಯನ್ನು ರಾಜ್ಯದ ಜನ ತಿರಸ್ಕರಿಸಿ ಕಾಂಗ್ರೆಸ್ ಜತೆ ಇದ್ದಾರೆ
ಈಶ್ವರ ಬಿ.ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ

ಕಾರ್ಯಕ್ರಮ ಎರಡು ತಾಸು ವಿಳಂಬ

ಜಿಲ್ಲಾಡಳಿತ ಶುಕ್ರವಾರ ಇಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಜನಸ್ಪಂದನ ಸಭೆಗೆ ಮನವಿಗಳ ಮಹಾಪುರವೇ ಹರಿದು ಬಂತು. ಬೆಳಿಗ್ಗೆ 11 ಗಂಟೆಗೆ ನಿಗದಿಪಡಿಸಿದ್ದ ಜನಸ್ಪಂದನೆ ಸಭೆ ಮಧ್ಯಾಹ್ನ 1 ಗಂಟೆಗೆ ಆರಂಭವಾಯಿತು.

ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಮುಗಿಯಲು ಒಂದು ಗಂಟೆ ಸಮಯ ತೆಗೆದುಕೊಂಡಿತು. ನಂತರ ಅದೇ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ಜನರ ಅಹವಾಲು ಸ್ವೀಕರಿಸುವ ವೇಳೆ ಉಂಟಾದ ನೂಕು ನುಗ್ಗಲು ನಿಭಾಯಿಸಲು ಪೊಲೀಸರು ಹರಸಹಾಸಪಟ್ಟರು.

ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಅವರೇ ಸರತಿಯಲ್ಲಿ ಬರುವಂತೆ ನೋಡಿಕೊಂಡರು. ಕಂದಾಯ-41 ತಾಲ್ಲೂಕು ಪಂಚಾಯಿತಿ-33 ಭೂ ದಾಖಲೆ-13 ಸಮಾಜ ಕಲ್ಯಾಣ-15 ಅರಣ್ಯ-6 ಕೃಷಿ-5 ಲೋಕೋಪಯೋಗಿ-5 ಶಿಕ್ಷಣ-7 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-5 ಸೇರಿದಂತೆ ಒಟ್ಟು 177 ಅಹವಾಲು ದಾಖಲಾಗಿವೆ. ಗ್ಯಾರಂಟಿ ಯೋಜನೆಯ ಐದು ಹಾಗೂ ಕಂದಾಯ ಇಲಾಖೆಯ ಎರಡು ಸೇರಿದಂತೆ ಒಟ್ಟು ಏಳು ಕೌಂಟರ್ ತೆರೆಯಲಾಗಿತ್ತು. ಜನ ಬೆಳಿಗ್ಗೆ 10 ಗಂಟೆಯಿಂದಲೇ ಬಂದು ಅರ್ಜಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT